ಚೈತ್ರಾ ಕುಂದಾಪುರ ವಂಚನೆ ಪ್ರಕರಣ: 7 ಕೋಟಿ ವಂಚನೆಯಲ್ಲಿ ಬಿಜೆಪಿ ಮತ್ತು RSS ಪಾಲೆಷ್ಟು?: ಕಾಂಗ್ರೆಸ್
ಬೆಂಗಳೂರು, ಸೆಪ್ಟೆಂಬರ್, 13: ವಂಚನೆ ಆರೋಪ ಹಿನ್ನೆಲೆ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಪ್ರರಣಕ್ಕೆ ಸಂಭಂಧಿಸಿದಂತೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಉಗ್ರ ಭಾಷಣಕಾರ್ತಿ ಬಿಜೆಪಿಯ ಎಂಎಲ್ ಟಿಕೆಟ್ ಕೊಡಿಸುವುದಾಗಿ ಸುಮಾರು 7 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆಂದು ಕುಂದಾಪುರದ ಉದ್ಯಮಿಯೊಬ್ಬರು ದೂರಿದ್ದಾರೆ. ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್‌ಗಳೂ ಮಾರಾಟವಾಗಿದೆಯೇ? ಎಂದು ಪ್ರಶ್ನಿಸಿದೆ.
ಈ ವಂಚನೆ ಪ್ರಕರಣ ಹಲವು ತಿಂಗಳ ಹಿಂದೆಯೇ ಬೆಳಕಿಗೆ ಬಂದಿದ್ದರೂ ಬಿಜೆಪಿ ಪಕ್ಷ ದೂರು ಕೊಡದೆ ಸುಮ್ಮನಿರುವುದೇಕೆ?. 7 ಕೋಟಿ ವಂಚನೆಯಲ್ಲಿ ಬಿಜೆಪಿಗರ ಪಾಲೆಷ್ಟು? RSSನ ಪಾಲೆಷ್ಟು? ಈ ಮಹಾ ವಂಚನೆಯ ಬಗ್ಗೆ ಬಿಜೆಪಿ ಮೌನವಹಿಸಿರುವುದೇಕೆ? ಎಂದು ಪ್ರಶ್ನಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಾಗೂ ಅದರ ಬಾಡಿಗೆ ಭಾಷಣಕಾರರ ಅಸಲಿ ಬಂಡವಾಳ ಬಯಲಾಗುತ್ತಿದೆ. ಹಿಂದುತ್ವದ ಹೆಸರಲ್ಲಿ ಹಿಂದುಗಳನ್ನೇ ವಂಚಿಸುವುದು ಬಿಜೆಪಿ ಹಾಗೂ ಅದರ ಪರಿವಾರದ ಹಳೆ ಚಾಳಿ. ವಂಚನೆ ಪ್ರಕರಣದಲ್ಲಿ ಬಂಧನವಾದ ಚೈನ್ ಚೈತ್ರಾ ಎಂಬಾಕೆಯ ಪ್ರಕರಣದಲ್ಲಿ ಬಿಜೆಪಿ ಮೌನವಹಿಸಿದೆ. "ಟಿಕೆಟ್ ಮಾರಾಟ" ಬೆಳಕಿಗೆ ಬಂದಿರುವಾಗ ಬಿಜೆಪಿ ಕರ್ನಾಟಕದ ಸ್ಪಷ್ಟನೆ ಏನಿರಬಹುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಆಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಿದ್ದ ವರಸೆ ಪ್ರದರ್ಶಿಸಬಹುದೇ?, "ಆಕೆ ಬಿಜೆಪಿಯ ಸದಸ್ಯೆ ಅಲ್ಲ" ಎಂದು ಹೇಳಿಕೆ ಹೊರಡಿಸಬಹುದೇ? ಬಿಜೆಪಿ ಪ್ರಮಾಣಿಕವಾಗಿದ್ದರೆ ಪಕ್ಷದ ಹೆಸರಲ್ಲಿ ವಂಚಿಸಿದ ಆಕೆಯ ವಿರುದ್ದ ಈ ಹಿಂದೆಯೇ ದೂರು ನೀಡಲಿಲ್ಲ ಏಕೆ? ಎಂದು ಪ್ರಶ್ನಿಸಿದೆ.
ಹಾಗೆಯೇ ಚೈತ್ರಾ ಕುಂದಪುರ ಅವರು ದೊಡ್ಡ ವೇದಿಕೆ ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮದ ಬಗ್ಗೆ ಉದ್ದುದ್ದವಾಗಿ ಭಾಷಣ ಮಾಡುತ್ತಿದ್ದರು. ಆದರೆ ಇದೀಗ ಧರ್ಮದ ಬಗ್ಗೆ ಜಾಗೃತಿ ಮೂಡಿಸುವವರೇ ಇಂತಹ ನೀಚ ಕೆಲಸಕ್ಕೆ ಇಳಿದಿದ್ದಾರಲ್ಲ. ಮೊದಲು ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎನ್ನುವ ಮಾತುಗಳು ಸಾಮಾಜಿಕ ಜಾಲಾತಣಗಳಲ್ಲಿ ಹರಿದಾಡುತ್ತಿವೆ.
ಮತ್ತೊಂದೆಡೆ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ್ದ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಬಿಜೆಪಿ ಶಾಸಕ ಸ್ಥಾನದ ಟಿಕೆಟ್‍ಗಾಗಿ ಉದ್ಯಮಿಯೊಬ್ಬರ ಬಳಿ 7 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾಳೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತಿ ಆಕೆಯ ಸ್ನೇಹಿತ ಶ್ರೀಕಾಂತ ನಾಯ್ಕ್ ಅವರನ್ನು ಬಂಧಿಸಲಾಗಿದೆ. ಬಂಧನದಲ್ಲಿರುವ ಚೈತ್ರಾ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದಳು. ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಅಪಾರ್ಟ್‍ಮೆಂಟ್‍ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಡಗಿಕೊಂಡಿದ್ದಳು ಎನ್ನವ ಮಾಹಿತಿ ಲಭ್ಯವಾಗಿದೆ.
ಅಂಜುಮ್ ಚೈತ್ರಾಳ ಸ್ನೇಹಿತೆಯಾಗಿದ್ದು, ಈ ಹಿಂದೆ ಇಬ್ಬರು ಸಹೋದ್ಯೋಗಿಯಾಗಿದ್ದರು. ಆರೋಪಿಗೆ ಆಶ್ರಯ ನೀಡಿದ ವಿಚಾರವಾಗಿ ಅಂಜುಮ್ ಅವರಿಗೆ ಸಿಸಿಬಿ ಈಗ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಸಂಜೆ ವೇಳೆಗೆ ಕೋರ್ಟ್‍ಗೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ತಿರ್ಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಚೈತ್ರಾ ಬಂಧನದ ಬಳಿಕ ಒಡೆದ ಬಳೆ ಹಾಗೂ ಉಂಗುರವನ್ನು ನುಂಗಲು ಯತ್ನಿಸಿದ್ದಳು. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಆಕೆಯನ್ನು ಅಜ್ಞಾತ ಸ್ಥಳದಲ್ಲಿ ರಾತ್ರಿ ಪೂರ್ತಿ ಕಾವಲು ಕಾದಿದ್ದಾರೆ. ವಂಚನೆ ವಿಚಾರವಾಗಿ ಉದ್ಯಮಿ ಬೆಂಗಳೂರಿನಲ್ಲಿ ದೂರು ನೀಡಿದ್ದು, ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications