ಆಷಾಢದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವದ ಬಗ್ಗೆ ತಿಳಿಯಿರಿ

By: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
Subscribe to Oneindia Kannada

ಚಾಮರಾಜನಗರ, ಜುಲೈ 04 : ಕರ್ನಾಟಕ ಗಡಿಭಾಗವಾದ ಚಾಮರಾಜನಗರ ತನ್ನದೇ ಆದ ವಿಶೇಷ ಸಂಸ್ಕೃತಿ, ಪರಂಪರೆ, ಇತಿಹಾಸದಿಂದ ಗಮನ ಸೆಳೆಯುತ್ತದೆ. ತಮಿಳುನಾಡು, ಕೇರಳ ರಾಜ್ಯಗಳ ಗಡಿ ಭಾಗವನ್ನು ಹೊಂದಿರುವ ಜಿಲ್ಲೆ, ಧಾರ್ಮಿಕ ಸ್ಥಳಗಳು ಮತ್ತು ಪ್ರಕೃತಿ ಶ್ರೀಮಂತಿಕೆಯ ಸಂಪತ್ತಿನಿಂದಲೂ ಕೂಡಿದೆ.

ಅರಿಕುಠಾರ ಎಂಬ ಹೆಸರಿನ ಗ್ರಾಮ ಚಾಮರಾಜನಗರವಾಗಿ ಬೆಳೆದು ಬಂದು ಜಿಲ್ಲಾ ಕೇಂದ್ರವಾಗಿದೆ. ಕ್ರಿಸ್ತಶಕ 1774ರಲ್ಲಿ ಚಾಮರಾಜ ಒಡೆಯರ್ ಚಾಮರಾಜನಗರದಲ್ಲಿ ಜನಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ-ತಾಯಿ ನೆನಪಿಗಾಗಿ 1826 ರಲ್ಲಿ ಶ್ರೀ ಚಾಮರಾಜೇಶ್ವರ ದೇವಾಲಯ ನಿರ್ಮಿಸಿದರು. ನಂತರ ಅರಿಕುಠಾರ ಎಂಬ ಊರು ಚಾಮರಾಜನಗರವಾಗಿ ಬದಲಾಯಿತು. [ಒಂದು ತಿಂಗಳಲ್ಲಿ ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ!]

chamarajanagar

ಶಿವ ಪ್ರತಿಷ್ಟೆಗಾಗಿ ಕಾಶಿಯಿಂದ ತಂದ ಲಿಂಗವನ್ನು ಅನುಗ್ರಹಿಸಿ ಶೃಂಗೇರಿ ಸ್ವಾಮೀಜಿಯವರಲ್ಲಿ ಭಿನ್ನವಿಸಿದಾಗ ಶ್ರೀಗಳು ಶೃಂಗೇರಿ ಮಠದಲ್ಲಿದ್ದ 'ರಕ್ತ ವರ್ಣದ ಅನಾಧಿಯಾದ ನರ್ಮದಾ ಲಿಂಗ" ವನ್ನು ಅನುಗ್ರಹಿಸಿ ಮಹಾರಾಜರ ಕೋರಿಕೆಯಂತೆ ರಾಜತ್ವ, ಈಶ್ವರತ್ವಗಳ ಸಮ್ಮಿಲನದ ಕುರುಹಾಗಿ ಚಾಮರಾಜೇಶ್ವರ ಎಂಬ ನಾಮಾಂಕಿತದಿಂದ ಪ್ರತಿಷ್ಟಾಪಿಸುವಂತೆಯೂ ಸೂಚಿಸಿದರು. ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡುವಂತೆಯೂ ಆಶೀರ್ವದಿಸಿದರೆಂದೂ ಇತಿಹಾಸ ಹೇಳುತ್ತದೆ. [ಹುಣ್ಣಿಮೆ ದಿನ: ಶ್ರೀಕಂಠೇಶ್ವರನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ]

ರಥ ದಾನ ಕೊಟ್ಟರು : 1856ರಲ್ಲಿ ಗುಂಡ್ಲುಪೇಟೆ ತಾಲೂಕಿನ ಅರೇಪುರದ ಬಸವರಾಜೇ ಅರಸುರವರು ದೇವಾಲಯಕ್ಕೆ ರಥವನ್ನು ದಾನವನ್ನಾಗಿ ನೀಡಿದರು. 1857 ರಿಂದ ದೇವಾಲಯದಲ್ಲಿ ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆಷಾಡ ಮಾಸದಲ್ಲಿ ಬರುವ ಪೂರ್ವಾಷಾಡ ನಕ್ಷತ್ರ ಚಾಮರಾಜ ಒಡೆಯರವರ ಜನ್ಮ ನಕ್ಷತ್ರವಾಗಿರುವುದರಿಂದ ಆ ನಕ್ಷತ್ರದಂದು ರಥೋತ್ಸವ ನಡೆಸಲಾಗುತ್ತದೆ.

ಶ್ರೀ ಚಾಮರಾಜೇಶ್ವರ ದೇವಾಲಯ ಪೂರ್ವ ದಿಕ್ಕಿಗೆ ಮುಖಮಾಡಿದ ಭವ್ಯ ಮುಖ್ಯದ್ವಾರ ಹೊಂದಿದೆ. 5 ಅಂತಸ್ತುಗಳಿಂದ ಕೂಡಿರುವ ಸುಂದರ ಚಿನ್ನದ ಹೊಳಪಿನ ಗೋಪುರ ನಿರ್ಮಾಣ ಮಾಡಲಾಗಿದೆ. ಮುಖ್ಯದ್ವಾರದ ಮೇಲ್ಭಾಗದಲ್ಲಿ ಶಿವ, ಎಡಬಲ ಬಾಗದಲ್ಲಿ ಪಾರ್ವತಿ, ಗಣೇಶನನ್ನು ಕುಳ್ಳರಿಸಿಕೊಂಡಿರುವ ಮೂರ್ತಿ ಸುಂದರ ಕಲಾತ್ಮಕತೆಗಳೊಂದಿಗೆ ನೋಡುಗರನ್ನು ಭಕ್ತಿಭಾವಕ್ಕೆ ಕೊಂಡೊಯ್ಯುತ್ತದೆ.

ಆಷಾಡಮಾಸವನ್ನು ಸಾಮಾನ್ಯವಾಗಿ ಮೂಲಮಾಸವೆಂದು ಕರೆಯುವುದರಿಂದ ಶುಭಕಾರ್ಯಗಳನ್ನು ನಡೆಸುವುದಿಲ್ಲ ಎಂಬುದು ನಂಬಿಕೆ. ಆದರೆ, ಈ ಮಾಸದಲ್ಲೇ ಇಲ್ಲಿ ರಥೋತ್ಸವ ನಡೆಯುವುದು ವಿಶೇಷವಾಗಿದೆ. ಈ ರಥೋತ್ಸವದಲ್ಲಿ ನವದಂಪತಿಗಳು ಹಣ್ಣು ಧಾನ್ಯವನ್ನು ಕಳಸಕ್ಕೆ ಎಸೆಯುವುದರಿಂದ ಪುತ್ರ ಸಂತಾನವಾಗುವುದು ಎಂಬ ನಂಬಿಕೆ ಇದೆ.

chamarajeshwara

ಚಾಮರಾಜೇಶ್ವರ ರಥೋತ್ಸವಕ್ಕೆ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯದ ಜನರು ಸೇರಿದಂತೆ ರಾಜ್ಯದ ವಿವಿಧ ಮೂಲಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಚಾಮರಾಜೇಶ್ವರ ದೇವಾಲಯದಲ್ಲಿ ಲಿಂಗ ಪ್ರಧಾನವಾಗಿದ್ದು, ಇದರ ಬಲಭಾಗದಲ್ಲಿ ಚಾಮುಂಡೇಶ್ವರಿ, ಎಡಭಾಗದಲ್ಲಿ ಕೆಂಪನಂಜಾಂಬ ದೇವಸ್ಥಾನವಿದೆ.

ನವ ದಂಪತಿಗಳು ಜಾತ್ರೆಗೆ ಬರುತ್ತಾರೆ : ನವದಂಪತಿಗಳನ್ನು ಸಾಮಾನ್ಯವಾಗಿ ಆಷಾಡಮಾಸದಲ್ಲಿ ತವರಿಗೆ ಕಳುಹಿಸುವುದು ರೂಡಿ. ಆದರೆ, ಪ್ರತ್ಯೇಕವಾಗಿರುವ ನವದಂಪತಿಗಳು ಚಾಮರಾಜೇಶ್ವರ ರಥೋತ್ಸವದಲ್ಲಿ ಒಂದಾಗುತ್ತಾರೆ.

ಜುಲೈ 19ರಂದು ರಥೋತ್ಸವ : ಚಾಮರಾಜೇಶ್ವರ ದೇವಾಲಯದಲ್ಲಿ ಜುಲೈ 19ರಂದು ರಥೋತ್ಸವ ನಡೆಯಲಿದೆ. ರಾಜ್ಯದ ನಾನಾ ಮೂಲಗಳ ಲಕ್ಷಾಂತರ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು, ಧಾನ್ಯವನ್ನು ಎಸೆಯುತ್ತಾರೆ.

Chamarajeshwara rathotsava

ರಥೋತ್ಸವದಲ್ಲಿ ಮಹಾರಾಜರ ಮೂರ್ತಿವುಳ್ಳ ಮುಖ್ಯ ರಥ, ಶ್ರೀ ಕೆಂಪನಂಜಾಂಬ ರಥ, ಸುಬ್ರಮಣ್ಯೇಶ್ವರ, ಗಣಪತಿ ಮತ್ತು ಚಂಡಿಕೇಶ್ವರ ಸೇರಿದಂತೆ ಪಂಚರಥಗಳು ದೇವಾಲಯದ ಮುಂಭಾಗದಿಂದ ಹೊರಟು ರಥದಬೀದಿಯ ಮೂಲಕ ಹಳೇ ಖಾಸಗಿ ಬಸ್ ನಿಲ್ದಾಣದ ಮೂಲಕ ಸಾಗಿ ದೇವಾಲಯಕ್ಕೆ ಮಧ್ಯಾಹ್ನದ ವೇಳೆಗೆ ಬಂದು ಸೇರುತ್ತವೆ.

ರಥೋತ್ಸವಕ್ಕೆ ಆಗಮಿಸುವ ನವ ದಂಪತಿಗಳಿಗೆ ಅವರ ನೆಂಟರಿಷ್ಟರ ಮನೆಯಲ್ಲಿ ಹೋಳಿಗೆ ಮಾಡುವುದರಿಂದ ಎಲ್ಲರ ಮನೆಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajanagar is all set to hold Chamarajeshwara rathotsava on July 19, 2016. Mummadi Krishnaraja Wadiyar built a Chamarajeshwara temple at Arikuntara, the birthplace of his father and named it Chamarajanagar.
Please Wait while comments are loading...