Fraud Case: ವಂಚನೆ ಪ್ರಕರಣ ಆರೋಪಿ ಐಶ್ವರ್ಯ ಗೌಡ ವಿರುದ್ಧ ಅನ್ನದಾನಿ ಗಂಭೀರ ಆರೋಪ
ಮಂಡ್ಯ ಜನವರಿ 1: ಕೋಟಿ ಕೋಟಿ ಹಣ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಹೊರ ಬಂದ ಐಶ್ವರ್ಯ ಗೌಡ ಅವರ ವಿರುದ್ಧ ಮಾಜಿ ಶಾಸಕ ಅನ್ನದಾನಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರಿಗೆ ಐಶ್ವರ್ಯ ಹಣ ನೀಡಿದ್ದಾರೆ, ಈ ಬಗ್ಗೆ ತನಿಖೆ ಆಗಬೇಕು ಎಂದು ಅನ್ನದಾನಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು.. ಚಿನ್ನಾಭರಣ ಖರೀದಿಸಿ ಕೋಟಿ ಕೋಟಿ ಹಣ ವಂಚಿಸಿ ಜೈಲು ಸೇರಿದ್ದ ಐಶ್ವರ್ಯ ಗೌಡ ಕಳೆದ ದಿನವಷ್ಟೇ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ನಡುವೆ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ ಅವರಿಗೆ ಐಶ್ವರ್ಯ ಹಣ ನೀಡಿದ್ದಾರೆ ಎಂದು ಅನ್ನದಾನಿ ಆರೋಪ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಐಶ್ವರ್ಯ ಗೌಡ ಮೂಲತ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರಾಗಿದ್ದಾರೆ. ಆಕೆ ಮಂಡ್ಯ ಜಿಲ್ಲೆಯಲ್ಲೂ ಹಲವರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ತಲೆ ಮರೆಸಿಕೊಂಡು ಓಡಾಡುತ್ತಿದ್ದಳು. ಅಮಾಯಕರನ್ನು ಗುರಿ ಮಾಡಿಕೊಂಡು ನಂಬಿಸಿ ಅವರಿಂದ ಹಣ ಕಿತ್ತುಕೊಂಡಿದ್ದಾಳೆ. ಒಬ್ಬ ಮಹಿಳೆ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ. ಈಕೆಯ ಬೆನ್ನಹಿಂದೆ ಒಂದಿಷ್ಟು ಮುಖಂಡರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ದೂರಿದ್ದಾರೆ.
ಈಕೆಯ ವಂಚನೆಗೆ ಬೇಸತ್ತ ಜನ ಈ ಹಿಂದೆ ಕೂಡ ಪೊಲೀಸರಿಗೆ ದೂರು ನೀಡಲು ಠಾಣೆಗೆ ಹೋಗಿದ್ದರು. ಆದರೆ ಪೊಲೀಸರು ಈಕೆಯ ವಿರುದ್ಧ ದೂರು ದಾಖಲಿಸಿಕೊಳ್ಳಲೇ ಇಲ್ಲ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಐಶ್ವರ್ಯ ಹಿಂದಿರುವ ಕಾಂಗ್ರೆಸ್ ನಾಯಕರು ಯಾರೆಂದು ಗೊತ್ತಾಗಬೇಕು ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಶ್ವರ್ಯ ಗೌಡ ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿಗೆ ಹಣ ನೀಡಿದ್ದಾರೆ. ಐಶ್ವರ್ಯ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಇದೆಲ್ಲಾ ಸತ್ಯ ಹೊರಬೀಳಲಿದೆ. ಎಲ್ಲಾ ವಿಚಾರಗಳು ಬಹಿರಂಗವಾಗಲಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಅನ್ನದಾನಿ ಒತ್ತಾಯಿಸಿದ್ದಾರೆ.
ಡಿಕೆ ಸುರೇಶ್ ಸಹೋದರಿ ಎಂದು ವಂಚನೆ
ಆರೋಪಿ ಐಶ್ವರ್ಯ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಅವರ ಸಹೋದರಿ ಎಂದು ಹೇಳುವ ಮೂಲಕ ಹಣವನ್ನು ವಂಚಿಸಿದ್ದಾರೆ ಎನ್ನುವ ಆರೋಪ ಇದೆ. ಕಾಂಗ್ರೆಸ್ ನಾಯಕರ ಹೆಸರುಗಳನ್ನು ಇಷ್ಟೊಂದು ಸುಲಭವಾಗಿ ಬಳಸಲು ಹೇಗೆ ಸಾಧ್ಯ? ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಕಾಂಗ್ರೆಸ್ ಐಶ್ವರ್ಯ ಅವರ ಬೆನ್ನಿಗೆ ಇರುವುದರಿಂದಲೇ ಆಕೆ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾಳೆ. ಆಕೆಯನ್ನು ಮಂಪರ್ ಪರೀಕ್ಷೆಗೆ ಒಳಪಡಿಸಿದರೆ ಎಲ್ಲಾ ವಿಚಾರಗಳು ಬಹಿರಂಗವಾಗುತ್ತವೆ ಎಂದು ಅನ್ನದಾನಿ ಹೇಳಿದ್ದಾರೆ.
ಆದರೆ ಡಿಕೆ ಸುರೇಶ್ ಅವರು ತಮ್ಮ ಹೆಸರು ಬಳಕೆ ಮಾಡಿ ಹಣ ವಂಚಿಸಿದ ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ತಮ್ಮ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ ಮಹಿಳೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಅನ್ನದಾನಿ ಅವರು ಐಶ್ವರ್ಯ ಅವರಿಗೆ ಕಾಂಗ್ರೆಸ್ ಸಹಕಾರ ಇದೆ ಎಂದು ಯಾವ ಆಧಾರದ ಮೇಲೆ ಹೇಳಿದರು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಇದಕ್ಕೆ ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿ ಅವರೇ ಉತ್ತರ ನೀಡಬೇಕು.












Click it and Unblock the Notifications