ಅಕ್ರಮ ಅಸ್ತಿ ಪ್ರಕರಣ: ಸಿಬಿಐ ಕೇಂದ್ರದ ಏಜೆಂಟ್ ಎಂದ ಡಿಕೆಶಿ ವಕೀಲರು
ಬೆಂಗಳೂರು, ಮೇ 28: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ಕೇಂದ್ರ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದು ಡಿ. ಕೆ. ಶಿವಕುಮಾರ್ ಪರ ವಕೀಲರು ಹೈಕೋರ್ಟ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ ಪ್ರಕರಣದ ವಿಚಾರಣೆ ಕುತೂಹಲ ಕೆರಳಿಸಿದೆ.
ಆದಾಯ ಮೀರಿ ಆಸ್ತಿಗಳಿಕೆ ಆರೋಪದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಸೂಚಿಸಿದ್ದ ಸಮ್ಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಮ್ಮತಿ ಸರಿ ಇಲ್ಲ: ಡಿ. ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ಸಮ್ಮತಿ ನೀಡುವಾಗ ಯಾವ ಸೆಕ್ಷನ್‌ಗಳಡಿ ಅಪರಾಧವಿದೆ ಎಂದು ತಿಳಿಸಿಲ್ಲ. ಗಣರಾಜ್ಯ ಪದ್ದತಿಯಲ್ಲಿನ ನಿಯಮಗಳನ್ನು ಪಾಲಿಸಿಲ್ಲ. ಸಮ್ಮತಿ ನೀಡಿದ ಕ್ರಮವೇ ಕಾನೂನುಬಾಹಿರ ವಾಗಿದೆ. ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದಿರುವ ರಾಜ್ಯ ಸಾರ್ಕರದ ನಿರ್ಧಾರದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ಕೋರಿದರು.
ಅಲ್ಲದೆ, ಈ ಹಿಂದೆ ಸರ್ಕಾರದ ನೀಡಿರುವ ಸಮ್ಮತಿ ರಾಜಕೀಯ ಪ್ರೇರಿತವಾಗಿದೆ. ಅಂದಿನ ಮುಖ್ಯಮಂತ್ರಿಗಳ ಮೌಖಿಕ ಹೇಳಿಕೆಯನ್ನು ಆಧರಿಸಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಆರೋಪ ಸಂಬಂಧ ತನಿಖಾಧಿಕಾರಿಗಳು ನಿರ್ಧರಿಸಬೇಕು, ಮುಖ್ಯಮಂತ್ರಿ, ಪ್ರಧಾನಮಂತ್ರಿ ತಿಳಿಸಿದ್ದಾರೆ ಎಂಬ ಕಾರಣದಿಂದ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.
ಸಿಬಿಐ ತನಿಖೆಗೆ ಸಮ್ಮತಿ ನೀಡುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ ಸಮ್ಮತಿ ನೀಡಿದ ನಂತರ ದೆಹಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆ ಸೆಕ್ಷನ್ ಅಡಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರ ಅಧಿಸೂಚನೆ ಹೊರಡಿಸುವ ಮುನ್ನ ವಿವೇಚನೆ ಬಳಸಿಲ್ಲ ಎಂದು ವಾದ ಮಂಡಿಸಿದರು.
ಸಿಬಿಐ ಕೇಂದ್ರದ ಕೈಗೊಂಬೆ: ಡಿ. ಕೆ. ಶಿವಕುಮಾರ್ ಪರವಾಗಿ ಮತ್ತೊಬ್ಬ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಸಿಬಿಐ ತನಿಖೆಗೆ ಸರ್ಕಾರ ಸಮ್ಮತಿ ನೀಡುವುದು ಅತ್ಯಗತ್ಯ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಹೈಕೋರ್ಟ್ ನಿರ್ದೇಶನ ನೀಡಬಹುದಾಗಿದೆ.
ಕರ್ನಾಟಕದಲ್ಲಿ ತನಿಖೆ ನಡೆಸಲು ಸಿಬಿಐಗೆ ಅಧಿಕಾರವಿಲ್ಲ. ಒಕ್ಕೂಟ ವ್ಯವಸ್ಥೆ ಸಂವಿಧಾನದ ಅತ್ಯಗತ್ಯ ಭಾಗವಾಗಿದೆ. ಮೊದಲು ಕೇಂದ್ರ ನಂತರ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ಕೇಂದ್ರ ಅನುಮತಿ ನೀಡಿದರೂ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೇ ತನಿಖೆ ನಡೆಸುವುದಕ್ಕೆ ಅವಕಾಶವೇ ಇಲ್ಲ ಎಂದು ವಿವರಿಸಿದರು.
ಅಲ್ಲದೆ, ಸಿಬಿಐ ಕೇಂದ್ರ ಸರ್ಕಾರದ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಗೆ ಹೋಗಬೇಕು, ಯಾರ ಮನೆಗೆ ಹೋಗಬೇಕು. ಸಿಬಿಐ ಎಲ್ಲಿಗೆ ಹೋಗಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ. ಉಳಿದಂತೆ ತನಿಖೆ ಮಾತ್ರ ಸಿಬಿಐ ನಡೆಸುತ್ತಿದೆ. ಅದು ಕೇಂದ್ರದ ಕೈಗೊಂಬಬೆಯಾಗಿದೆ. ಹೀಗಾಗಿ ಸಿಬಿಐ ತನಿಖೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಸಿಬಿಐ ಪರ ವಾದ ಮಂಡಿಸಲು ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಪೀಠ ಮೇ 29ಕ್ಕೆ ಮುಂದೂಡಿತು. ಅರ್ಜಿ ವಿಚಾರಣೆ ವೇಳೆ ಡಿ. ಕೆ. ಶಿವಕುಮಾರ್ ಪುತ್ರ ಆಕಾಶ್ ನ್ಯಾಯಾಲಯದಲ್ಲಿ ಹಾಜರಿದ್ದು, ವಾದಮಂಡನೆ ಆಲಿಸಿದರು.












Click it and Unblock the Notifications