ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ವಿವಾದ ಇತ್ಯರ್ಥ: ಸಿಎಂ ಸಿದ್ದರಾಮಯ್ಯ
ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಹಲವು ವರ್ಷಗಳಿಂದಲೂ ಗಲಾಟೆ ಇದೆ. ಪ್ರತಿ ವರ್ಷವೂ ಕಾವೇರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕಾವೇರಿ ನದಿಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ವ್ಯಾಜ್ಯ ಈಗ ಇಲ್ಲ. ಮಳೆ ಸರಿಯಾಗಿ ಆಗಿದ್ದರೆ ಮಾತ್ರ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಒದಗಿಸಬೇಕೆಂದು ತೀರ್ಮಾನವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಮಳೆಯಾಗಿಲ್ಲದಿದ್ದರೆ ಸಂಕಷ್ಟ ಸೂತ್ರ ಜಾರಿಗೆ ಬಂದು, ಅದರಂತೆ ತಮಿಳುನಾಡಿಗೆ ನೀರು ಹಂಚಿಕೆ ಮಾಡಲಾಗುವುದು. ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದ್ದಾರೆ? ಎಂದು ಅರ್ಥವಾಗುತ್ತಿಲ್ಲ. ರಾಜಕೀಯಕ್ಕಾಗಿ ಇದನ್ನು ಆಕ್ಷೇಪಿಸುತ್ತಿದ್ದಾರೆ ಎಂದಿದ್ದಾರೆ.

ರಾಜ್ಯವು 98 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಆದರೆ ಇಂದಿನವರೆಗೆ 221 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು ಕೊಡಬೇಕಿದ್ದ ನೀರಿಗಿಂತಲೂ 122 ಟಿಎಂಸಿ ನೀರು ಹೆಚ್ಚಾಗಿ ಹರಿದು ಹೋಗಿದೆ. ಮಳೆ ಉತ್ತಮವಾಗಿ ಆದರೆ ನೀರನ್ನು ಕೊಟ್ಟೆ ಕೊಡುತ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಎರಡು ವರ್ಷವೂ ಒಳ್ಳೆಯ ಮಳೆಯಾಗಿದೆ. ರಾಜ್ಯದ ಎಲ್ಲ ಜಲಾಶಯಗಳು ತುಂಬಿವೆ. ಈ ವರ್ಷ ವಿದ್ಯುತ್ ಅಭಾವ ಬರಲು ಸಾಧ್ಯವಿಲ್ಲ. ನಮಗೂ ತಮಿಳುನಾಡಿಗೂ ನೀರಿನ ವಿಷಯವಾಗಿ ವಿವಾದವೂ ಬರುವುದಿಲ್ಲ. ಮಳೆ ಸಕಾಲಕ್ಕೆ ಬಂದರೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಮೇಕೆದಾಟಿಗೆ ಅಡ್ಡಿ ಮಾಡಬಾರದು
ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು. ಮೇಕೆದಾಟು ಅಣೆಕಟ್ಟಿನಿಂದ 66 ಟಿಎಂಸಿ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಉಪಯೋಗವಾಗುತ್ತದೆ. ಮಳೆ ಬಾರದಿದ್ದಾಗ ತಮಿಳುನಾಡಿಗೆ ನೀರನ್ನು ಹರಿಸಲು ಹಾಗೂ ಹೆಚ್ಚು ಮಳೆ ಬಂದಾಗ ಸಮುದ್ರ ಪಾಲಾಗುವ ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದಿದ್ದಾರೆ.
ಇನ್ನು ಗಗನಚುಕ್ಕಿ ಜಲಪಾತ ಅಭಿವೃದ್ಧಿಗೆ 6 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜನ ಕೂತು ನೋಡಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಜನರು ಜಲಪಾತ ವೀಕ್ಷಿಸಲು ಬರಬೇಕು. ಕಳೆದ ಮೂರು ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಶಿವನಸಮುದ್ರ ಜಲಾಶಯದಲ್ಲಿ 1902ರಲ್ಲಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ ಕೇಂದ್ರ ಎಂಬ ಹೆಗ್ಗಳಿಕೆಯಿದೆ. ರಾಜ್ಯ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೆ ಅದಕ್ಕೆ ಶಿವನಸಮುದ್ರ ಮೂಲ ಕಾರಣ ಎಂದು ನೆನೆದಿದ್ದಾರೆ.
ಪ್ರಸ್ತುತ ಕರ್ನಾಟಕಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅದನ್ನು ಬಳಸಿಕೊಳ್ಳುವ ಕೆಲಸವೂ ಆಗುತ್ತಿದೆ. ಉತ್ಪಾದಿಸಿದ ವಿದ್ಯುತ್‌ನಿಂದ ರೈತರಿಗೆ ಉಪಯೋಗವಾಗುತ್ತಿದೆ. ಈ ವರ್ಷ ಸುಮಾರು 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬಿತ್ತನೆ ಆಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ. ಅವೆಲ್ಲಕ್ಕೂ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications