ಚಿಕ್ಕಮಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಚಿಕ್ಕಮಗಳೂರು, ಜ.31 : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯ ನಿವಾಸಿಗಳಾದ ಉಮೇಶ್ (30), ಜಯಲಕ್ಷ್ಮೀ (26) ಮಕ್ಕಳಾದ ಹೇಮಾ (4) ಮತ್ತು ಶಿವು (1) ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. [ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]

ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಉಮೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಉಮೇಶ್ ಮನೆಗೆ ಆಗಮಿಸಿದ್ದನ್ನು ಅಕ್ಕಪಕ್ಕದ ನಿವಾಸಿಗಳು ನೋಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಊಟದಲ್ಲಿ ವಿಷ ಬೆರಸಿ ಪತ್ನಿ ಮತ್ತು ಮಕ್ಕಳಿಗೆ ತಿನ್ನಿಸಿ ಉಮೇಶ್ ನೇಣು ಬಿಗಿದುಕೊಂಡು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಟ್ರಾಕ್ಟರ್ ಚಾಲಕನಾಗಿದ್ದ : ಮೃತ ಉಮೇಶ್ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಬಹಳ ಹೊತ್ತಾದರೂ ಉಮೇಶ್ ಕೆಲಸಕ್ಕೆ ಬಂದಿರಲಿಲ್ಲ. ಟ್ರ್ಯಾಕ್ಟರ್ ಮಾಲೀಕರು ಹಲವು ಮೊಬೈಲ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಮತ್ತೊಬ್ಬ ಕೆಲಸಗಾರನನ್ನು ಉಮೇಶನ ಮನೆಗೆ ಕಳುಹಿಸಿದ್ದರು. ಕೆಲಸಗಾರ ಉಮೇಶನ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.












Click it and Unblock the Notifications