ತಮ್ಮ ಮಾಡಿದ ಟ್ವೀಟ್‌ನ್ನೇ ಪಾಲಿಸದ ಸಿಎಂ: ಮಾಸ್ಕ್ ಹಾಕದೆ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಜ. 03: 'ಕಾಮನ್ ಮ್ಯಾನ್' ಬಸವರಾಜ ಬೊಮ್ಮಾಯಿ ಹೇಳೋದು ಒಂದು. ಮಾಡೋದು ಇನ್ನೊಂದು. ಹದಿನೈದರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಸಂಬಂಧ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ ' ಮಕ್ಕಳೇ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಭೌತಿಕ ಅಂತರ ಪಾಲಿಸಿ, ಸುರಕ್ಷತಾ ನಿಯಮ ನಿರ್ಲಕ್ಷಿಸಿ ಬೇಡಿ ಎಂದು ರಾಜ್ಯಕ್ಕೆ ಸಂದೇಶ ರವಾನಿಸಿದ್ದಾರೆ. ತಾವು ಮಾತ್ರ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ "ವಿದ್ಯಾರ್ಥಿಗಳ ಲಸಿಕಾ ಅಭಿಯಾನ"ಕ್ಕೆ ಚಾಲನೆ ನೀಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಯಾವುದಾದರಾ ಶಾಲಾ ವಿದ್ಯಾರ್ಥಿ, ಸಾರ್ ಮಾಸ್ಕ್ ಹಾಕಿ ಅಂತ ನೀವೇ ಹೇಳ್ತೀರಾ ?ನೀವೇ ಮಾಸ್ಕ್ ಹಾಕದೇ ಲಸಿಕೆ ಅಭಿಯಾನಕ್ಕೆ ಚಾಲನೆ ಕೊಡ್ತಿದ್ದೀರಾ ಹಾಗಾದ್ರೆ ನಿಮಗೆ ಓಮಿಕ್ರಾನ್ ಬರೋದಿಲ್ಲವಾ ಎಂಬ ಪ್ರಶ್ನೆ ಕೇಳಿದ್ದಲ್ಲಿ ನಮ್ಮನ್ನಾಳುವ ದೊರೆ ಅದ್ಯಾವ ಉತ್ತರ ಕಟ್ಟು ಸಮರ್ಥನೆ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಸದ್ಯಕ್ಕೆ ಅವರು ಮಾಸ್ಕ್ ಧರಿಸುವಂತೆ ಮಾಡಿರುವ ಟ್ವೀಟ್ ಸಂದೇಶ, ಮಾಸ್ಕ ಧರಿಸದೇ ಲಸಿಕೆ ಅಭಿಯಾನ ಚಾಲನೆ ಮಾಡಿರುವುದು ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಬೊಮ್ಮಾಯಿ ಟ್ವೀಟ್ ನೋಡಿ:
ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಬಸವರಾಜ ಬೊಮ್ಮಾಯಿ ಅವರು ಇಂದಿನಿದ ಆರಂಭವಾಗಿರುವ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳ "ಕೋವಿಡ್ ಲಸಿಕೆ" ಅಭಿಯಾನ ಪ್ರಸ್ತಾಪಿಸಿ ನಾಡಿನ ಜನತೆಗೆ ಸಂದೇಶ ರವಾನಿಸಿದ್ದಾರೆ. ರಾಜ್ಯದಾದ್ಯಂತ ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭ. ತಪ್ಪದೇ ಲಸಿಕೆ ಪಡೆಯಿರಿ. ಮಾಸ್ಕ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ನೈರ್ಮಲ್ಯ ಪಾಲಿಸಿ, ಸುರಕ್ಷತಾ ನಿಯಮಗಳನ್ನು ನಿರ್ಲಕ್ಷ್ಯಿಸಬೇಡಿ. ಆತಂಕ ಬೇಡ ಮುನ್ನೆಚ್ಚರಿಕೆ ಇರಲಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಆದರೆ, ಬಸವರಾಜ ಬೊಮ್ಮಾಯಿ ಅವರು ಇದೇ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವಾಗ ಮಾಸ್ಕ್ ಧರಿಸದೇ ಚಾಲನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ ಆಯೋಜಿಸಿದ್ದ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಸ್ಕ್ ಧರಿಸಿಲ್ಲ. ಕನಿಷ್ಠ ಪಕ್ಷ ಕೈಯಲ್ಲಿ ಕೂಡ ಇಟ್ಟುಕೊಂಡಿಲ್ಲ. ಪಕ್ಕದಲ್ಲಿ ಮಾಸ್ಕ ಧರಿಸಿದ ವಿದ್ಯಾರ್ಥಿನಿ ಇದ್ದಾರೆ. ಮಾಸ್ಕ್ ಧರಿಸದೇ ವಿದ್ಯಾರ್ಥಿಗಳ ಲಸಿಕಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ.
ಇನ್ನು ಬಸವರಾಜ ಬೊಮ್ಮಾಯಿ ಪಕ್ಕದಲ್ಲಿಯೇ ನಿಂತಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಮೊನ್ನೆಯಷ್ಟೇ ಕೊರೊನಾ ನಿರ್ವಹಣೆ ಸಂಬಂಧ ಪ್ರೆಸ್‌ಕ್ಲಬ್ ನೀಡಿದ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಅವರೂ ಸಹ ಮಾಸ್ಕ್ ಕೊರಳಿಗೆ ಹಾಕಿಕೊಂಡಿದ್ದರು. ನಾವು ಮಾಸ್ಕ ಧರಿಸುವ ಮೂಲಕ ವಿದ್ಯಾರ್ಥಿಗಳು ಮಾಸ್ಕ್ ಧರಿಸುವಂತೆ ಪ್ರೇರಣೆ ನೀಡಬೇಕು ಎಂಬ ಸಣ್ಣ ಆಲೋಚನೆ ಯಾರಲ್ಲಿಯೂ ಕಾಣಲಿಲ್ಲ. ಮಾಸ್ಕ್ ಧರಿಸದೇ ಲಸಿಕಾ ಅಭಿಯಾನದ ದೀಪ ಬೆಳಗಿಸಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ ಅವರು ಕೂಡ ಮಾಸ್ಕ ಧರಿಸದೇ ವಿದ್ಯಾರ್ಥಿಗಳ ಲಸಿಕಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಇನ್ನು ಪಕ್ಕದಲ್ಲೇ ಇರುವ ಎಲ್ಲಾ ಶಾಲಾ ಮಕ್ಕಳು ಮಾಸ್ಕ್ ಧರಿಸಿದ್ದಾರೆ.

ಇನ್ನು ಸೋಮವಾರ ರಾಜ್ಯದ ನಾನಾ ಕಡೆ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಜನ ಪ್ರತಿನಿಧಿಗಳು ಚಾಲನೆ ನೀಡಿದ್ದಾರೆ. ಮಕ್ಕಳ ಲಸಿಕಾ ಅಭಿಯಾನ, ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಪಾಡಿ ಅಂತ ಹೇಳುವ ನಾವೇ ಪಾಲಿಸದಿದ್ದರೆ ಇನ್ನು ಮಕ್ಕಳು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂಬ ಸಣ್ಣ ಅರಿವು ಬಹುತೇಕ ನಾಯಕರು ತೋರಿದಂತೆ ಕಾಣುತ್ತಿಲ್ಲ.
ಸಚಿವ ಮುರುಗೇಶ್ ನಿರಾಣಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಶಿವರಾಮ್ ಹೆಬ್ಬಾರ್, ಸ್ವೀಕರ್ ವಿಶ್ವೇಶ್ವರ ಕಾಗೇರಿ ಯಾರೂ ಕೂಡ ಮಾಸ್ಕ್ ಧರಿಸದೇ ಮೋದಿ ಅವರ ವಿಶ್ವದ ದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ.

ಸಚಿವರಿಗೆ ಓಮಿಕ್ರಾನ್ ಬರಲ್ಲವೇ?:
ಜನರೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿರುವ ಜನ ಪ್ರತಿನಿಧಿಗಳೇ ಮೊದಲು ಕೊರೊನಾ ಸೋಂಕಿಗೆ ತುತ್ತಾಗುತ್ತಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ, ಹಾಲಿ ಸಚಿವರು ಇದು ಗೊತ್ತಿದ್ದು ಮಾಸ್ಕ್ ಇಲ್ಲದೇ, ಭೌತಿಕ ಅಂತರ ಕಾಯ್ದುಕೊಳ್ಳದೇ ಮಕ್ಕಳ ಜತೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ನಾವು ಪಾಲಿಸದಿದ್ದರೆ ಮಕ್ಕಳು ಪಾಲಿಸುತ್ತಾರಾ ಎಂಬ ಸಣ್ಣ ಪ್ರಶ್ನೆ ಕಾಡಿದ್ದರೂ ಬಹುಶಃ ಎಲ್ಲರೂ ಮಾಸ್ಕ್ ಧರಿಸಿ ಬದ್ಧತೆ ತೋರಿಸುತ್ತಿದ್ದರು. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾದಾಗ ಹೀಗೆ ಆಗುತ್ತದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.












Click it and Unblock the Notifications