Cauvery: ಕಾವೇರಿ ನೀರು ಹೋರಾಟ ರಾಜಸ್ಥಾನಕ್ಕೂ ತಲುಪಲಿದೆ!
ಜೀವ ನದಿ ಕಾವೇರಿ ಮಳೆ ಇಲ್ಲದೆ ಬತ್ತಿ ಹೋಗಿದ್ದು, ರೈತರು ಹಾಗೂ ಗ್ರಾಮೀಣ ಭಾಗದ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದೇ ಸಂದರ್ಭದಲ್ಲಿ ನೆರೆ ರಾಜ್ಯ ತಮಿಳುನಾಡು ಸರ್ಕಾರ ಕಿರಿಕ್ ಶುರು ಮಾಡಿದೆ. ಇರುವ ನೀರನ್ನು ಖಾಲಿ ಮಾಡಿಕೊಂಡು ಈಗ ಕರ್ನಾಟಕದ ಮೇಲೆ ಒತ್ತಡ ಹಾಕುತ್ತಿದೆ. ಹೀಗಿದ್ದಾಗಲೇ ಕರ್ನಾಟಕ ಸರ್ಕಾರ ಕೂಡ ಈ ವಿಚಾರದಲ್ಲಿ ತೊಡೆತಟ್ಟಿ ನಿಂತು ಅಖಾಡ ಪ್ರವೇಶಿಸಿದೆ.
ಅಂದಹಾಗೆ ಕಾವೇರಿ ನೀರು ಬಿಡಬೇಕು ಎಂಬ ಒತ್ತಡದ ನಡುವೆ ಕಾವೇರಿ ಹೋರಾಟದಲ್ಲಿ ದೊಡ್ಡ ಕಿಚ್ಚು ಹೊತ್ತಿಕೊಂಡಿದೆ. ಕರ್ನಾಟಕದಲ್ಲಿ ಬರ ಬಂದ ಸಮಯಕ್ಕೆ ತಮಿಳುನಾಡು ಪದೇ ಪದೆ ಕಿರಿಕ್ ಮಾಡುತ್ತಿದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ಹೋರಾಟವು ಶುರುವಾಗಿದೆ. ರೈತರು ರಾಜ್ಯ ಸರ್ಕಾರ ಹಾಗೂ ತಮಿಳುನಾಡು ವಿರುದ್ಧ ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ. ಇದೀಗ ಕಾವೇರಿ ಹೋರಾಟವು ರಾಜಸ್ಥಾನಕ್ಕೂ ತಲುಪುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಹಾಗಾದರೆ ಕಾವೇರಿ ಹೋರಾಟ ರಾಜಸ್ಥಾನಕ್ಕೆ ತಲುಪುವುದು ಏಕೆ? ಇದರ ಹಿಂದಿನ ಉದ್ದೇಶವೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಪಕ್ಷ ಮರೆತು ಕಾವೇರಿಗಾಗಿ ಒಗ್ಗಟ್ಟಿನ ಮಂತ್ರ
ಅಷ್ಟಕ್ಕೂ ಜೈಪುರದಲ್ಲಿ ನಾಳೆ ನಡೆಯುವ ಆಣೆಕಟ್ಟು ಸುರಕ್ಷಣಾ ಸಭೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಗಮಿಸಲಿದ್ದು, ಈ ವೇಳೆ ಕಾವೇರಿ ನೀರು ಹಂಚಿಕೆ ಬಗ್ಗೆ ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಲಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ, ಕಾವೇರಿ ನೀರಿನ ವಿಚಾರವಾಗಿ ಇಂದು ಸರ್ವಪಕ್ಷಗಳ ತುರ್ತು ಸಭೆ ಕರೆಯಲಾಗಿದೆ. ಹಿರಿಯ ನಾಯಕರು ಪಕ್ಷ ಭೇದ ಮರೆತು ಸಲಹೆ ಸೂಚನೆ ನೀಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.
ಕಾವೇರಿ ನೀರಿಗಾಗಿ ಹೋರಾಟ ಶುರು
ಜೈಪುರದ ಸಭೆಗೆ ಎಲ್ಲಾ ರಾಜ್ಯಗಳ ನೀರಾವರಿ ಸಚಿವರು ಬರುತ್ತಾರೆ. ನಮ್ಮ ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರ ನೀರಾವರಿ ಸಚಿವರಿಗೆ ವಾಸ್ತವಾಂಶ ಮನವರಿಕೆ ಮಾಡಿಕೊಡುತ್ತೇವೆ. ಎಂದು ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಈಗಾಗಲೇ ಸಾಕಷ್ಟು ನೀರು ತಮಿಳುನಾಡಿಗೆ ಬಿಟ್ಟಿದ್ದರೂ, ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಸತತ 15 ದಿನಗಳ ಕಾಲ ಬಿಡಲು ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡ ಆಕ್ರೋಶಗೊಂಡಿದೆ.

ಏನೇ ಇದ್ದರೂ ಕಾವೇರಿ ಮುಖ್ಯ
ಹಾಗೇ ಇದೇ ವೇಳೆ ಕುಮಾರಸ್ವಾಮಿ ಅವರು ಸಭೆಗೆ ಬರಲು ಆಗುವುದಿಲ್ಲ ಎಂದಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮಂಗಳವಾರ ರಾತ್ರಿ ಸಿಎಂ ಮತ್ತು ಸಚಿವರ ಜತೆ ಚರ್ಚೆ ನಡೆಸಿ ಸಭೆ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಅವರದ್ದು ತಪ್ಪಿಲ್ಲ, ನಾವೇ ತುರ್ತಾಗಿ ಸಭೆ ಕರೆದಿದ್ದು. ಎಲ್ಲಿದ್ದರೂ ಸಲಹೆ ಸೂಚನೆ ನೀಡಬಹುದಾಗಿದ್ದು, ನಾವು ಸ್ವೀಕರಿಸುತ್ತೇವೆ. ನಮಗೂ ಸಹ ಅನೇಕ ಕಾರ್ಯಕ್ರಮ ಇದ್ದವು, ಮುಖ್ಯಮಂತ್ರಿಗಳು 2 ಪ್ರಮುಖ ಕಾರ್ಯಕ್ರಮ ರದ್ದು ಮಾಡಿಕೊಂಡಿದ್ದಾರೆ ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು.
ಹಾಗೇ ಈ ಸಂದರ್ಭದಲ್ಲಿ ಬಿ.ಕೆ. ಹರಿಪ್ರಸಾದ್ ಅವರಿಗೆ ಎಐಸಿಸಿ ನೋಟಿಸ್ ನೀಡಿದೆ ಎಂಬ ಪ್ರಶ್ನೆಗೆ, ಇದು ನನ್ನ ವ್ಯಾಪ್ತಿಗೆ ಬರಲ್ಲ. ಶಿಸ್ತನ್ನ ಪಕ್ಷದಲ್ಲಿ ಮೊದಲಿನಿಂದಲು ಪಾಲಿಸಿಕೊಂಡು ಬರಲಾಗುತ್ತಿದೆ. ಮುಂದಿನದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಒಟ್ನಲ್ಲಿ ಇಷ್ಟುದಿನ ಕಾವೇರಿ ನೀರನ್ನು ತಮಿಳುನಾಡಿನ ಕಡೆ ಹರಿಸಿದ್ದ ಕರ್ನಾಟಕ ಈಗ ಸಿಡಿದೆದ್ದಿದೆ. ಅದ್ರಲ್ಲು ರಾಜ್ಯದಲ್ಲಿ ಹೋರಾಟ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿದೆ.












Click it and Unblock the Notifications