Water Crisis: ಬೆಂಗಳೂರು ಮಾತ್ರವಲ್ಲ... ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ!
ಚಿಕ್ಕಮಗಳೂರು, ಫೆಬ್ರವರಿ.23: ರಾಜ್ಯದಲ್ಲಿ ಈ ಬಾರಿ ಬಿರು ಬೇಸಿಗೆಗು ಮುನ್ನವೇ ನಿರಿನ ಅಭಾವ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ನೀರಿಗೆ ಹಾಹಾಕಾರ ಶುರುವಾಗಿ ಹಲವು ಏರಿಯಾಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಟ್ಯಾಂಕರ್‌ಗಳ ಬೆಲೆ ಗಗನಕ್ಕೆ ಏರಿದೆ. ಇದರ ನಡುವೆಯೇ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿಯೂ ಕುಡಿಯುವ ನೀರಿಗೆ ಪರದಾಟ ಶುರುವಾಗಿದೆ!.
ಹೌದು.. ಆಶ್ಚರ್ಯವಾದರೂ ಕೂಡ ಇದು ಸತ್ಯ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಜನ ನೀರಿಗಾಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದು, ಮಹಿಳೆಯರು, ಮಕ್ಕಳು ಎನ್ನದೆ ಜನ ಖಾಲಿ ಪ್ಲಾಸ್ಟಿಕ್ ಕೊಡಗಳೊಂದಿಗೆ ಟ್ರ್ಯಾಕ್ಟರ್ ಕಡೆಗೆ ಓಡುವ ದೃಶ್ಯ ಸಾಮಾನ್ಯವಾಗಿದೆ.

ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ದಂಡೂರು, ಚೀರನಹಳ್ಳಿಗಳಲ್ಲಿ ನೀರಿನ ಅಭಾವವಿದ್ದು, ಚೀರನಹಳ್ಳಿ ಗ್ರಾಮ ಪಂಚಾಯಿತಿಯಿಂದ ಪ್ರತಿ ದಿನ ತಲಾ 6 ಸಾವಿರ ಲೀಟರ್‌ನ ಎರಡು ಟ್ಯಾಂಕರ್‌ಗಳನ್ನು ಕಳುಹಿಸಲಾಗುತ್ತಿದ್ದು, ಇದು ಕೂಡ ಜನಕ್ಕೆ ಸಾಕಾಗುತ್ತಿಲ್ಲ ಎನ್ನುತ್ತಾರೆ ನಿವಾಸಿಗಳು.
ಬೋರ್‌ವೆಲ್‌ಗಳನ್ನೇ ಅವಲಂಬಿಸಿರುವ ಗ್ರಾಮಗಳಿಗೆ ಸಂಕಷ್ಟ
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಟ್ಯಾಂಕರ್ ಹಿಂದೆ ಜನ ಓಡುವುದು, ನೀರಿಗಾಗಿ ಜನರ ಜಗಳ ನಿತ್ಯದ ದೃಶ್ಯವಾಗಿದೆ. ಬರಗಾಲದಿಂದ ಅಂತರ್ಜಲ ಕುಸಿದಿರುವುದರಿಂದ ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳನ್ನೇ ಹೆಚ್ಚು ಅವಲಂಬಿಸಿರುವ ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಚಿಕ್ಕಮಗಳೂರು ಜಿಲ್ಲಾಡಳಿತವು ಖಾಸಗಿ ಬೋರ್‌ವೆಲ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡುತ್ತಿದೆ. ಫೆಬ್ರವರಿಯಲ್ಲಿಯೇ ಪರಿಸ್ಥಿತಿ ಇಷ್ಟು ಹದಗೆಟ್ಟರೆ, ಏಪ್ರಿಲ್‌ನಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಪ್ರಸ್ತುತ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ 20 ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಅಲ್ಲದೆ, ಸುಮಾರು 60 ಹಳ್ಳಿಗಳು ನೀರಿನ ತೊಂದರೆಗೆ ಒಳಗಾಗಿವೆ.
ಹೊಳೆಗಳ ಮೇಲೆ ಅವಲಂಬಿತರಾದವರೂ ಕಂಗಾಲಾಗಿದ್ದಾರೆ!
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ 10 ಟ್ಯಾಂಕರ್‌ಗಳನ್ನು ನೀರು ಪೂರೈಕೆಗಾಗಿ ನಿಯೋಜಿಸಿದೆ ಮತ್ತು ಎಂಟು ಖಾಸಗಿ ಬೋರ್‌ವೆಲ್‌ಗಳನ್ನು ಟ್ಯಾಪ್ ಮಾಡಿ ಬೇಡಿಕೆಯನ್ನು ಪೂರೈಸಿದೆ. ''ಚಿಕ್ಕಮಗಳೂರು, ಅಜ್ಜಂಪುರ, ಕಡೂರು, ತರೀಕೆರೆ ಮತ್ತು ಎನ್‌ಆರ್ ಪುರದಲ್ಲಿ ನೀರಿಲ್ಲದೆ ಹಾನಿಗೊಳಗಾದ ಬಹುತೇಕ ಹಳ್ಳಿಗಳು ಇವೆ. ಸದ್ಯಕ್ಕೆ ಮಲೆನಾಡು ಭಾಗದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೃಂಗೇರಿ, ಕೊಪ್ಪ ಮತ್ತು ಮೂಡಿಗೆರೆಯ ಮಲೆನಾಡು ತಾಲೂಕುಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಬೆಟ್ಟದ ತುದಿಗಳಿಂದ ಹರಿಯುವ ತೊರೆಗಳನ್ನು ಅವಲಂಬಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಹೊಳೆಗಳು ಬತ್ತಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇವರಿಗಾಗಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಜಲ ಮಾಲಿನ್ಯದ ವಿರುದ್ಧ ಅಭಿಯಾನ
ಇನ್ನು, ನೀರಿನ ಅಭಾವದ ಬೆನ್ನಲ್ಲೆ ಜಲ ಮಾಲಿನ್ಯ ತಡೆಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಲವು ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಉಳಿಸಿ ಮನುಕುಲ, ಕಲುಷಿತವಾಗದಿರಲಿ ಜೀವಜಲ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಿಗಳು ಅಭಿಯಾನ ನಡೆಸುತ್ತಿದ್ದಾರೆ.
ಇನ್ನು, ದಕ್ಷಿಣ ಕನ್ನಡದಲ್ಲಿ 39 ಗ್ರಾಮಗಳು, ನಗರ ಪ್ರದೇಶದ 112 ವಾರ್ಡ್‌ಗಳು ಕುಡಿಯುವ ನೀರಿನ ಕೊರತೆ ಎದುರಿಸುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ನೀರಿಗೆ ಹಾಹಾಕಾರ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
(ಮಾಹಿತಿ : ದಿ ಹಿಂದೂ)












Click it and Unblock the Notifications