ವಿಚಾರಣೆಗೆ ಗೈರಾದ ಅನುಶ್ರೀ: ಇಂದು ಹಾಜರಾಗಲು ಸೂಚನೆ
ಬೆಂಗಳೂರು, ಸೆಪ್ಟೆಂಬರ್ 26: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕಿರುತೆರೆ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಶುಕ್ರವಾರ ಬೆಳಿಗ್ಗೆಯೇ ವಿಚಾರನೆಗೆ ಹಾಜರಾಗುವುದಾಗಿ ಅನುಶ್ರೀ ತಿಳಿಸಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಅನುಶ್ರೀ ಅವರ ನಡೆಯಿಂದ ಪೊಲೀಸರು ಅಸಮಾಧಾನಗೊಂಡಿದ್ದು, ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅನುಶ್ರೀ ಅವರಿಗಾಗಿ ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ತಂಡ ಪಾಂಡೇಶ್ವರ ಠಾಣೆಯಲ್ಲಿ ಶುಕ್ರವಾರ ಕಾದು ಕುಳಿತಿತ್ತು. ಆದರೆ ಅನುಶ್ರೀ ಸಂಜೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ. ಆ ವೇಳೆಗೆ ವಿಚಾರಣಾ ತಂಡ ಅಲ್ಲಿಂದ ನಿರ್ಗಮಿಸಿತ್ತು.
ವಿಚಾರಣೆಗೆ ಹಾಜರಾಗುವ ಮುನ್ನ ಅನುಶ್ರೀ ಕಾನೂನು ಸಲಹೆ ಪಡೆಯಲು ವಕೀಲರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಅವರು ಹಾಜರಾಗುವ ಸಾಧ್ಯತೆ ಇದೆ.

ಅನುಶ್ರೀ ವಿಚಾರಣೆಗೆ ಹಾಜರಾಗದ ಕಾರಣ ಇತರೆ ಆರೋಪಿಗಳಾದ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್ ಅವರನ್ನು ಪೊಲೀಸರು ವೆನ್‌ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿತು. ಇಬ್ಬರನ್ನೂ ಅ. 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Recommended Video
ಫ್ಯಾಷನ್ ಡಿಸೈನರ್‌ಗೆ ನೋಟಿಸ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಬೆಂಗಳೂರಿನ ಫ್ಯಾಷನ್ ಡಿಸೈನರ್ ರಮೇಶ್ ದಾಂಬಳೆ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ರಮೇಶ್ ಅವರಿಗೆ ರಾಗಿಣಿ, ಸಂಜನಾ, ಆದಿತ್ಯ, ನಯಾಜ್ ಜತೆ ನಂಟು ಇದೆ ಎನ್ನಲಾಗಿದೆ. ಜತೆಗೆ ಅವರು ಅನೇಕ ಪೇಜ್ 3 ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.












Click it and Unblock the Notifications