'ಸಾಂದೀಪಿನಿ ವಿದ್ಯಾರ್ಥಿವೇತನ' ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಸೆ. 06: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಜಾರಿಗೊಳಿಸುತ್ತಿರುವ ಸಾಂದೀಪನಿ ವಿದ್ಯಾರ್ಥಿವೇತನವನ್ನು ಡಿಬಿಟಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬಿಡುಗಡೆ ಮಾಡಿದರು.
"ಸಾಂದೀಪಿನಿ ವಿದ್ಯಾರ್ಥಿವೇತನ ಯೋಜನೆಯಿಂದ ಬ್ರಾಹ್ಮಣ ಸಮುದಾಯದ 9,206 ವಿದ್ಯಾರ್ಥಿಗಳಿಗೆ 13.77 ಕೋಟಿ ರೂ.ಗಳ ವಿದ್ಯಾರ್ಥಿ ವೇತನವನ್ನು ಮಂಡಳಿ ನೀಡುತ್ತಿದೆ. ಬ್ರಾಹ್ಮಣ ಬುದ್ಧಿವಂತಿಕೆಯೊಂದಿಗೆ ಸ್ಥಿತ ಪ್ರಜ್ಞತೆಯನ್ನು ಹೊಂದಿದ್ದಾರೆ. ಇದರಿಂದ ದೇಶ, ಸಮಾಜಕ್ಕೆ ಅನುಕೂಲವಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ಅಭಿಪ್ರಾಯ ಪಟ್ಟಿದ್ದಾರೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಕಾರ್ಯಾರಂಭ ಮಾಡಿದ ಅಲ್ಪಾವಧಿಯಲ್ಲೇ ವ್ಯವಸ್ಥೆಯೊಳಗೇ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ನೆರವು ನೀಡಲು ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಬ್ರಾಹ್ಮಣರಲ್ಲಿ ಐಟಿ, ಬಿಟಿ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದಾಗ್ಯೂ ಆರ್ಥಿಕವಾಗಿ ಹಿಂದುಳಿದವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆಯೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಪ್ರೋತ್ಸಾಹ ನೀಡಿದ್ದರು ಎಂದು ಬೊಮ್ಮಾಯಿ ಹೇಳಿದರು.

ಇದೇ ವೇಳೆ ಬ್ರಾಹ್ಮಣ ರೈತರಿಗೆ ಕೃಷಿ ಆಧಾರಿತ ಉದ್ಯಮ ಸ್ಥಾಪನೆಗೆ ನೆರವು ನೀಡುವ ಅನ್ನದಾತ ಯೋಜನೆಗೆ ಹಾಗೂ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಒದಗಿಸುವ ಪುರುಷೋತ್ತಮ ಯೋಜನೆಗೆ ಚಾಲನೆ ನೀಡಿದರು. ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ, ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ, ನಿಗಮದ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ, ಶಾಸಕ ಸತೀಶ್ ರೆಡ್ಡಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications