ಕಾಂಗ್ರೆಸ್ ಬಿಟ್ಟು ಹೊರಟ ಸಿ. ಎಂ. ಇಬ್ರಾಹಿಂ; ಪಕ್ಷಕ್ಕೆ ಭಾರೀ ನಷ್ಟ!
ಬೆಂಗಳೂರು, ಜನವರಿ 31; ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಪಕ್ಷ ತೊರೆಯಲು ಸಿದ್ದರಾಗಿರುವ ಮುಸ್ಲಿಂ ಸಮುದಾಯದ ಪ್ರಭಾವಿ ಮುಖಂಡ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ನಡೆ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ತೊಡರಾಗುವ ಲಕ್ಷಣಗಳಿವೆ. ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲಿರುವ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ 'ಅಲಿಂಗ' ಸಮುದಾಯಗಳನ್ನು ಸಂಘಟಿಸುವುದಾಗಿ ಹೇಳಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಅಸ್ತ್ರವನ್ನು ಬಳಸಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ 5 ವರ್ಷ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಜೆಡಿಎಸ್‍ನಿಂದ ಹೊರಬಿದ್ದಿದ್ದ ಸಿದ್ದರಾಮಯ್ಯ ರಾಜ್ಯಾದ್ಯಂತ ಅಹಿಂದವನ್ನು ಸಂಘಟಿಸಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡಿದವರು. ಅದೇ ಕಾಲಕ್ಕೆ ರೆಡ್ಡಿಗಳ ಅಕ್ರಮ ಗಣಿಗಾರಿಕೆ ಪರಾಕಾಷ್ಟೆ ತಲುಪಿತ್ತು.
ಮತ್ತೊಂದು ಕಡೆ ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಪ್ರಭಾವಿ ನಾಯಕರ ವಿರುದ್ಧ ಸಿದ್ದರಾಮಯ್ಯರನ್ನು ಅಹಿಂದ ಮೂಲಕ 2ನೇ ದೇವರಾಜ ಅರಸು ರೂಪದಲ್ಲಿ ಕಾಣಲು ಜನತೆ ತುದಿಗಾಲಲ್ಲಿ ನಿಂತಿದ್ದರು. ಸಿದ್ದರಾಮಯ್ಯನವರಿಗೆ ಬಲಗೈನಂತಿದ್ದ ಇಬ್ರಾಹಿಂ ಭಾಷಣ ಕೇಳಲು ಸಾವಿರಾರು ಜನ ಸೇರುತ್ತಿದ್ದರು. ಶರಣರ ವಚನಗಳು, ಸೂಫಿ ಸಂತರ ಸಂದೇಶಗಳು, ಹಾವಭಾವ, ಟೀಕೆ ಟಿಪ್ಪಣಿ ಮೂಲಕ ಎಲ್ಲರ ಜನ್ಮ ಜಾಲಾಡುತ್ತಿದ್ದರು ಇಬ್ರಾಹಿಂ.
ಇದೆಲ್ಲದರ ಪರಿಣಾಮವೇ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರ ಹಿಡಿಯಿತು. ಬಹುತೇಕ ರಾಜಕೀಯ ಜೀವನವನ್ನು ಸಿದ್ದರಾಮಯ್ಯ ಗರಡಿಯಲ್ಲೇ ಕಳೆದಿರುವ ಇಬ್ರಾಹಿಂ ಇದೀಗ ಸಿದ್ದರಾಮಯ್ಯ ಅಸ್ತ್ರ ಬಳಸಲು ಮುಂದಾಗಿರುವುದು ಹೊಸ ಬೆಳವಣಿಗೆ. ಅಂದು ಅಹಿಂದದ ಮೂಲಕ ತಮ್ಮ ರಾಜಕೀಯ ಜೀವನ ಪುನರ್ಜನ್ಮ ಪಡೆದವರಲ್ಲಿ ಸಿದ್ದರಾಮಯ್ಯ. ಈಗ ಇಬ್ರಾಹಿಂ ಕೂಡ ಅಹಿಂದ ಬದಲಿಗೆ ಅಲಿಂಗ (ಅಲ್ಪ ಸಂಖ್ಯಾತ-ಲಿಂಗಾಯತ) ಅಸ್ತ್ರ ಬಳಸುತ್ತಿದ್ದಾರೆ.

ಏನಿದು ಅಲಿಂಗ ಚಳವಳಿ
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದೇ ತೆರೆಮರೆಗೆ ಸರಿದಿರುವ ಅಲ್ಪಸಂಖ್ಯಾತರು, ಲಿಂಗಾಯಿತರು ಮತ್ತು ಒಕ್ಕಲಿಗ ಸಮುದಾಯದ ನಾಯಕರನ್ನು ಸೆಳೆಯುವುದೇ ಸಿ. ಎಂ. ಇಬ್ರಾಹಿಂ ಅಲಿಂಗ ಘೋಷಣೆಯ ಒಂದಂಶದ ಚಳವಳಿ. ಸದ್ಯಕ್ಕೆ ಇಬ್ರಾಹಿಂ ಹೊಸ ಪಕ್ಷ ಕಟ್ಟುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಬೇಕಾದಂತಹ ಸಮುದಾಯ, ಆರ್ಥಿಕ ನೆರವು ಸೇರಿದಂತೆ ಯಾವುವು ಕೂಡ ಇಲ್ಲ. ಅಲ್ಪ ಸಂಖ್ಯಾತ ಹಿಂದುಳಿದ ವರ್ಗ ಹಾಗೂ ದಲಿತ ಕಾಂಬಿನೇಷನ್ ಮೂಲಕ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಅಂದು ನಡೆಸಿದ್ದರು. ಈ ಹೋರಾಟದ ಮೂಲಕ ಜೆಡಿಎಸ್ ತೊರೆದು ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಅಹಿಂದ ಸಿದ್ದರಾಮಯ್ಯ ವರ್ಚಸ್ಸಿಗೆ ದೊಡ್ಡ ಮಟ್ಟದಲ್ಲಿ ಮುನ್ನಡೆಯನ್ನು ನೀಡಿತ್ತು. ಇದೀಗ ಅಲಿಂಗ ಮೂಲಕ ಹೊಸ ರಾಜಕೀಯ ಚರ್ಚೆಯನ್ನು ಸಿ. ಎಂ. ಇಬ್ರಾಹಿಂ ಹುಟ್ಟುಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಚುನಾವಣೆಗೆ ವರ್ಷಗಳು ಬಾಕಿ ಇರುವಾಗ ಹೊಸ ಚರ್ಚೆ ಆರಂಭಗೊಂಡಿದೆ.

ಹುಬ್ಬಳ್ಳಿಯಲ್ಲಿ ನಡೆದ ಮಾತುಕತೆ ಏನು?
ಈ ನಡುವೆ ಸಿ. ಎಂ. ಇಬ್ರಾಹಿಂ ವಿಧಾನಪರಿಷತ್ ಮಾಜಿ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ್ ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸದ್ಯ ಕಾಂಗ್ರೆಸ್ ತೊರೆಯುವ ಮಾತನ್ನಾಡುತ್ತಿರುವ ಇಬ್ರಾಹಿಂಗೆ ಎಸ್. ಆರ್. ಪಾಟೀಲ್ ಸಾಂತ್ವನ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೂಡಲ ಸಂಗಮದಲ್ಲಿ ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಸಮಾವೇಶ ಮಾಡುವುದಾಗಿ, ಇದರಲ್ಲಿ ಸಾಧು ಸಂತರು ಹಾಗೂ ಸೂಫಿ ಸಂತರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಸಹಜವಾಗಿ ಲಿಂಗಾಯತ ಸಮುದಾಯದ ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಜೊತೆಗೆ ಗುರುತಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಸದಾ ಬಸವ ತತ್ವದ ಬಗ್ಗೆ ಒಲವು ತೋರಿಸುತ್ತಾ ಬಂದಿರುವ ಸಿ. ಎಂ. ಇಬ್ರಾಹಿಂ ಮುಸ್ಲಿಂ ಅಲ್ಪಸಂಖ್ಯಾತರು ಮತ್ತು ಲಿಂಗಾಯತರ ನಡುವಿನ ಕಾಂಬಿನೇಷನ್ ಕಡೆಗೆ ಆಸಕ್ತಿ ತೋರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್ ಕಡೆ ಮುಖ ಮಾಡಿದ ಇಬ್ರಾಹಿಂ?
ಕಾಂಗ್ರೆಸ್ ನಾಯಕರ ವಿರುದ್ಧ ಬಂಡಾಯವೆದ್ದ ಸಿ. ಎಂ. ಇಬ್ರಾಹಿಂ ಸದ್ಯ ಸುಮ್ಮನಿರುವ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದೆಡೆ ಜೆಡಿಎಸ್ ಇಬ್ರಾಹಿಂಗೆ ಗಾಳ ಹಾಕುತ್ತಿದೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಯಾವ ಪಕ್ಷದತ್ತ ತಮ್ಮ ವಲಸೆ ಎಂಬುವುದನ್ನು ಇಬ್ರಾಹಿಂ ಇನ್ನೂ ಅಧಿಕೃತಗೊಳಿಸಿಲ್ಲ. ಕಳೆದ ವಾರ ತಮ್ಮ ನಿವಾಸಕ್ಕೆ ಆಗಮಿಸಿದ್ದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಜೊತೆ ಸುದೀರ್ಘ ಚರ್ಚೆ ನಡೆಸಿದ್ದ ಇಬ್ರಾಹಿಂ, ಜೆಡಿಎಸ್ ಸೇರುವ ಒಲವು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಮೂರು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ನಿವಾಸಕ್ಕೆ ತೆರಳಿ ಇನ್ನೊಂದು ಸುತ್ತಿನ ಸಮಾಲೋಚನೆ ಪೂರ್ಣಗೊಳಿಸಿದ್ದಾರೆ.
ಸಿ. ಎಂ. ಇಬ್ರಾಹಿಂ ಜೆಡಿಎಸ್ ಕಡೆ ಒಲವು ತೋರುತ್ತಿದ್ದಾರೆ ಎಂಬ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಳೆದ ವಾರ ಅವರ ನಿವಾಸಕ್ಕೆ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ಮಹತ್ವದ ಜವಾಬ್ದಾರಿ ನೀಡಲಿದೆ ಎಂಬ ಭರವಸೆ ನೀಡಿದ್ದರು. ಆದರೆ ಇದಾದ ಮರುದಿನವೇ ಇಬ್ರಾಹಿಂ ನೇರವಾಗಿ ದೇವೇಗೌಡರನ್ನು ಭೇಟಿಯಾಗಿರುವುದನ್ನು ಗಮನಿಸಿದರೆ ಇಬ್ರಾಹಿಂ ಹಾಗೂ ಡಿ. ಕೆ. ಶಿವಕುಮಾರ್ ನಡುವಿನ ಮಾತುಕತೆ ಫಲಪ್ರದವಾಗಿಲ್ಲ ಎಂಬ ಅನುಮಾನ ಕಾಡುತ್ತಿದೆ.

ಪಕ್ಷಕ್ಕೆ ಅಸ್ತಿತ್ವ ಕೊರತೆ ಎದುರಿಸುತ್ತಿದೆ
ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದು, ಅಲ್ಪಸಂಖ್ಯಾತ ಸಮುದಾಯದ ಮತಬ್ಯಾಂಕ್ ಗಿಟ್ಟಿಸಲು ಮುಂದಾಗಿರುವ ಜೆಡಿಎಸ್ ನಾಯಕರು, ಅಲ್ಪಸಂಖ್ಯಾತ ಸಮುದಾಯಕ್ಕೆ ಆಯಕಟ್ಟಿನ ಸ್ಥಾನ ನೀಡಿ ಗೌರವಿಸಲು ಮುಂದಾಗಿದ್ದಾರೆ. ಪಕ್ಷದ ರಾಜಧ್ಯಕ್ಷರಾಗಿರುವ ಎಚ್. ಕೆ. ಕುಮಾರಸ್ವಾಮಿ ಸದ್ಯ ಸಕ್ರಿಯವಾಗಿ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇವರು ಸಹ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿ ಇಲ್ಲವೇ ಕಾಂಗ್ರೆಸ್‍ನತ್ತ ಮುಖ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಬದಲಾವಣೆ ತರಲು ಮುಂದಾಗಿರುವ ಕುಮಾರಸ್ವಾಮಿ ಹಲವು ಸ್ಥಾನಗಳಿಗೆ ಪ್ರಮುಖ ನಾಯಕರನ್ನು ನೇಮಿಸಲು ತೀರ್ಮಾನಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಇಬ್ರಾಹಿಂ ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಜೊತೆ ಸುದೀರ್ಘ ಚರ್ಚೆ ನಡೆಸಿದ್ದು, ಒಂದೊಮ್ಮೆ ಅಧ್ಯಕ್ಷ ಹುದ್ದೆ ನೀಡುವುದಾದರೆ ತಾವು ಜೆಡಿಎಸ್‍ಗೆ ಬರಲು ಸಿದ್ಧ ಎಂದಿದ್ದಾರೆ ಎಂಬ ಮಾಹಿತಿ ಇದೆ.

ದೇವೇಗೌಡರ ಜೊತೆ ಇದ್ದವರು
ಜನತಾಪರಿವಾರ ಮೂಲದವರಾದ ಸಿ. ಎಂ. ಇಬ್ರಾಹಿಂ ಮತ್ತೆ ತವರಿನತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ದಟ್ಟವಾಗಿದ್ದು, ದೇವೇಗೌಡರು ಹಾಗೂ ಐ. ಕೆ. ಗುಜ್ರಾಲ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೆಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 68 ವರ್ಷ ಪ್ರಾಯದ ಹಿರಿಯ ರಾಜಕಾರಣಿ ಸಿ. ಎಂ. ಇಬ್ರಾಹಿಂ ಸುದೀರ್ಘ ಅವಧಿಯ ರಾಜಕೀಯ ಅನುಭವ ಹೊಂದಿದ್ದು, ಜೆಡಿಎಸ್ ಪಕ್ಷ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ. ನಮಗೊಂದು ಅವಕಾಶ ಮಾಡಿಕೊಡಿ ಎಂದು ದೇವೇಗೌಡರ ಬಳಿ ಕೋರಿದ್ದಾರೆ. ಈ ಸಂಬಂಧ ಆದಷ್ಟು ಬೇಗ ಪಕ್ಷದ ಇತರ ನಾಯಕರ ಜೊತೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಕೂಡ ಗೌಡರು ಭರವಸೆ ನೀಡಿದ್ದಾರೆ.
ಕಾಂಗ್ರೆಸ್‍ನಲ್ಲಿ ಉಳಿದರೆ ಕೇವಲ ಎಂಎಲ್‍ಸಿ ಆಗಿ ಮಾತ್ರ ಉಳಿಯುತ್ತೇನೆ. ಜೆಡಿಎಸ್‍ನಲ್ಲಿ ಇದಕ್ಕಿಂತ ಉನ್ನತ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರು ತೆನೆ ಹೊರಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಾಕಷ್ಟು ನಾಯಕರು ಜೆಡಿಎಸ್ ತೊರೆದು ಬಿಜೆಪಿ ಹಾಗೂ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿ. ಎಂ. ಇಬ್ರಾಹಿಂ ಜೆಡಿಎಸ್ ಸೇರುವ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ.












Click it and Unblock the Notifications