ಡಿ ಕೆ ಶಿವಕುಮಾರ್ ಬಣದ ಇಬ್ಬರು ನಾಯಕರಿಗೆ ನೋಟಿಸ್: ಕಾರಣವೇನು?
ಬೆಂಗಳೂರು, ಅಕ್ಟೋಬರ್ 03: ರಾಜ್ಯ ಕಾಂಗ್ರೆಸ್ ನಲ್ಲಿ ದಸರಾ ಹಬ್ಬದ ಮಧ್ಯೆ ಮತ್ತೆ ಪವರ್ ಶೇರಿಂಗ್ ಚರ್ಚೆ ಮುನ್ನಲೆಗೆ ಬಂದಿದೆ. ನವೆಂಬರ್‌ನಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಕ್ರಾಂತಿಯಾಗುತ್ತದೆ ಎಂಬ ಮಾತುಗಳನ್ನು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕೆಲ ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಹೇಳಿಕೆಯಿಂದಾಗಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಯಾರಿಗೂ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದಕ್ಕೆ ಹಕ್ಕಿಲ್ಲ. ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಯಾರು ಸಹ ಮಾತನಾಡಬಾರದು. ಅವರಿಗೆ ನೋಟಿಸ್ ಕೊಡಲು ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದು ಅಧಿಕಾರ ಹಂಚಿಕೆ ಸಂಬಂಧ ಪರೋಕ್ಷ ಹೇಳಿಕೆ ನೀಡಿರುವ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಮತ್ತು ಎಲ್. ಆರ್. ಶಿವರಾಮೇಗೌಡಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ನೋಟಿಸ್ ನೀಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಇಬ್ಬರು ಕಾಂಗ್ರೆಸ್ ನಾಯಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಕಾರಣ ಕೇಳಿ ರಂಗನಾಥ್ ಗೆ ನೋಟಿಸ್
ಡಾ: ರಂಗನಾಥ್, ಶಾಸಕರು, ಕುಣಿಗಲ್ ವಿಧಾನಸಭೆ, ತುಮಕೂರು ಜಿಲ್ಲೆ ಆದ ತಾವು ನಿನ್ನೆಯ ದಿನ ಮಾಧ್ಯಮಗಳಿಗೆ ಮುಖ್ಯಮಂತ್ರಿಗಳ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗುವ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದೆಂದು ಎಐಸಿಸಿ ಸೂಚನೆ ಇದ್ದಾಗ್ಯೂ ತಾವು ಈ ಬಗ್ಗೆ ಹೇಳಿಕೆ ನೀಡಿದ್ದೀರಿ.
ಈ ವಿಷಯದಲ್ಲಿ ನಿಮ್ಮ ಮಾಧ್ಯಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆಗೆ ಕಾರಣವಾಗುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟೀಸು ನೀಡಲಾಗಿದೆ. ತಾವುಗಳು ಈ ನೋಟೀಸು ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಎಲ್. ಆರ್. ಶಿವರಾಮೇಗೌಡ ಅವರು ಮಾತನಾಡಿದ್ದರು. ಡಿ ಕೆ ಶಿವಕುಮಾರ್ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಇನ್ನೂ ಡಿ ಕೆ ಶಿವಕುಮಾರ್ ಆಪ್ತ ಹಾಗೂ ಕಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನಗಳನ್ನು ಪಡೆದಿರುವುದರ ಹಿಂದೆ ಶಿವಕುಮಾರ್ ಅವರು ಶಕ್ತಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಡಿ.ಕೆ. ಶಿವಕುಮಾರ್ ಅವರಂತೆ ಬೆಳಗ್ಗೆ 8 ರಿಂದ ರಾತ್ರಿ 3 ಗಂಟೆಯ ತನಕ ಕೆಲಸ ಮಾಡುವ ನಾಯಕರಿದ್ದರೆ ನನಗೆ ತಿಳಿಸಿ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಡಿ. ಕೆ. ಶಿವಕುಮಾರ್ ಅವರು ಒಂದಲ್ಲ ಒಂದು ದಿನ, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ನಾವೆಲ್ಲರೂ ಅಪೇಕ್ಷೆ ಪಡುತ್ತೇವೆ ಎಂದು ಹೇಳಿದ್ದರು.












Click it and Unblock the Notifications