ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಬರ್ಬರ ಹತ್ಯೆ: ಸಿಎಂ ಖಡಕ್ ಎಚ್ಚರಿಕೆ
ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ದತ್ತ ಜಯಂತಿ ಬ್ಯಾನರ್ ವಿಚಾರವಾಗಿ ನಡೆದಿರುವ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಕೊಲೆಯಾಗಿದೆ.
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಲ್ಮುರುಡೇಶ್ವರ ಮಠದ ಬಳಿ ದತ್ತ ಜಯಂತಿ ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ ನಡೆದ ಗುಂಪು ಘರ್ಷಣೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಸುಮಾರು ಎಂಟು ಮಂದಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಗಲಾಟೆ ವೇಳೆ ಅವರರೂ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಗಣೇಶ್ ಗೌಡ ಅವರ ಸಾವಿನಿಂದ ಅವರ ಕುಟುಂಬ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಕೊಲೆಗೈದ ಪಾತಕಿಗಳು ಮತ್ತು ಅವರ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆಮಾಡಿ, ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆಗೆ ಒಳಪಡಿಸುವಂತೆ ನೋಡಿಕೊಳ್ಳುವ ಮೂಲಕ ಅವರ ಸಾವಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಶಾಂತಿ, ಸಾಮರಸ್ಯ ಬಯಸುವ ಜನರ ವಿರುದ್ಧ ಶಸ್ತ್ರ ಹಿಡಿದು ಬರುವ ಪ್ರತಿ ಭಯೋತ್ಪಾದಕನನ್ನು ಕಾನೂನಿನ ಮೂಲಕವೇ ಹೆಡೆಮುರಿ ಕಟ್ಟುತ್ತೇವೆ. ಮೃತ ಗಣೇಶ್ ಕುಟುಂಬದ ಜೊತೆ ನಮ್ಮ ಪಕ್ಷ ಮತ್ತು ಸರ್ಕಾರ ದೃಢವಾಗಿ ನಿಲ್ಲಲಿದೆ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡನನ್ನು ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಹಂತಕರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. ಮೃತ ಗಣೇಶ್ ಗೌಡನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಸಂತಾಪ ಸೂಚಿಸಿದ್ದಾರೆ.












Click it and Unblock the Notifications