ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಲೇಖನ: ಮಕ್ಕಳಿಗೆ ಮುದ ನೀಡುವ ಕ್ರಿಸ್ಮಸ್,ಸಾಂತಾಕ್ಲಾಸ್

By ಯಜಮಾನ್ ಫ್ರಾನ್ಸಿಸ್
|
Google Oneindia Kannada News

ಮಕ್ಕಳಿಗೆ ಕ್ರಿಸ್ಮಸ್ ಇನ್ನೊಂದು ತೆರನಾಗಿ ಖುಷಿ ಕೊಡುತ್ತದೆ. ಕೆಂಪು ನಿಲುವಂಗಿ, ಉದ್ದನೆಯ ಟೊಪ್ಪಿ ಧರಿಸಿದ, ಬಿಳಿಗಡ್ಡ, ಡುಮ್ಮಹೊಟ್ಟೆಯ ಸಾಂತಾಕ್ಲಾಸ್, ಕ್ರಿಸ್ಮಸ್ ಮುನ್ನಾದಿನ ರಾತ್ರಿ ಮನೆಗೆ ಬಂದು ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾನೆಂದು ಮಕ್ಕಳಿಗೆ ಕತೆ ಹೇಳಲಾಗಿದೆ. ಮಗು ಮಲಗಿದ ಮೇಲೆ, ತಲೆದಿಂಬಿನ ಪಕ್ಕ ಪುಟ್ಟ ಉಡುಗೊರೆಯನ್ನು ಇಟ್ಟ ತಾಯಿ, ಮಗು ಎದ್ದು ಸಂಭ್ರಮಿಸುವುದನ್ನು ಕಂಡು ಜೀವ ತುಂಬಿಕೊಳ್ಳುತ್ತಾಳೆ.

ಈ ಸಾಂತಾಕ್ಲಾಸ್ ಕಲ್ಪನೆ ಇತ್ತೀಚಿನದು! ಸಾಂತಾಕ್ಲಾಸ್ ಗೆ ಸಂತ ನಿಕೋಲಸ್ ಎನ್ನುವ ಇನ್ನೊಂದು ಹೆಸರೂ ಇದೆ. ಗ್ರೀಕ್ ಬಿಷಪ್ಪರಾಗಿದ್ದ, 4ನೇ ಶತಮಾನದಲ್ಲಿ ಬದುಕಿದ್ದ ಸಂತ ನಿಕೋಲಸ್ ರಿಗೆ ಬಡಬಗ್ಗರನ್ನು ಕಂಡರೆ ಅಪಾರವಾದ ಪ್ರೀತಿ. ಅದೆಲ್ಲಿಂದಾದರೂ ಏನಾದರೂ ತಂದು ಅವರಿಗೆ ಕೊಡದಿದ್ದರೆ ಮನಸ್ಸೇ ನಿಲ್ಲುತ್ತಿರಲಿಲ್ಲ. ಈ ವ್ಯಕ್ತಿತ್ವವೇ ಬಹುಶಃ ಸಾಂತಾಕ್ಲಾಸ್ ಎಂಬ ಕಲ್ಪನೆಗೆ ನಾಂದಿ ಹಾಡಿರಬಹುದು ಎಂದು ಕಾಣುತ್ತದೆ.

ಈ ಕಾಲದಲ್ಲಿ ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಕ್ರಿಸ್ಮಸ್ ರೂಪಕಗಳನ್ನು, ನಾಟಕ - ನೃತ್ಯಗಳನ್ನು, ಕ್ರಿಸ್ಮಸ್ ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಂಡು ಇನ್ನಷ್ಟು ರಂಗೇರಿಸುತ್ತವೆ. [ಕ್ರಿಸ್ಮಸ್ ಹಬ್ಬದ ಕುರಿತ ಸೋಜಿಗ ಸ್ವಾರಸ್ಯಗಳು]

Christmas Santa

ಕ್ರಿಸ್ಮಸ್ ಮುನ್ನಾದಿನ: ಡಿಸೆಂಬರ್ 24ರ ಮಂಜುಗಟ್ಟಿದ ರಾತ್ರಿ ಜನರು ಚರ್ಚುಗಳಲ್ಲಿ ಜಮಾಯಿಸುತ್ತಾರೆ. ರಾತ್ರಿ 11ಕ್ಕೆ ದೇವಾಲಯಗಳಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ನೊಂದಿಗೆ ಧಾರ್ಮಿಕ ಪೂಜಾವಿಧಿಗಳು ತೊಡಗುತ್ತವೆ. ಗಡಿಯಾರ ಸರಿಯಾಗಿ ಹನ್ನೆರಡು ಘಂಟೆಗೆ ಟಣ್ಣೆನ್ನುವಾಗ, ಚರ್ಚಿನ ಮುಖ್ಯಸ್ಥರಾದ ಗುರುಗಳು, ಬಾಲಯೇಸುವಿನ ಪ್ರತಿಮೆಯನ್ನು ಸಕಲ ಸಿದ್ಧ ರಾಜಮರ್ಯಾದೆಯೊಂದಿಗೆ ತಂದು, ಅದಾಗಲೇ ಸೃಷ್ಠಿಸಿದ ಗೋದಲಿಯಲ್ಲಿ ಇಡುತ್ತಾರೆ.

ಹಳ್ಳಿಗಳಲ್ಲಿನ ಸಂಭ್ರಮಾಚರಣೆ: ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ಮನೆಗಳಲ್ಲಿ ಈ ಕ್ಷಣಕ್ಕಾಗಿಯೇ ಪಾತ್ರೆಪಗಡೆಗಳಲ್ಲಿ ಬೆಳೆಸಿದ ರಾಗಿ, ಭತ್ತದ ಪೈರುಗಳನ್ನು ತಂದು ಸಾಲಾಗಿ ಗೋದಲಿಯ ಮುಂದೆ ಜೋಡಿಸುತ್ತಾರೆ. [ಕ್ರಿಸ್ಮಸ್ ಟ್ರೀ ಮನೆಯೊಳಗಿಡುವುದು ಅಪಾಯ]

Christmas Prayer

ಈ ರೀತಿ ರಾಗಿ ಅಥವಾ ಭತ್ತದ ಪೈರುಗಳನ್ನು ಬೆಳೆಸುವುದರ ಹಿಂದೆ ಒಂದು ಸ್ವಾರಸ್ಯಕರ ಜನಪದ ಕತೆಯಿರುವುದನ್ನು ಜಾನಪದ ಸಂಶೋಧಕರಾದ ಎಫ್. ಎಂ. ನಂದಗಾವ್ ಗುರುತಿಸುತ್ತಾರೆ. ಆದರೆ ನಗರೀಕರಣದಿಂದಾಗಿ ಇತ್ತೀಚೆಗೆ ಈ ಸಂಪ್ರದಾಯವೂ ಮರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಪೈರುಗಳನ್ನು ಹೊತ್ತ ಕುಂಡಗಳು ಕಾಣಿಸಿಕೊಂಡರೆ ಆಶ್ಚರ್ಯವೇನಿಲ್ಲ.

ಬಾಲಯೇಸುವಿನ ಸ್ವರೂಪದ ಪ್ರತಿಷ್ಠಾಪನೆಯ ತರುವಾಯ, ವಿವಿಧ ಕ್ರೈಸ್ತ ಧಾರ್ಮಿಕ ಪಂಗಡಗಳ ವಿಧಿವಿಧಾನಗಳಂತೆ ಬಲಿಪೂಜಾವಿಧಿಗಳು ಮುಂದುವರಿಯುತ್ತವೆ. ಮರುದಿನ ಅಂದರೆ ಡಿಸೆಂಬರ್ 25ರಂದು ಜನರು ಮನೆಮನೆಗೆ ತೆರಳಿ ಶುಭಾಶಯ ಕೋರುತ್ತಾ, ತಯಾರಿಸಿದ ಸಿಹಿತಿಂಡಿಗಳನ್ನು ಹಂಚಿಕೊಂಡು ಹಬ್ಬದ ಆನಂದವನ್ನು ಇಮ್ಮಡಿಗೊಳಿಸುತ್ತಾರೆ. ಮಂಗಳೂರು, ಗೋವಾ, ಮಡಿಕೇರಿ ಮೂಲದವರು ಜೊತೆಯಲ್ಲಿ ದ್ರಾಕ್ಷಾರಸ ತಯಾರಿಸಿ ಹಂಚುತ್ತಾರೆ. [ಕ್ರಿಸ್ಮಸ್ ಗೆ ರೆಡಿ ಮಾಡಿ ಎಗ್ ನಾಗ್ ರೆಸಿಪಿ]

Christmas

ಡಿಸೆಂಬರ್ 31ರ ರಾತ್ರಿ ಹುಲ್ಲಿನಿಂದ ಮಾಡಿದ ಬೆರ್ಚಪ್ಪನಂತೆ ಕಾಣುವ ಹಳೆಯ ಮನುಷ್ಯಾಕೃತಿಯೊಂದನ್ನು ಸುಟ್ಟುಹಾಕುವುದರೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಕ್ರಿಸ್ಮಸ್ ಮುಗಿದ ಮೂರು ವಾರಗಳ ತರುವಾಯ,

ಪೂರ್ವದೇಶದ ರಾಜರು ಬಂದು ಯೇಸುವನ್ನು ಸಂದರ್ಶಿಸಿದರೆನ್ನಲಾದ ದಿನ, ಗೋದಲಿ ಹಾಗೂ ನಕ್ಷತ್ರವನ್ನು ತೆಗೆಯಲಾಗುತ್ತದೆ. ಸಂಕ್ರಾಂತಿಯ ದಿನದ ಹಾಗೆ ದನಕರುಗಳನ್ನು ಸಿಂಗರಿಸಿ ದೇವಾಲಯದ ಆವರಣಕ್ಕೆ ತಂದು ವಿಶೇಷವಾಗಿ ಪ್ರಾರ್ಥಿಸುವುದರೊಂದಿಗೆ ಕ್ರಿಸ್ಮಸ್ ಆಚರಣೆ ಕೊನೆಗೊಳ್ಳುತ್ತದೆ.

English summary
Christmas traditions vary from country to country. Elements common to many parts of Karnataka include the installing and lighting of Christmas trees, the hanging of Advent wreaths, Christmas stockings, candy canes, and the creation of Nativity scenes depicting the birth of Jesus Christ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X