ಪುನೀತ್ ಅಂತ್ಯಸಂಸ್ಕಾರ: ಕಷ್ಟಕ್ಕೆ ಹೆಗಲು ಕೊಟ್ಟ ಸಿಎಂ ಬೊಮ್ಮಾಯಿ
"ಮೃತ ಪಟ್ಟವರನ್ನು ವಾಪಸ್ ಕರೆಸಿಕೊಳ್ಳಲು ಸಾಧ್ಯವಿಲ್ಲ, ಆದರೆ, ಅವರನ್ನು ಗೌರವಯುತವಾಗಿ ಕಳುಹಿಸಿ ಕೊಡುವ ಜವಾಬ್ದಾರಿ ವೈಯಕ್ತಿಕವಾಗಿ ನನ್ನ ಮೇಲಿದೆ, ನನ್ನ ಸರಕಾರದ ಮೇಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಗಣ್ಯ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರಕಾರಿ ಗೌರವದ ಮೂಲಕ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ನಿರ್ಧರಿಸಿದ ನಂತರ, ಅದರ ಬಹುತೇಕ ಜವಾಬ್ದಾರಿ ಸರಕಾರದ ಮೇಲೆ ಇರುತ್ತದೆ. ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನೂ ಈ ಗೌರವ ನೀಡಿ ಮಾಡಲಾಗಿತ್ತು.
ಸಾವಿನ ಮುನ್ಸೂಚನೆ? "ಪುನೀತ್ ಸಾವಿಗೂ ಇದಕ್ಕೂ ಸಂಬಂಧವಿಲ್ಲ, ಅಪಾರ್ಥ ಬೇಡ"
ಶುಕ್ರವಾರ (ಅ 29) ಪುನೀತ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ, ಭಾನುವಾರ ಬೆಳಗ್ಗೆ ಅವರ ಅಂತಿಮ ಸಂಸ್ಕಾರದ ವಿಧಿವಿಧಾನ ಮುಗಿಯುವವರೆಗೆ ಸರಕಾರ ಮತ್ತು ಪೊಲೀಸರಿಗೆ ಇದನ್ನು ನಿಭಾಯಿಸುವ ಬಹುದೊಡ್ಡ ಜವಾಬ್ದಾರಿ ಇದಾಗಿತ್ತು. ಅದನ್ನು ಸಮರ್ಥವಾಗಿ ಮತ್ತು ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ.
ಪುನೀತ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟು, ಭಾನುವಾರ ಬೆಳಗ್ಗೆ ಅಲ್ಲಿಂದ ತೆಗೆಯುವವರೆಗೆ ಸುಮಾರು 20-25 ಲಕ್ಷ ಜನ ಅವರ ಅಂತಿಮ ದರ್ಶನ ಪಡೆದಿದ್ದರು. ಇದು, ವರನಟ ಡಾ.ರಾಜಕುಮಾರ್ ಅಂತಿಮ ದರ್ಶನ ಪಡೆದವರ ಸಂಖ್ಯೆಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗುತ್ತಿದೆ.
ಮಣ್ಣಲ್ಲಿ ಮಣ್ಣಾದ ನಟ ಪುನೀತ್ ರಾಜ್ಕುಮಾರ್

ಡಾ.ರಾಜ್ ಅಂತಿಮಯಾತ್ರೆಯ ವೇಳೆ ನಡೆದಿದ್ದ ಹಿಂಸಾಚಾರದ ಇತಿಹಾಸ
ತಮ್ಮ ಸರಳತೆ, ನೈಜ ಅಭಿನಯ, ಕೌಟುಂಬಿಕ ಚಿತ್ರಗಳಿಂದಾಗಿ ಪುನೀತ್ ಭಾರೀ ಅಭಿಮಾನಿಗಳನ್ನು ಹೊಂದಿದ್ದರು. ಅವರ ಅಕಾಲಿಕ ಸಾವು ಇಡೀ ನಾಡನ್ನೇ ಅಕ್ಷರಸಃ ಆಘಾತಕ್ಕೆ ದೂಡಿತ್ತು. ಇವರ ಅಂತಿಮ ದರ್ಶನಕ್ಕೆ ಲಕ್ಷೋಪಾದಿಯಲ್ಲಿ ಜನರು ಬರಬಹುದು ಎನ್ನುವ ಗುಪ್ತಚರ ಮಾಹಿತಿ ಮತ್ತು ಡಾ.ರಾಜ್ ಅಂತಿಮಯಾತ್ರೆಯ ವೇಳೆ ನಡೆದಿದ್ದ ಹಿಂಸಾಚಾರದ ಇತಿಹಾಸವನ್ನು ಅರಿತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲೂ ತೊಂದರೆಯಾಗದಂತೆ ಖುದ್ದು ತಾನೇ ನೇತೃತ್ವ ವಹಿಸಿದ್ದು ಇಲ್ಲಿ ಗಮನಿಸಬೇಕಾದ ವಿಚಾರ.

ಅಂತಿಮ ಸಂಸ್ಕಾರ ಮುಗಿಯುವವರೆಗೆ ಬಹುತೇಕ ಸ್ಥಳದಲ್ಲೇ ಇದ್ದ ಸಿಎಂ ಬೊಮ್ಮಾಯಿ
ಪುನೀತ್ ಆಸ್ಪತ್ರೆಗೆ ದಾಖಲಾದ ನಂತರ ಅಂತಿಮ ಸಂಸ್ಕಾರ ಮುಗಿಯುವವರೆಗೆ ಬಹುತೇಕ ಸ್ಥಳದಲ್ಲೇ ಇದ್ದ ಸಿಎಂ ಬೊಮ್ಮಾಯಿ, ಪೊಲೀಸ್, ಬಿಬಿಎಂಪಿ ಅಧಿಕಾರಿಗಳು ಮತ್ತು ಪುನೀತ್ ಕುಟುಂಬದವರ ಜೊತೆಗೆ ಸಮನ್ವಯದೊಂದಿಗೆ ಎಲ್ಲೂ ವ್ಯವಸ್ಥೆ ಹಾಳಾಗದಂತೆ ನೋಡಿಕೊಂಡರು. ವಿಐಪಿ ಮತ್ತು ಅಭಿಮಾನಿಗಳಿಗೆ ಪ್ರತ್ಯೇಕ ಬ್ಯಾರಿಕೇಡ್, ಟೆಂಟ್, ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುನೀತ್ ಅಭಿಮಾನಿಗಳು ಕರ್ತವ್ಯ ನಿರತರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಸುಮಾರು 20-25 ಲಕ್ಷ ಜನರು ಅವರ ಅಂತಿಮ ದರ್ಶನ ಪಡೆದಿದ್ದರು
ಸುಮಾರು 25 ಸಾವಿರ ಪೊಲೀಸರು, ಸಾವಿರಾರು ಸಂಖ್ಯೆಯಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇಡೀ ಈ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ವಹಿಸಿಕೊಂಡಿದ್ದರು. ಅಭಿಮಾನಿಗಳು ಅಲ್ಲಲ್ಲಿ ಸಹನೆಯನ್ನು ಕಳೆದುಕೊಂಡರೂ ಸಿಬ್ಬಂದಿಗಳು ಶಾಂತಿಯುತವಾಗಿ ನಿಯಂತ್ರಿಸುತ್ತಿದ್ದರು. "ಸರಕಾರ ಮತ್ತು ಅಭಿಮಾನಿಗಳಿಗೆ ನಮ್ಮ ಕುಟುಂಬ ಆಭಾರಿಯಾಗಿದೆ. ಮೂರು ದಿನ ಎಲ್ಲೂ ತೊಂದರೆಯಾಗದಂತೆ ಶಿಸ್ತುಬದ್ದವಾಗಿ ಈ ಕೆಲಸವನ್ನು ನಡೆಸಿಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ನನ್ನ ಹೃದಯದ ನಮಸ್ಕಾರಗಳು" ಎಂದು ಅಂತಿಮ ವಿಧಿವಿಧಾನ ಮುಗಿದ ನಂತರ ಶಿವರಾಜ್ ಕುಮಾರ್ ಹೇಳಿದ್ದರು.

ವಿಶೇಷವಾಗಿ ಸರಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ಡಿಕೆಶಿ
"ನಾನು ವಿರೋಧ ಪಕ್ಷದಲ್ಲಿ ಇರಬಹುದು, ಇದೊಂದು ಬಹುದೊಡ್ಡ ಸವಾಲಿನ ಕೆಲಸವಾಗಿತ್ತು. ಸರಕಾರ ಮತ್ತು ಅಧಿಕಾರಿಗಳು ಅತ್ಯಂತ ಮುತುವರ್ಜಿಯಿಂದ ಈ ಕೆಲಸವನ್ನು ಮುಗಿಸಿದ್ದಾರೆ. ವಿಶೇಷವಾಗಿ ಸರಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಬೊಮ್ಮಾಯಿ ಸರಕಾರದ ಹೆಗಲು ತಟ್ಟಿದ್ದರು. ಸರಕಾರ, ಪೊಲೀಸರು ಮತ್ತು ಬಿಬಿಎಂಪಿಯ ಸಮರ್ಪಕ ಕೆಲಸಕ್ಕೆ ಸಾರ್ವಜನಿಕ ವಲಯದಿಂದಲೂ ಶ್ಲಾಘನೆ ವ್ಯಕ್ತವಾಗಿದೆ.