ರಾಜ್ಯಕ್ಕೆ ಪ್ರತಿದಿನ 5 ಲಕ್ಷ ಕೋವಿಡ್ ಲಸಿಕೆ ನೀಡಲು ಕೇಂದ್ರ ಒಪ್ಪಿಗೆ: ಸಿಎಂ ಬೊಮ್ಮಾಯಿ!
ಬೆಂಗಳೂರು, ಆ. 26: ರಾಜ್ಯಕ್ಕೆ ಪ್ರತಿ ದಿನ 5 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ನವ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ.
ಈಗ ಪ್ರತಿ ದಿನ 3.5 ಲಕ್ಷದಿಂದ 4 ಲಕ್ಷ ಲಸಿಕೆ ರಾಜ್ಯಕ್ಕೆ ಪೂರೈಕೆ ಆಗುತ್ತಿದೆ. ಸೆಪ್ಟೆಂಬರ್ ತಿಂಗಳಿಂದ ಪ್ರತಿ ದಿನ 5 ಲಕ್ಷ ಲಸಿಕೆ ಹಾಕಲು ರಾಜ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಸಂಗತಿಯನ್ನು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅವರ ಗಮನಕ್ಕೆ ತರಲಾಯಿತು. ರಾಜ್ಯದ ಈ ಪ್ರಸ್ತಾವನೆಗೆ ಅವರು ಒಪ್ಪಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ನೀಡುವ ಭರವಸೆ ನೀಡಿದರು ಎಂದು ಅವರು ಹೇಳಿದರು.

ಜೊತೆಗೆ ಹೊಸ ಜವಳಿ ನೀತಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಕರ್ನಾಟಕದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರದ. ಕೇಂದ್ರ ಜವಳಿ ಖಾತೆ ಸಚಿವ ಪಿಯೂಶ ಗೋಯಲ್ ಅವರನ್ನು ಭೇಟಿ ಮಾಡಿದ್ದೆ. ಈ ಸಂದರ್ಭದಲ್ಲಿ ಅವರು ವಿಷಯ ತಿಳಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದೆ. ದೇಶದಲ್ಲಿಯೇ ಮೊಟ್ಟ ಮೊದಲ ರಾಜ್ಯವಾಗಿ ಕರ್ನಾಟಕ ಅನುಷ್ಠಾನಕ್ಕೆ ತಂದಿದೆ ಎಂದು ಬೊಮ್ಮಾಯಿ ಹೇಳಿದರು.ಇದೇ ಸಂದರ್ಭದಲ್ಲಿ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣ, ಆರೋಪಿಗಳಿಗೆ ಕಠಿಣ ಶಿಕ್ಷೆ:
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳು ಯಾರೆ ಆಗಿರಲಿ, ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸ್ಪಷ್ಟ ಆದೇಶ ನೀಡಿದ್ದೇನೆ. ಈ ಪ್ರಕರಣದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದಿದ್ದಾರೆ. ಜೊತೆಗೆ ಪ್ರಕರಣದ ತನಿಖಾ ವರದಿಯನ್ನು ನೇರವಾಗಿ ತಮಗೆ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾ ನಿರ್ದೇಶಕರು, ಎಡಿಜಿಪಿ ಪ್ರತಾಪ ರೆಡ್ಡಿ ಹಾಗೂ ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ಹತೆ ಮಾತನಾಡಿದ್ಧೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ತಪಿತಸ್ಥರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ತನಿಖೆ ಚುರುಕಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು. ವಿರೋಧ ಪಕ್ಷದವರ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಗೃಹ ಸಚಿವರು ಸ್ಪಷ್ಟೀಕರಣ ನೀಡುತ್ತಾರೆಂದು ಸಿಎಂ ತಿಳಿಸಿದರು.
ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸರ್ವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ದೆಹಲಿಯಲ್ಲಿ ತಿಳಿಸಿದ್ದಾರೆ. "ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆದಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ" ಎಂದಿದ್ದಾರೆ.
ವಿಶೇಷ ರಜೆ ಅರ್ಜಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದ ಅವರು ತಮಿಳುನಾಡು ನದಿ ಜೋಡಣೆ ಯೋಜನೆಗಳು ಕಾನೂನು ಬಾಹಿರವಾಗಿದ್ದು, ಆ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನಮ್ಮ ನಿಲುವನ್ನು ಸ್ಪಷ್ಟಪಡಿಸುವ ಕುರಿತು ಹಾಗೂ ತಮಿಳುನಾಡು ಮಧುರೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಪ್ರಕರಣ ಮಧುರೈ ವ್ಯಾಪ್ತಿಗೆ ಒಳಪಡದಿರುವುದರಿಂದ ಪ್ರಕರಣವನ್ನು ಕೈಬಿಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications