ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!

By: ಬಿ.ಎಂ.ಲವಕುಮಾರ್
Subscribe to Oneindia Kannada

ಚಾಮರಾಜನಗರ, ಜನವರಿ 20 : ನಿಗಿ ನಿಗಿ ಕೆಂಡದ ರಾಶಿ.. ಅದರ ಮೇಲೆ ರೊಟ್ಟಿ ಕಾಯಿಸುವುದರಲ್ಲಿ ನಿರತರಾದ ಜನರು.. ಘಮಘಮಿಸುವ ಅವರೆಕಾಯಿ, ಕುಂಬಳಪಲ್ಯ.. ನೆರೆದವರ ಮುಖದಲ್ಲಿ ಸಡಗರ ಸಂಭ್ರಮ.. ಇದೆಲ್ಲ ಕಂಡು ಬಂದಿದ್ದು ಚಾಮರಾಜನಗರದ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿಯ ರೊಟ್ಟಿಹಬ್ಬದಲ್ಲಿ.

ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ರೊಟ್ಟಿಹಬ್ಬವನ್ನು ಆಧುನಿಕತೆಯ ಕಾಲಘಟ್ಟದಲ್ಲಿಯೂ ಗಿರಿಜನರು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. [ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]

chamarajanagar

ಹಬ್ಬ ನಡೆಯುವ ವ್ಯಾಪ್ತಿಯ ಗ್ರಾಮದ ಗಿರಿಜನರು ಕೃಷಿಯನ್ನು ನಂಬಿ ಬದುಕುತ್ತಿದ್ದಾರೆ. ಸುಗ್ಗಿಕಾಲ ಆರಂಭವಾಗಿ ಧಾನ್ಯ ಮನೆಗೆ ಬರುತ್ತಿದ್ದಂತೆಯೇ ಅದರಲ್ಲಿ ಒಂದಷ್ಟನ್ನು ಉಪಯೋಗಿಸದೆ ಮಡಿಯಿಂದ ಜೋಪಾನವಾಗಿ ತೆಗೆದಿಡುತ್ತಾರೆ. [ದೀವಿ ಹಲಸು ಬೆಳೆಸಿ.. ತರಕಾರಿ ಸಮಸ್ಯೆ ನೀಗಿಸಿ..]

ಬೀಸುವ ಕಲ್ಲಿನಿಂದ ಹಿಟ್ಟು ತಯಾರಿಸಿ ನಿಗದಿತ ದಿನದಂದು ಊರವರೆಲ್ಲ ಸೇರಿ ರೊಟ್ಟಿ ಮಾಡಿ ಕುಲದೇವರಿಗೆ ನೈವೇದ್ಯ ಅರ್ಪಿಸಿ ಕುಟುಂಬಕ್ಕೂ, ಬೆಳೆಯುವ ಬೆಳೆಗೂ ಯಾವುದೇ ತೊಂದರೆಯಾಗದಿರಲಿ ಎಂದು ಬೇಡಿಕೊಳ್ಳುವುದು ರೊಟ್ಟಿ ಹಬ್ಬದ ವಿಶೇಷ. ಹಿಂದಿನಿಂದಲೂ ನಡೆದುಕೊಂಡು ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. [ಮದುವೆಗೆ ಬಂದವನು ಮುದ್ದೆ ತಿಂದು ಬಹುಮಾನ ಗೆದ್ದ]

ಇದು ಹರಕೆ ತೀರಿಸುವ ಹಬ್ಬ : ಕಾಡಂಚಿನ ಗ್ರಾಮಗಳಲ್ಲಿ ಕೃಷಿ ಮಾಡುವುದು ಸುಲಭವಲ್ಲ. ಫಸಲು ಕೈಗೆ ತಲುಪುವ ವೇಳೆಗೆ ಸಾಕು ಸಾಕಾಗುತ್ತದೆ. ಮಳೆ ಉತ್ತಮವಾಗಿ, ಕಾಡು ಪ್ರಾಣಿಗಳ ಹಾವಳಿಯಿಲ್ಲದೆ ಬೆಳೆ ಮನೆಗೆ ಬರಲಿ ಎಂದು ಜನರು ದೇವರಲ್ಲಿ ಬೇಡಿಕೊಂಡು ಹರಕೆ ಹೊರುತ್ತಾರೆ. ಫಸಲು ಮನೆಗೆ ಬರುತ್ತಿದ್ದಂತೆಯೇ ಹರಕೆ ತೀರಿಸುತ್ತಾರೆ.

ಗ್ರಾಮದ ಜನರು ತಾವು ತೆಗೆದಿಟ್ಟ ಧಾನ್ಯದಿಂದ ಹಿಟ್ಟು ತಯಾರಿಸಿಕೊಂಡು ಹಬ್ಬ ನಡೆಯುವ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯದ ಬಳಿಗೆ ಬರುತ್ತಾರೆ. ಒಂದೆಡೆ ಬೆಳಗ್ಗಿನಿಂದಲೇ ಸೌದೆ ಸಂಗ್ರಹಿಸುವ ಗಂಡಸರು ಎಲ್ಲವನ್ನೂ ರಾಶಿ ಹಾಕಿ ಉರಿಸಿ ಕೆಂಡ ತಯಾರಿಸುತ್ತಾರೆ. ಬಳಿಕ ಹಿಟ್ಟನ್ನು ಮುತ್ತುಗದ ಎಲೆ ಬಳಸಿ ತಟ್ಟಿ ರೊಟ್ಟಿ ಮಾಡಿ ನಂತರ ಕೆಂಡದ ಮೇಲಿಟ್ಟು ಬೇಯಿಸುತ್ತಾರೆ.

rotti

ಬೇಯಿಸಿದ ರೊಟ್ಟಿಯನ್ನೆಲ್ಲೇ ಗುಡ್ಡೆ ಹಾಕಿ ಅದರ ಜತೆಗೆ ಅವರೇಕಾಯಿ ಕುಂಬಳಯಿಂದ ತಯಾರಿಸಿದ ಪಲ್ಯ ಮತ್ತು ಅನ್ನ ಸಾರು ತಯಾರಿಸಿ ಕುಲದೇವರಿಗೆ ನೈವೇದ್ಯವನ್ನು ಬಡಿಸಲಾಗುತ್ತದೆ. ದೇವರಿಗೆ ನೈವೇದ್ಯ ನೀಡಿದ ನಂತರ ನೆರೆದವರೆಲ್ಲರೂ ಒಂದೆಡೆ ಕುಳಿತು ಸಾಮೂಹಿಕ ಭೋಜನ ಸವಿಯುತ್ತಾರೆ.

ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬ ಕಳೆದ ಬಳಿಕ ನಡೆಯುವ ಈ ಹಬ್ಬ ಸಂಪ್ರದಾಯ, ಸಹಬಾಳ್ವೆ, ಪ್ರಕೃತಿ ಪೂಜೆ ಹೀಗೆ ಹಲವು ವೈಶಿಷ್ಟ್ಯತೆಯನ್ನು ಸಾರುತ್ತಾ ಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kowdihalla villagers celebrated Rotti habba with traditional manner. Rotti habba a agricultural ritual is celebrated once a year at Kowdihalla village of Kollegal taluk Chamarajanagar district.
Please Wait while comments are loading...