ಕಾಂಗ್ರೆಸ್ ಪಾರ್ಟಿ ತುಂಬಾ ದುಷ್ಮನ್ ಹೈ.... ಸಿಎಂಗೆ ಆರ್ ಅಶೋಕ್ ಎಚ್ಚರಿಕೆ!
ಬೆಂಗಳೂರು ಆಗಸ್ಟ್ 21: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಕೆಲವರಿಗೆ ಖುಷಿ ತಂದಿದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿವೆ. ಇದೇ ದಾಟಿಯಲ್ಲಿ ಇಂದು ವಿಪಕ್ಷ ನಾಯಕ ಆರ್ ಅಶೋಕ್ ಕೂಡ ಮಾತನಾಡಿದ್ದು ದುಷ್ಮನ್ ಕಹಾ ಹೈ ಅಂದ್ರೆ, ಕಾಂಗ್ರೆಸ್ ಪಾರ್ಟಿ ತುಂಬಾ ಹೈ.. ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿ ಮಾತುಗಳನ್ನು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಿತಶತ್ರುಗಳು ಇದ್ದಾರೆ. 'ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ಇದೆ ಅಂತ ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವ ಬಹುತೇಕ ಕಾಂಗ್ರೆಸ್ ನಾಯಕರು ಅಂತರಂಗದಲ್ಲಿ ಬೇರೆಯದ್ದೇ ಲೆಕ್ಕಾಚಾರ ಹಾಕುತ್ತಿದ್ದಾರೆ' ಎಂದು ಆರ್ ಅಶೋಕ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಸಿಎಂ ಸಿದ್ದರಾಮಯ್ಯ ಅವರೇ. ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕುವ ಹಿತಶತೃಗಳು ನಿಮ್ಮ ಪಕ್ಷದಲ್ಲೇ ಬಹಳ ಮಂದಿ ಇದ್ದಾರೆ. ಇಡೀ ರಾಜ್ಯ ತಮ್ಮ ರಾಜೀನಾಮೆಗಾಗಿ ಕಾತುರದಿಂದ ಎದುರು ನೋಡುತ್ತಿದೆ. ಕನ್ನಡಿಗರು ತಾಳ್ಮೆ ಪರೀಕ್ಷೆ ಮಾಡಬೇಡಿ. ಆದಷ್ಟು ಬೇಗ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ' ಎಂದು ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 2ಕ್ಕೆ ವಿಚಾರಣೆ ಮುಂದೂಡಿಕೆ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸಿಎಂ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆಯನ್ನು ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲು ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.
ಸಿದ್ದರಾಮಯ್ಯ ಈ ಸ್ಥಿತಿಗೆ ಕಾಂಗ್ರೆಸ್‌ನಲ್ಲಿ ಖುಷಿ ತಂದಿದೆ-ಶೆಟ್ಟರ್
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಇದು ಸ್ಪಷ್ಟವಾಗಿದೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದು ಕೆಲ ಕಾಂಗ್ರೆಸ್ ನಾಯಕರಿಗೆ ಖುಷಿ ಇದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದರು.
ಈ ಬಗ್ಗೆ ಮಾಜಿ ಸಿಡಿಎಂ ಕೆಎಸ್ ಈಶ್ವರಪ್ಪ ಮಾತನಾಡಿ, 'ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು. ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟೆ. ಅವರು ಸಹ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡ್ತಾರೆ ಅಂತಾ ನನಗೆ ವಿಶ್ವಾಸ ಇದೆ' ಎಂದಿದ್ದಾರೆ.
'ಆದರೆ ನನಗೆ ಒಂದು ಅನುಮಾನ ಅಂದರೆ ಎಲ್ಲಿ ಅವರ ಶ್ರೀಮತಿ ಅವರನ್ನು ಎಲ್ಲಿ ಸೇರಿಸಿಬಿಡ್ತಾರೋ ಅಂತಾ ಅನುಮಾನ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬರದೇ ಇರಲಿ ಅಂತಾ ಬೇಡಿಕೊಳ್ಳುತ್ತೇನೆ. ಸಿದ್ದರಾಮಯ್ಯ ಕಾನೂನು ಬದ್ಧವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ' ಎಂದು ಕೆಎಸ್ ಈಶ್ವರಪ್ಪ ಕೆಣಕಿದ್ದಾರೆ.












Click it and Unblock the Notifications