ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವರಾಜ ಬೊಮ್ಮಾಯಿ ಬಜೆಟ್: ಸಚಿವರು ಏನೆಂದರು?

|
Google Oneindia Kannada News

ಬೆಂಗಳೂರು, ಮಾ.4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ಗೆ ರಾಜ್ಯದ ಸಚಿವರು ಶಹಬ್ಬಾಸ್ ಹೇಳಿದ್ದಾರೆ. ಕಾಮನ್‌ಮ್ಯಾನ್‌ ಮಂಡಿಸಿದ ಬಜೆಟ್‌ನಿಂದ ರಾಜ್ಯದ ಜನರ ಬದುಕು ಸುಗಮವಾಗಿದೆ ಎಂದು ಬಣ್ಣಿಸಿದ್ದಾರೆ. ರಾಜ್ಯದ ವಿವಿಧ ಸಚಿವರು ಬಜೆಟ್‌ಬಗ್ಗೆ ಎನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನೀಲಿ ನಕಾಶೆ:

ಮುಖ್ಯಮಂತ್ರಿಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಸೂಕ್ತ ನೀಲಿ ನಕಾಶೆಯನ್ನು ಹಾಕಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

'ಜನಸಾಮಾನ್ಯರ ಮೇಲೆ ಯಾವುದೆ ಹೊರೆ ಹಾಕದ ಜನಪರ ಮುಂಗಡ ಪತ್ರವನ್ನು ಮುಖ್ಯಮಂತ್ರಿಗಳು ಮಂಡಿಸಿರುವುದಕ್ಕೆ ಅವರನ್ನು ಅಭಿನಂದಿಸುವೆ. ಮನೆ ಮನೆಗೆ ಗಂಗೆ ಯೋಜನೆಗೆ ರಾಜ್ಯ ಸರ್ಕಾರದ ಪಾಲಾದ ₹ 7000 ಕೋಟಿ ಯನ್ನು ನೀಡಲು ಉದ್ದೇಶಿಸಿರುವುದನ್ನು ಸ್ವಾಗತಿಸುತ್ತೇನೆ. 2023-24ರೊಳಗೆ ಗ್ರಾಮೀಣ ಕರ್ನಾಟಕದ 25 ಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವ ಗುರಿಯನ್ನು ತಲುಪಲಾಗುವುದು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 1,600 ಕೋಟಿ ಮೀಸಲಿಟ್ಟಿರುವುದು ರಸ್ತೆಗಳ ಅಭಿವೃದ್ಧಿಗೆ ಸಹಾಯಕವಾಗುವುದು. ಪಂಚಾಯತಿಯ ಕೆರೆಗಳ ಅಭಿವೃದ್ಧಿಗೆ ನೂರು ಕೋಟಿ ಹಣವು ಜಲಸಂವರ್ಧನೆಗೆ ಅನುಕೂಲವಾಗುವುದು' ಎಂದು ಹೇಳಿದ್ದಾರೆ.

Karnataka Ministers, Political leaders Former Reaction to Karnataka Budget 2022-23

ಸಮಾಜದ ಎಲ್ಲಾ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಮುಂಗಡ ಪತ್ರವನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ. ಕೋವಿಡ್ ಸಂಕಟವನ್ನು ಯಶಸ್ವಿ ಯಾಗಿ ಎದುರಿಸಿ ರಾಜ್ಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಿರುವ ಮುಖ್ಯಮಂತ್ರಿಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಚೊಚ್ಚಲ ಮುಂಗಡ ಪತ್ರದಲ್ಲಿ ಸೂಕ್ತ ನೀಲಿ ನಕಾಶೆಯನ್ನು ಹಾಕಿದ್ದಾರೆ ಎಂದು ಈಶ್ವರಪ್ಪ ಬಣ್ಣಿಸಿದ್ದಾರೆ.

Karnataka Ministers, Political leaders Former Reaction to Karnataka Budget 2022-23

ಕಳಸಾ - ಬಂಡೂರಿಗೆ 1000 ಕೋಟಿ ಸ್ವಾಗತಾರ್ಹ: ಸಿಸಿ ಪಾಟೀಲ

ಕಳಸಾ - ಬಂಡೂರಿ ಯೋಜನೆ ಜಾರಿಗಾಗಿ ಅನೇಕ ವರ್ಷಗಳಿಂದ ಬೊಮ್ಮಾಯಿ ಅವರು ಪಾದಯಾತ್ರೆಯೂ ಸೇರಿದಂತೆ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಈ ಯೋಜನೆ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸಾಗಿತ್ತು. ಇದನ್ನು ನನಸು ಮಾಡುವ ನಿಟ್ಟಿನಲ್ಲಿ ತಾವು ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಬಜೆಟ್ ನಲ್ಲಿಯೇ ಈ ಯೋಜನೆಗಾಗಿ 1000 ಕೋಟಿ ರೂ. ಮೀಸಲಿಟ್ಟಿರುವುದು ಅವರ ಬದ್ಧತೆಗೆ ಉದಾಹರಣೆಯಾಗಿದೆ. ಮೇಕೆದಾಟು ಯೋಜನೆಗೂ 1000 ಕೋಟಿ ರೂ. ಅನುದಾನ ಘೋಷಿಸಿರುವುದು ಸ್ವಾಗತಾರ್ಹ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

Karnataka Ministers, Political leaders Former Reaction to Karnataka Budget 2022-23

ಕಳೆದ ಬಜೆಟ್ ನಲ್ಲಿ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ 8561 ಕೋಟಿ ರೂ. ಅನುದಾನ ನೀಡಲಾಗಿದ್ದರೆ, ಈ ಬಜೆಟ್ ನಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗಳ (9,489 ಕೋಟಿ ರೂ.) ಅನುದಾನ ವನ್ನು ಘೋಸಿಸುವ ಮೂಲಕ ಕಳೆದ ಬಾರಿಗಿಂತ ಸುಮಾರು 1000 ಕೋಟಿ ರೂ. ಈ ಬಾರಿ ಹೆಚ್ಚಿನ ಅನುದಾನ ಒದಗಿಸಿರುವುದು ಗಮನಾರ್ಹ. ಲೋಕೋಪಯೋಗಿ ಇಲಾಖೆ ಮತ್ತು ಇತರ ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ಅತೀ ಹೆಚ್ಚಿನ ಆದ್ಯತೆ ನೀಡಿ ಹಲವು ಯೋಜನೆಗಳನ್ನು ಸಾಕಾರಗೊಳಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಜನತೆಯ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ: ಕಾರಜೋಳ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಇಂದಿನ ಮುಂಗಡ ಪತ್ರ ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ಗ್ರಾಮೀಣ ಕರ್ನಾಟಕದ ಉದ್ಯಮಗಳಾದ ಹೈನೋದ್ಯಮ, ಮತ್ಸ್ಯೋದ್ಯಮ ಮುಂತಾದ ಉದ್ಯಮಗಳ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾದ ಈ ಮುಂಗಡ ಪತ್ರ ನಾಡಿನ ಅಭಿವೃದ್ಧಿಯ ಗತಿಯನ್ನು ಚಲನಶೀಲಗೊಳಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಾಮಾನ್ಯ ಪ್ರಜೆಗಳನ್ನು ಗಮನದಲ್ಲಿಟ್ಟು ಮಂಡಿಸಿದೆ ಬಜೆಟ್. ರಾಜ್ಯದ ಮಹತ್ವದ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿರುವುದರಿಂದ ಈ ಯೋಜನೆ ಸಾಕಾರಗೊಳ್ಳಲು ದಾಪುಗಾಲನ್ನಿಡಲಾಗಿದೆ. ಪಶ್ಚಿಮವಾಹಿನಿಗಳ ತಿರುವು ಯೋಜನೆ, ರಾಜ್ಯದಲ್ಲಿ ನೀರಿನ ಕೊರತೆ ನೀಗಿಸಿ, ಬರ ಸಂಭವನೀಯ ಪ್ರದೇಶಕ್ಕೆ ನೀರುಣಿಸುತ್ತದೆ. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಾದ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಮುಂಗಡ ಪತ್ರದ ಬೆಂಬಲ ನೀಡುವ ಮೂಲಕ ನಮ್ಮ ಸರ್ಕಾರ ಈ ಯೋಜನೆಗಳಿಗೆ ತನ್ನ ಬದ್ದತೆಯನ್ನು ಪ್ರತಿಬಿಂಬಿಸಿದೆ. ಕುಡಿಯುವ ನೀರು ಮತ್ತು ನೀರಾವರಿ ಅಂತರ್ಜಲ ವೃದ್ಧಿಗೆ ಸಮಾನ ಆದ್ಯತೆ ನೀಡಿರುವ ಸರ್ಕಾರ, ಸರ್ವಾಂಗೀಣ ಕೃಷಿ ಚಟುವಟಿಕೆಗೆ ಇಂಬು ನೀಡಿದೆ ಎಂದು ವಿವರಿಸಿದ್ದಾರೆ.

ಚುನಾವಣೆ ಓಲೈಕೆ ಇಲ್ಲ: ಡಾ. ಸುಧಾಕರ್

ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿದ 2022-2023ರ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ. ಬಜೆಟ್ ಕೇವಲ ಘೋಷಣೆಯಾಗದೆ ಜನಸಾಮಾನ್ಯರ ಬಜೆಟ್ ಆಗಿದೆ. ತಮ್ಮ ಚೊಚ್ಚಲ ಬಜೆಟ್ ಮಂಡನೆಯಲ್ಲಿ ಕಾಮನ್ ಮ್ಯಾನ್ ಸಿಎಂ ರಿಂದ ಕಾಮನ್ ಮ್ಯಾನ್ ಬಜೆಟ್ ಸಿಕ್ಕಿದೆ, ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

2 ಲಕ್ಷದ 53 ಸಾವಿರದ 165 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು ಸರ್ವಸ್ಪರ್ಶಿ ಬಜೆಟ್ ಇದಾಗಿದೆ. ರಾಜ್ಯದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣವೊಂದೇ ದಾರಿ ಅನ್ನುವುದನ್ನ ಬಜೆಟ್ ಹೇಳಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಬಜೆಟ್​​ನಲ್ಲಿ ಬರಪೂರ ಅನುದಾನ ಸಿಕ್ಕಿದೆ. ಮೇಕೆದಾಟು ಯೋಜನೆಗೆ 1000 ಸಾವಿರ ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಹಾಗೂ ಎತ್ತಿನ ಹೊಳೆ ಯೋಜನೆಗೆ 3000 ಕೋಟಿ ನೀಡುವ ಮೂಲಕ ನೀರಾವರಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಎತ್ತಿನ ಹೊಳೆ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಜನರ ನೀರಿನ ಬವಣೆ ತೀರಿಸಲು ಸರ್ಕಾರ ಯೋಜನೆ ರೂಪಿಸಿ ಅನುದಾನ ನೀಡಿದೆ ಎಂದು ವಿವರಿಸಿದ್ದಾರೆ.

ಚುನಾವಣೆ ಹತ್ತಿರದಲ್ಲೇ ಇದ್ದರೂ ಇದು ಒಲೈಕೆ ಬಜೆಟ್ ಆಗಿಲ್ಲ. ಅಷ್ಟೇ ಅಲ್ಲದೆ ಯಾವುದೋ ಒಂದು ವರ್ಗಕ್ಕೆ ಅನುಕೂಲ ಮಾಡಿಕೊಡುವ ಬಜೆಟ್​​ ಕೂಡ ಅಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ, ಸರ್ತೋಮುಖ ವಿಕಾಸದ ಕನಸು ಹೊತ್ತ ಬಜೆಟ್ ಇದು ಎಂದು ಡಾ.ಸುಧಾಕರ್ ಬಣ್ಣಿಸಿದ್ದಾರೆ.

ಅಭಿವೃದ್ಧಿ ದಿಕ್ಸೂಚಿಯ ಬಜೆಟ್: ಕೆ.ಗೋಪಾಲಯ್ಯ

ರೈತರು, ಶ್ರಮಿಕರು, ಉದ್ದಿಮೆದಾರರು ಸೇರಿದಂತೆ ರಾಜ್ಯದ ಎಲ್ಲ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು‌ ಇಂದು ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದ್ದಾರೆ.

ಅಭಿವೃದ್ದಿ ಪೂರಕ ಹಾಗೂ ಚಲನಶೀಲ ಬಜೆಟ್: ಗೃಹ ಸಚಿವ ಆರಗ ಜ್ಞಾನೇಂದ್ರ

ಮುಖ್ಯಮಂತ್ರಿ ಶ್ರಿ ಬಸವರಾಜ ಬೊಮ್ಮಾಯಿ ಅವರು, ಮಂಡಿಸಿದ 2022-23 ಸಾಲಿನ ಆಯವ್ಯಯ, ರಾಜ್ಯದ ಎಲ್ಲಾ ಭಾಗಗಳ ಸಮಗ್ರ ಅಭಿವೃದ್ದಿ ದೃಷ್ಟಿಕೋನ ವನ್ನು ಹೊಂದಿದ್ದು, ಪ್ರಗತಿಗೆ ಪೂರಕವಾಗಿದೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಭರವಸೆ ಮೂಡಿಸುವ ಆಯವ್ಯಯವಾಗಿದೆ. ಮಾರಕ ಕರೋನ ಸಾಂಕ್ರಮಿಕ. ರೋಗದಿಂದ, ಕರ್ನಾಟಕವೂ ಸೇರಿದಂತೆ ಇಡೀ ವಿಶ್ವವೇ ಆರ್ಥಿಕವಾಗಿ ತತ್ತರಿಸಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯವರು, ತಮಗಿರುವ ಅಪಾರ ಆಡಳಿತ ಜ್ಞಾನ ಹಾಗೂ ಸಾಂವಿಧಾನಿಕ ಅನುಭವದ ಸ್ಪರ್ಶವನ್ನು ಆಯವ್ಯಯದಲ್ಲಿ ಕಾಣಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಅಭಿವೃದ್ಧಿಯಲ್ಲಿ ಇಡೀ ರಾಷ್ಟ್ರದಲ್ಲಿಯೇ ಮುಂಚೂಣಿ ರಾಜ್ಯ ವಾಗಿರುವ ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು, ಆರ್ಥಿಕತೆಯ ಬೆನ್ನೆಲುಬಾಗಿರುವ, ಮಾನವ ಸಂಪನ್ಮೂಲ, ಇಂಧನ, ನೀರವಾರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಹಿಂದುಳಿದ, ಪರಿಶಿಷ್ಟ ಜಾತಿ ಜನಾಂಗ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ದಿ ಕಾರ್ಯಗಳಿಗೆ, ಹೊಸ ಚೈತನ್ಯ ಒದಗಿಸುವ ನಿಟ್ಟಿನಲ್ಲಿ ಈ ಆಯವ್ಯಯ, ಭರವಸೆಯ ಬೆಳಕು ಎನಿಸಲಿದೆ ಎಂದು ತಿಳಿಸಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಪೂರಕ ಚಿಂತನೆಯ ರಾಜ್ಯ ಬಜೆಟ್: ನಳಿನ್‍ಕುಮಾರ್ ಕಟೀಲ್

ಕೋವಿಡ್ ಸಾಂಕ್ರಾಮಿಕದ ಬಳಿಕ ಚೇತರಿಸಿಕೊಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಕಳೆದ ಸಾಲಿನ ಬಜೆಟ್‍ಗಿಂತ ಶೇ 7.7ರಷ್ಟು ಹೆಚ್ಚು ಪ್ರಮಾಣದ ಬಜೆಟ್ ಇದಾಗಿದ್ದು, ಶಿಕ್ಷಣ- ಉದ್ಯೋಗ- ಸಬಲೀಕರಣಕ್ಕೆ ಆದ್ಯತೆ ನೀಡಲಿದೆ. ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ ಮತ್ತು ವಿಶೇóಷ ಉಪಕ್ರಮಗಳಿರುವ ಆಯವ್ಯಯ ಪತ್ರ. ಇದಾಗಿದ್ದು, ರೈತ ಶಕ್ತಿ ಹೊಸ ಯೋಜನೆ ಪ್ರಕಟಿಸಲಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ನವಭಾರತಕ್ಕೆ ಪೂರಕವಾಗಿರುವ ನೂತನ ಕರ್ನಾಟಕದ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ದೂರದೃಷ್ಟಿ ಇರುವ ಮತ್ತು ಸರ್ವಸ್ಪರ್ಶಿ ಯೋಜನೆಗಳಿರುವ ಬಜೆಟ್ ಇದಾಗಿದೆ. ಇದನ್ನು ಸ್ವಾಗತಿಸುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

English summary
Karnataka Ministers, Political leaders Former Reaction to Karnataka Budget 2022-23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X