ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕ
ಬೆಂಗಳೂರು, ಮೇ 22: 2023ರ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಮೊದಲ ಅಧಿವೇಶನ ಆರಂಭಗೊಂಡಿದ್ದು, ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಈ ವೇಳೆ ನೂತನ ಶಾಸಕರೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ.
ವಿಷಯ ಇಷ್ಟೇ, ಚನ್ನಗಿರಿ ಶಾಸಕ ಶಾಸಕ ಬಸವರಾಜ್ ಶಿವಗಂಗಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಇದಕ್ಕೆ ಸದನದಲ್ಲಿ ಇತರೆ ಸದನದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಕೂಡಲೆ ಗೊಂದಲ ಬಗೆಹರಿಸಿದ ಸ್ಪೀಕರ್, ವ್ಯಕ್ತಿ ಹೆಸರಿನ ಮೇಲೆ ಪ್ರಮಾಣ ಮಾಡಿಸದಂತೆ ವಿಧಾನಸಭೆ ಕಾರ್ಯದರ್ಶಿಗೆ ಸೂಚನೆ ನೀಡಿದರು.

ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರ ಆರ್ ವಿ ದೇಶಪಾಂಡೆ ಅವರು ನೇಮಕಗೊಂಡಿದ್ದಾರೆ. ಬಳಿಕ ಚನ್ನಗಿರಿ ಮತ ಕ್ಷೇತ್ರದ ಶಾಸಕ ಬಸವರಾಜು ವಿ ಶಿವಗಂಗಾ ಎಂಬ ಹೆಸರಿನವನಾದ ನಾನು ವಿಧಾನಸಭೆಯ ಸದಸ್ಯನಾಗಿ, ನಿರ್ವಚನ ಹೊಂದಿದವನಾಗಿ ವಿಧಿದ್ವಾರ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುತ್ತೇನೆಂದು ನಾನು ಭಾರತದ ಪರಮಾಧಿಕಾರವನ್ನು ಮತ್ತು ಸಮಗ್ರತೆಯನ್ನು ಸಮರ್ಥಿಸುತ್ತೇನೆಂದು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ಭಗವಂತ ಮತ್ತು ನನ್ನ ಆರಾಧ್ಯದೈವ ಡಿಕೆ ಶಿವಕುಮಾರ್ ಸಾಹೇಬರ ಮೇಲೆ ಪ್ರಮಾಣ ಮಾಡುತ್ತೇನೆ ಸತ್ಯನಿಷ್ಠೆಯಿಂದ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಮಾಣವಚನ ಮಾಡಿದರು.

ಬಳಿಕ ಹಂಗಾಮಿ ಸ್ಪೀಕರ್ ಆದ ಆರ್‌ವಿ ದೇಶಪಾಂಡೆ ಅವರು ಸಂವಿಧಾನ ಹಾಗೂ ದೇವರ ಹೆಸರಿನಲ್ಲಿ ಮಾತ್ರವೇ ಪ್ರಮಾಣವಚನ ಸ್ವೀಕರಿಸಬೇಕೆಂದು ಸೂಚನೆ ನೀಡಿದರು. ಇದಲ್ಲದೆ ಸೋಮವಾರ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ, ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ, ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್ ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್, ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ್, ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.












Click it and Unblock the Notifications