ಕಾವೇರಿ ನೀರು ವಿವಾದ: 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದ್ದು, ನವೆಂಬರ್ 7ರಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿದುಬರುವಂತೆ ತನ್ನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚಿಸಿದೆ ಎಂದು ಸಚಿವ ಚೆಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಭಾರಿ ಜನಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಅವರು, ಈ ನಿರ್ಧಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೂಡ ದೃಢೀಕರಿಸಿ ಅನುಮೋದಿಸಿದೆ ಎಂದು ತಿಳಿಸಿದ್ದಾರೆ.

Cauvery Water Dispute CWRC Directs Karnataka government to Release 3 000 Cusecs of Water Daily for 15 Days

53.88ರಷ್ಟು ಒಳಹರಿವು ಕಡಿಮೆ

ನವೆಂಬರ್ 6ರಂದು ನಡೆದ CWRCಯ 146ನೇ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ತಮ್ಮ ವಾದಗಳನ್ನು ಮಂಡಿಸಿದವು. ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಿಗೆ ಕಳೆದ 30 ವರ್ಷಗಳ ಸರಾಸರಿಗಿಂತ 53.88ರಷ್ಟು ಒಳಹರಿವು ಕಡಿಮೆಯಾಗಿದೆ. ಅಲ್ಲದೆ, ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳು ಬರಪೀಡಿತವಾಗಿವೆ ಎಂಬ ಅಂಶವನ್ನು ಕರ್ನಾಟಕ ಸಮಿತಿಯ ಗಮನಕ್ಕೆ ತಂದಿತು.

ಜೂನ್ 1ರಿಂದ ನವೆಂಬರ್ 6ರ ಬೆಳಿಗ್ಗೆ 8 ಗಂಟೆಯವರೆಗೆ ಬಿಳಿಗುಂಡ್ಲುವಿನಲ್ಲಿ ಒಟ್ಟು 54.964 ಟಿಎಂಸಿ ನೀರು ಹರಿದುಬಂದಿದೆ. ಜುಲೈ 29ರಿಂದ ನವೆಂಬರ್ 6ರವರೆಗೆ CWRC/CWMA ನಿರ್ದೇಶನದ ಅವಧಿಯಲ್ಲಿ 51.394 ಟಿಎಂಸಿ ನೀರು ಹರಿದುಬಂದಿದ್ದು, ನಿಗದಿಪಡಿಸಿದ್ದ 49.119 ಟಿಎಂಸಿಗಿಂತ 2.28 ಟಿಎಂಸಿ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು‌.

ಕೆಳಭಾಗದ ಜಲಾಶಯಗಳಲ್ಲಿ ನೀರಿನ ಸಂಗ್ರಹ

ತಮಿಳುನಾಡಿನ ಸಾಂಬಾ ಬೆಳೆಗಾಗಿ ಹೆಚ್ಚುವರಿ ನೀರು ನೀಡುವ ಬೇಡಿಕೆಗೆ ಪ್ರತಿಯಾಗಿ, ಮೆಟ್ಟೂರು ಸೇರಿದಂತೆ ಕೆಳಭಾಗದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮತ್ತು ಈಶಾನ್ಯ ಮುಂಗಾರು ಪರಿಸ್ಥಿತಿಯನ್ನು ಮನೆವರಿಕೆ ಮಾಡಿಕೊಟ್ಟಿತ್ತು.

ನವೆಂಬರ್ 5ರಂದು ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ಒಟ್ಟು 37.125 ಟಿಎಂಸಿ ನೀರು ಸಂಗ್ರಹವಿದ್ದು, ಮಳೆ, ಲಭ್ಯ ಸಂಗ್ರಹ ಮತ್ತು ಅಂತರ್ಜಲವನ್ನು ಬಳಸಿಕೊಂಡು ಡಿಸೆಂಬರ್ 15ರವರೆಗೆ ಸಾಂಬಾ ಬೆಳೆ ನೀರಾವರಿ ಬೇಡಿಕೆ ಪೂರೈಸಲು ಸಾಧ್ಯ ಎಂದು ರಾಜ್ಯ ಸರ್ಕಾರ ತನ್ನ ಹಕ್ಕು ಮಂಡಿಸಿತ್ತು.

ಬೆಳೆಗಳಿಗೆ ನೀರಾವರಿ ಸಾಕಾಗುವುದಿಲ್ಲ

ಇದೇ ವೇಳೆ, ಕರ್ನಾಟಕಕ್ಕೆ ಲಭ್ಯವಾಗಬಹುದಾದ ಅಂದಾಜು 57 ಟಿಎಂಸಿ ನೀರಿನಲ್ಲಿ ಜುಲೈ 2027ರ ಅಂತ್ಯದವರೆಗಿನ ಆದ್ಯತೆಯ ಅಗತ್ಯಗಳಿಗೆ ಸುಮಾರು 50 ಟಿಎಂಸಿ ಅಗತ್ಯವಿದೆ. ಉಳಿದ 7 ಟಿಎಂಸಿ ನೀರು ಈಗಿರುವ ಬೆಳೆಗಳ ನೀರಾವರಿ ಅಗತ್ಯಕ್ಕೂ ಸಾಕಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ಪರವಾಗಿ ವಕೀಲರು ವಾದ ಮಂಡನೆ ಮಾಡಿದ್ದರು.

ಹೀಗಾಗಿ ತನ್ನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿತ್ತು. ಆದರೆ ತಮಿಳುನಾಡು, ನವೆಂಬರ್ 4ರವರೆಗೆ ತನ್ನ ಪಾಲಿನಲ್ಲಿ 16.895 ಟಿಎಂಸಿ ಕೊರತೆ ಇದೆ ಎಂದು ವಾದಿಸಿತ್ತು.

ಅಕ್ಟೋಬರ್ 24ರಿಂದ ನವೆಂಬರ್ 4ರವರೆಗೆ ಹಲವು ದಿನಗಳಲ್ಲಿ CWRC ಸೂಚಿಸಿದ್ದ 3,000 ಕ್ಯೂಸೆಕ್‌ಗಿಂತ ಕಡಿಮೆ ಪ್ರಮಾಣದಲ್ಲಿ ನೀರು ಹರಿದುಬಂದಿದೆ ಎಂದು ತಮಿಳುನಾಡು ದೂರಿದೆ. ಬಾಕಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ನವೆಂಬರ್ 5ರಿಂದ 21ರವರೆಗೆ ಬಿಳಿಗುಂಡ್ಲುವಿನಲ್ಲಿ ಒಟ್ಟು 20.678 ಟಿಎಂಸಿ ನೀರು ಖಚಿತಪಡಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಅದು ಮನವಿ ಮಾಡಿತ್ತು.

3.88 ಟಿಎಂಸಿ ನೀರು ಹರಿಯುವಂತೆ ವ್ಯವಸ್ಥೆ

ಎರಡೂ ರಾಜ್ಯಗಳ ವಾದಗಳನ್ನು ಪರಿಗಣಿಸಿದ ಬಳಿಕ CWRC, ನವೆಂಬರ್ 7ರ ಬೆಳಿಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಯುವಂತೆ ಕರ್ನಾಟಕ ತನ್ನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದೆ. ಈ ಅವಧಿಯಲ್ಲಿ ಒಟ್ಟು ಸುಮಾರು 3.88 ಟಿಎಂಸಿ ನೀರು ಹರಿಯುವಂತೆ ವ್ಯವಸ್ಥೆ ಮಾಡಬೇಕಾಗಿದೆ.

CWRCಯ ಈ ನಿರ್ಧಾರವನ್ನು CWMAಯ 60ನೇ ಸಭೆಯಲ್ಲೂ ದೃಢೀಕರಿಸಿ ಅನುಮೋದಿಸಲಾಗಿದೆ. ಇದರಿಂದಾಗಿ ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ರಾಜ್ಯದ ಬರ ಪರಿಸ್ಥಿತಿ ಹಾಗೂ ಮುಂದಿನ ಬೇಸಿಗೆಗೆ ಅಗತ್ಯವಿರುವ ನೀರಿನ ಸಂಗ್ರಹದ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಉಂಟಾಗಿದೆ. ರಾಜ್ಯದ ನೀರಿನ ಲಭ್ಯತೆ ಮತ್ತು ಆದ್ಯತೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವ ಎನ್. ಚೆಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+