ಪವರ್ ಶೇರಿಂಗ್; ಕೆ ಸಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ: ಚರ್ಚೆಯಾಗಿದ್ದೇನು?
ಮಂಗಳೂರು, ಡಿಸೆಂಬರ್ 03: ರಾಜ್ಯದಲ್ಲಿ ಪವರ್ ಶೇರಿಂಗ್ ವಿಚಾರವಾಗಿ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಬ್ರೇಕ್‌ಫಾಸ್ಟ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಮುಂದೆಯೂ ಸಹ ಒಗ್ಗಟ್ಟಾಗಿ ಮುಂದುವರೆಯುತ್ತೇವೆ ಎಂದು ಒಗ್ಗಟ್ಟು ಪ್ರದರ್ಶಿಸಿದ್ದರು, ಇದೀಗ ಮಂಗಳೂರಿಗೆ ಆಗಮಿಸಿದ ಕೆ ಸಿ ವೇಣುಗೋಪಾಲ್ ಅವರನ್ನ ಮುಖ್ಯಮಂತ್ರಿ ಭೇಟಿಯಾಗಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಪವರ್ ಶೇರಿಂಗ್ ಮತ್ತು ಸಿಎಂ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವಾಗ, ಈ ಮುಖಾಮುಖಿ ಭೇಟಿಯೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ನಾರಾಯಣ ಗುರು-ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಇಬ್ಬರೂ ಆಗಮಿಸಲಿದ್ದು, ರಾಜಕೀಯ ಚರ್ಚೆಗಳು ಮಂಗಳೂರಿನ ವಾತಾವರಣವನ್ನು ಇನ್ನಷ್ಟು ಗರಿಗೆದರಿಸಿವೆ.

ರಾಜ್ಯದಲ್ಲಿ ಸಿಎಂ ಬದಲಾವಣೆ, ಪವರ್ ಶೇರಿಂಗ್ ಪರಿಷ್ಕರಣೆ ಸೇರಿದಂತೆ ಹಲವು ರಾಜಕೀಯ ಚರ್ಚೆಗಳ ನಡುವೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಸಿ. ವೇಣುಗೋಪಾಲ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಗೌಪ್ಯ ಚರ್ಚೆ ಸಾಧ್ಯತೆ ಇದ್ದು, ಹೈಕಮಾಂಡ್ ನೀಡಿರುವ ಸಂದೇಶವನ್ನು ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಕೆಲ ದಿನಗಳಲ್ಲೇ ದೆಹಲಿಗೆ ಕರೆದು ಮುಂದಿನ ಹಂತದ ಮಾತುಕತೆ ನಡೆಸುವ ಸಾಧ್ಯತೆ ಇದೆ.
ವೇಣುಗೋಪಾಲ್ ಭೇಟಿ ಬಗ್ಗೆ ಸಿಎಂ ಹೇಳಿದ್ದೇನು?
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅವರು ಹೋಗುವುದಕ್ಕೆ ಯಾರೂ ಬೇಡ ಅಂದಿಲ್ಲ. ನೀವು ದೆಹಲಿಗೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾನು ಹೋಗುವುದಿಲ್ಲ. ನನ್ನನು ಕರೆದರೆ ಮಾತ್ರ ದೆಹಲಿಗೆ ತೆರಳುವೆ ಎಂದು ಹೇಳಿದರು.












Click it and Unblock the Notifications