ಕಾವೇರಿ ಕಿಚ್ಚು ಮತ್ತಷ್ಟು ತೀವ್ರ: ಸರ್ವಪಕ್ಷ ಸಭೆಯಲ್ಲಿ ಹೊರಬಿದ್ದ ಮಹತ್ವದ ವಿಚಾರಗಳು

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರಗೊಂಡಿರುವ ಬೆನ್ನಲ್ಲೇ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕೃಷ್ಣಾ ನಿವಾಸದಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆಯಿತು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಚಿವ ಸಂಪುಟದ ಸದಸ್ಯರು, ವಿರೋಧ ಪಕ್ಷದ ನಾಯಕರು, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ, ಕಾವೇರಿ ನೀರಿನ ಹಂಚಿಕೆ, ರಾಜ್ಯದ ಮುಂದಿನ ಕಾನೂನು ಹೋರಾಟ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ಮುಂದಿನ ಕಾರ್ಯತಂತ್ರದ ಬಗ್ಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿದೆ.

Cauvery Row Key Decisions and Major Revelations from the All-Party Meeting

ಕಾವೇರಿ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಮಾತನಾಡಿ,ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಕಾವೇರಿ ವಿವಾದವನ್ನು ನಾವೆಲ್ಲ ಮೈಗೆ ಅಂಟಿಸಿಕೊಂಡೇ ಬೆಳೆದಿದ್ದೇವೆ.
ರಾಜಕೀಯಕ್ಕಿಂತ ರಾಜ್ಯದ ರೈತರ,‌ ಜನರ ಹಿತ ಮುಖ್ಯ. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕಾರಣವನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಿಗೇ ನಿಂತಿರುವ ಚರಿತ್ರೆ ನಮ್ಮ ರಾಜ್ಯಕ್ಕೆ ಇದೆ ಎಂದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ನಿಲುವು ನಮ್ಮದಾಗಿದೆ. ನಮ್ಮ ಈ ನಿಲುವಿಗೆ ತಾವೆಲ್ಲರೂ ಸಂಪೂರ್ಣ ಸಹಮತ ಹೊಂದಿದ್ದೀರಿ ಎನ್ನುವುದು ನನಗೆ ಗೊತ್ತಿದೆ. ನಾನು CWRC, CWMA ಮೀಟಿಂಗ್ ಗೆ ಮೊದಲೇ ಕೇಂದ್ರ ಸಚಿವರಾದ ಸಿ ಆರ್ ಪಾಟೀಲ್, ಪ್ರಹ್ಲಾದ್ ಜೋಶಿ, ಸೋಮಣ್ಣ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ವಿಚಾರ ಮನವರಿಕೆ ಮಾಡಿಕೊಟ್ಟಿದ್ದೆ.
ಅವರು ಕೂಡ ಕೇಂದ್ರದಲ್ಲಿ ರಾಜ್ಯದ ಪರ ಮಾತಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ದೆಹಲಿಯಲ್ಲಿ ನಡೆದ ಸಂಸತ್ ಸದಸ್ಯರ ಸಭೆಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ರಾಜ್ಯದ ಪರ ನಿಲ್ಲುವ ಮಾತು ಕೊಟ್ಟಿದ್ದಾರೆ. ಅವರಿಗೂ ಧನ್ಯವಾದ ಹೇಳುತ್ತೇನೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಮಾತುಕತೆಗೆ ಬರುತ್ತೇನೆ ಅಂದಿದ್ರು. ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಹೇಳಿದೆ. ಈಗ ಸಮಾಧಾನದ ಸಂಗತಿ ಅಂದರೆ ಮಳೆ ಚನ್ನಾಗಿ ಆಗುತ್ತಿದೆ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಇವೆ.

ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತ ಸಮಸ್ಯೆ ನಿವಾರಣೆಗೆ ನಮ್ಮ ಆದ್ಯತೆ. ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೀರು ಸಂಗ್ರಹಿಸಿದ್ದೇವೆ. ಕಬಿನಿ ಜಲಾಶಯ ತುಂಬಿದೆ. ಹೆಚ್ಚುವರಿ ಒಳ ಹರಿವು ಸಂಗ್ರಹ ಮಾಡಿಟ್ಟುಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಸಹಜ ಹರಿವು ಮಾತ್ರ ಆಗುತ್ತಿದೆ. ಈಗಾಗಲೇ ನಾಲೆಗಳಿಗೂ ನೀರು ಹರಿದಿದೆ. ರೈತರಿಗೂ ಅನುಕೂಲ ಆಗುತ್ತಿದೆ ಎಂದು ಹೇಳಿದರು.

ರಾಜಕಾರಣ ಏನೇ ಇದ್ದರೂ, ನಾವು ಅದನ್ನು ಬಿಟ್ಟು ಎಲ್ಲಾ ಸಂದರ್ಭದಲ್ಲಿ ರಾಜ್ಯದ, ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಲ್ಲರೂ ಹೊರಗೆ ಏನೇ ಹೇಳಿಕೆಗಳನ್ನು ನೀಡಿದ್ದರೂ, ರಾಜ್ಯದ ಹಿತದ ವಿಷಯದಲ್ಲಿ ನೀವೆಲ್ಲರೂ ಸಹಕಾರ ನೀಡುತ್ತಾ ಬಂದಿದ್ದೀರಿ. ಅದಕ್ಕೆ ಆಭಾರಿಯಾಗಿದ್ದೇನೆ. ಪ್ರಧಾನ ಮಂತ್ರಿ ಅವರು ಈ ಬಾರಿ ಬರ ಕುರಿತಾಗಿ ಮೊದಲೇ ಎಚ್ಚರಿಕೆ ನೀಡಿದ್ದರು. ಇದರಂತೆ ನಾನು ರೈತರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು, ಬೆಳೆಗೆ ನಂತರದ ಆದ್ಯತೆ ಎಂದು ಹೇಳಿದ್ದೆ ಎಂದು ಸಭೆಯಲ್ಲಿ ತಿಳಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಎಲ್ಲರಿಗೂ ಅರಿವಿದೆ. ರಾಜ್ಯದಲ್ಲಿ ಭೀಕರ ಬರ ಇರುವುದನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು 9.9 ಟಿಎಂಸಿ ನೀರು ಬಿಡಲು ಮನವಿ ಮಾಡಿತ್ತು. ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೂಡ ಸೂಚನೆ ನೀಡಿತ್ತು. ನಾವು ಈಗಾಗಲೇ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೇವೆ. ನಾನು CWRC, CWMA ಮೀಟಿಂಗ್ ಗೇ ಮೊದಲು ನವದೆಹಲಿಯಲ್ಲಿ ಕೇಂದ್ರದ ಸಚಿವರನ್ನು, ರಾಜ್ಯದ ಸಂಸತ್ ಸದಸ್ಯರನ್ನು ಸಂಪರ್ಕಿಸಿ ನಡೆಸಿದ ಸಭೆಗೆ ಎಲ್ಲರೂ ಆಗಮಿಸಿ ಐಕ್ಯತೆ ತೋರಿಸಿದ್ದೀರಿ. ಎಲ್ಲರಿಗೂ ನನ್ನ ಸಹದ್ಯೋಗಿಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಎಲ್ಲಾ ಸಂದರ್ಭದಲ್ಲಿಯೂ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ್ ಅವರು ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ. ಕೃಷ್ಣಾ ನೀರಿನ ವಿಚಾರದಲ್ಲಿಯೂ ಸಂಪೂರ್ಣ ಸಹಕಾರ ನೀಡಿದ್ದಾರೆ. ತುಂಗಾಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ಹೊಸದಾಗಿ ಅಳವಡಿಕೆ ಸಂದರ್ಭದಲ್ಲಿ ನವಿಲೆ ಸಮತೋಲನ ಅಣೆಕಟ್ಟೆ ನಿರ್ಮಾಣ ಸಂಬಂಧ ನಾನು ಇಟ್ಟಿದ್ದ ಪ್ರಸ್ತಾಪಕ್ಕೂ ಸಮ್ಮತಿ ಸೂಚಿಸಿದ್ದಾರೆ. ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆ ಪ್ರಸ್ತಾಪ, ಕೃಷ್ಣಾ ನದಿ ನೀರು ಹಂಚಿಕೆಯಲ್ಲೂ ಸಮನ್ವಯಕ್ಕೆ ನೆರವು ನೀಡಿದ್ದಾರೆ.

ವರುಣನ ಕೃಪೆಯಿಂದ ಕೊಡಗಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ನಮ್ಮಲ್ಲಿ 57 ಟಿಎಂಸಿ ಲಭ್ಯವಿದ್ದು, ನೀರಿನ ಒಳ ಹರಿವು ಹೆಚ್ಚಾಗಿದೆ. ನಿತ್ಯ 3500 ಕ್ಯೂಸೆಕ್ ಕಾವೇರಿ ಬಿಡಲು ಆದೇಶವಾಗಿದ್ದು, ಈಗಾಗಲೇ ನೀರಿನ ಒಳ ಹರಿವು ಹೆಚ್ಚಾಗಿರುವ ಕಾರಣ ಅಣೆಕಟ್ಟು ತುಂಬಿ ನೀರು ಹರಿದು ಹೋಗುತ್ತಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಹಿರಿಯ ನಾಯಕರು ರಾಜ್ಯದ ಹಿತವನ್ನು ಕಾಪಾಡುವ ಒಂದೇ ಉದ್ದೇಶದಿಂದ ಇಂದಿನ ಸಭೆಗೆ ಬಂದಿದ್ದೀರಿ. ನಿಮ್ಮ ಮುಕ್ತ ಸಲಹೆಗೆ ಸ್ವಾಗತ. ನಾವು ಕುಡಿಯುವ ನೀರನ್ನು ಸಂಗ್ರಹಿಸುವ ಜೊತೆಗೆ ರೈತರ ಹಿತದೃಷ್ಟಿಯಿಂದಲೂ ಕ್ರಮಕ್ಕೆ ಮುಂದಾಗಿದ್ದೇವೆ. ರೈತರು ಈಗಾಗಲೇ ಹಾಕಿದ್ದ ಬೆಳೆ ರಕ್ಷಣೆ ಉದ್ದೇಶದಿಂದ ಕೆ.ಆರ್.ಎಸ್, ಕಬಿನಿ ನಾಲೆಗಳಿಗೆ ನೀರು ಹರಿದಿದೆ ಎಂದು ಡಿ ಕೆ ಶಿವಕುಮಾರ್‌ ತಿಳಿಸಿದರು.

ಇನ್ನೂ ಈ ಸರ್ವಪಕ್ಷ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಅಶೋಕ್, ಚಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್, ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಯವರ ವಿಶೇಷ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+