ಚೆಕ್ ಬೌನ್ಸ್ ಕೇಸ್: ಸಚಿವ ಮಧು ಬಂಗಾರಪ್ಪಗೆ ಬಿಗ್ ರಿಲೀಫ್
ಬೆಂಗಳೂರು, ಜನವರಿ 01: ಚೆಕ್ ಬೌನ್ಸ್ ಪ್ರಕರಣದಲ್ಲಿ ಸೊರಬದ ಕಾಂಗ್ರೆಸ್ ಶಾಸಕ, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪಗೆ ರಿಲೀಫ್ ಸಿಕ್ಕಿದೆ. ಸಚಿವರು ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಎರಡು ದಿನಗಳ ಹಿಂದೆ ಚೆಕ್ಸ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸಚಿವ ಮಧು ಬಂಗಾರಪ್ಪ ಜನಪ್ರತಿನಿಧಿಗಳ ನ್ಯಾಯಾಲಯದ ಶಿಕ್ಷೆ ತೀರ್ಪು ಪ್ರಶ್ನಿಸಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಸಚಿವರ ಮೇಲ್ಮನವಿ ಆಲಿಸಿದ ನ್ಯಾಯಾಲದಲ್ಲಿ ದಂಡದಲ್ಲಿ ಶೇ.20 ರಷ್ಟು ಠೇವಣಿಯಿಡುವ ಷರತ್ತಿನೊಂದಿಗೆ ಶಿಕ್ಷೆ ಅಮಾನತು ಮಾಡಿದೆ.

ಸಚಿವರು 50 ಸಾವಿರ ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸಬೇಕು. ಒಂದು ತಿಂಗಳಲ್ಲಿ ಷರತ್ತು ಪಾಲಿಸದಿದ್ದರೆ ಮಧ್ಯಂತರ ರಿಲೀಫ್ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದೆ. 56ನೇ ಸಿಟಿ ಸಿವಿಲ್ ಕೋರ್ಟ್ ಈ ಕುರಿತು ಮಧ್ಯಂತರ ಆದೇಶ ನೀಡಿದೆ.
6 ಕೋಟಿ ದಂಡ ವಿಧಿಸಿದ್ದ ಕೋರ್ಟ್; ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಚಿವ ಮಧು ಬಂಗಾರಪ್ಪಗೆ 6 ಕೋಟಿ 96 ಲಕ್ಷದ 70 ಸಾವಿರ ದಂಡ ವಿಧಿಸಿತ್ತು. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸ ಅನುಭವಿಸಲು ಆದೇಶಿಸಿತ್ತು.
ಈಗ ದಂಡದ ಹಣದಲ್ಲಿ ಶೇ.20 ರಷ್ಟು ಕೋರ್ಟ್‌ಗೆ ಠೇವಣಿ ಇಡಲು ಷರತ್ತು ವಿಧಿಸಲಾಗಿದೆ. 6.60 ಕೋಟಿಯ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯು ಆಕಾಶ್ ಆಡಿಯೋ ಕಂಪನಿಯ ಎಂಡಿಯಾಗಿದ್ದ ಮಧು ಬಂಗಾರಪ್ಪವಿರುದ್ಧ ದೂರು ನೀಡಿತ್ತು.
ದೂರುದಾರ ಕಂಪನಿಗೆ 6.60 ಕೋಟಿ ಬಾಕಿ ಪಾವತಿಗೆ ಚೆಕ್ ನೀಡಿದ್ದರು, 2011ರಲ್ಲಿ ಖಾತೆಯಲ್ಲಿ ಹಣವಿಲ್ಲದೇ ಮಧು ಬಂಗಾರಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಮಧು ಬಂಗಾರಪ್ಪಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿದ್ದವು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಟ್ವೀಟ್ ಮಾಡಿ, 'ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷಾರ್ಹ ಅಪರಾಧಿ ಎಂದು ಸಾಬೀತಾಗಿದೆ. ಇದು ಸರ್ಕಾರದ ಘನತೆ ಅಷ್ಟೇ ಅಲ್ಲದೇ ಶಿಕ್ಷಣದ ಪಾವಿತ್ರ್ಯತೆಗೆ ತಗುಲಿದೆ ಕಪ್ಪು ಚುಕ್ಕೆಯಾಗಿದೆ' ಎಂದು ಹೇಳಿದ್ದರು.
'ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜೀನಾಮೆ ನೀಡಿ ತಮ್ಮ ನೈತಿಕತೆ ಪ್ರದರ್ಶಿಸಲಿ, ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸುತ್ತೇನೆ. ಭಂಡತನ ಅಂಟಿಸಿಕೊಂಡಿರುವ ಈ ಸರ್ಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಶಿಕ್ಷಣ ಮೌಲ್ಯಕ್ಕೆ ಅಪಚಾರ ಎಸಗಿದಂತಾಗುತ್ತದೆ' ಎಂದು ವಿಜಯೇಂದ್ರ ತಿಳಿಸಿದ್ದರು.
ಮಧು ಬಂಗಾರಪ್ಪಗೆ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಪುತ್ರ. ಬಂಗಾರಪ್ಪ ಕುಟುಂಬ ಕನ್ನಡ ಚಿತ್ರರಂಗದಲ್ಲಿಯೂ ತೊಡಗಿಸಿಕೊಂಡಿದೆ. ಆಕಾಶ್ ಆಡಿಯೋ ಕಂಪನಿಯನ್ನು ಸಹ ನಡೆಸುತ್ತಿದೆ.
ಮಧು ಬಂಗಾರಪ್ಪ ಪ್ರಸ್ತುತ ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಮೊದಲು ಜೆಡಿಎಸ್ ಪಕ್ಷದಲ್ಲಿದ್ದ ಅವರು 2021ರಲ್ಲಿ ಕಾಂಗ್ರೆಸ್ ಸೇರಿದ್ದರು.












Click it and Unblock the Notifications