Carpooling; ಫೇಸ್‌ಬುಕ್ ಮೂಲಕ ಸಾರಿಗೆ ಸಚಿವರ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 03; ಕಾರ್ ಪೂಲಿಂಗ್ ನಿಷೇಧವಾಗಿದೆ ಎಂಬ ಸುದ್ದಿಗಳು ಎರಡು ದಿನಗಳಿಂದ ವೈರಲ್ ಆಗಿದೆ. ಟ್ಯಾಕ್ಸಿ ಚಾಲಕರ ದೂರಿನ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಬೆಂಗಳೂರು ನಗರದಲ್ಲಿ ಕಾರ್ ಪೂಲಿಂಗ್ ನಿಷೇಧಿಸಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಫೇಸ್‌ಬುಕ್ ಪೋಸ್ಟ್ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 'ಕಾರ್ ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ?' ಎಂದು ಸಚಿವರು ಪ್ರಶ್ನಿಸಿದ್ದಾರೆ.

'ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್ ಪೂಲಿಂಗ್‌ಗೆ ಬಳಸಬಹುದು' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗ; ಬೆಂಗಳೂರಿನಂತಹ ಮಹಾನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕಾರ್ ಪೂಲಿಂಗ್ ಪರ್ಯಾಯ ಮಾರ್ಗವಾಗಿದೆ ಎಂದು ಅಂದಾಜಿಸಲಾಗಿದೆ. ಒಂದೇ ಕಛೇರಿಗೆ ಹೋಗುವ ಹಲವು ಉದ್ಯೋಗಿಗಳು ಒಂದೇ ಕಾರಿನಲ್ಲಿ ಕಾರ್ ಪೂಲಿಂಗ್ ಮೂಲಕ ಸಂಚಾರ ನಡೆಸಿದರೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ.
ಆದರೆ ಕಳೆದ ಎರಡು ದಿನದಿಂದ ಕರ್ನಾಟಕದ ಸಾರಿಗೆ ಇಲಾಖೆ ಕಾರ್ ಪೂಲಿಂಗ್ ನಿಷೇಧಿಸಿದೆ ಎಂಬ ಸುದ್ದಿಗಳು ಎಲ್ಲಾ ಕಡೆ ಹಬ್ಬಿವೆ. ಈ ಕುರಿತು ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆ ಚರ್ಚೆಗಳು ಆರಂಭವಾಗಿವೆ. ಈ ಹಿನ್ನಲೆಯಲ್ಲಿ ಸಾರಿಗೆ ಸಚಿವರು ಫೇಸ್‌ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕೆಯೊಂದನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ಸಾರಿಗೆ ಇಲಾಖೆ ಬೆಂಗಳೂರು ನಗರದಲ್ಲಿ ಕಾರ್ ಪೂಲಿಂಗ್ ನಿಷೇಧಿಸಿದೆ. ಈ ಕುರಿತು ಆರ್‌ಟಿಒ ಕಛೇರಿಗಳಿಗೆ ಈಗಾಗಲೇ ಸೂಚನೆ ಕೊಡಲಾಗಿದೆ ಎಂದು ವರದಿ ಮಾಡಿದ್ದವು. ಈ ಹಿನ್ನಲೆಯಲ್ಲಿ ಸಚಿವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಾರಿಗೆ ಇಲಾಖೆ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಕಾರ್ ಪೂಲಿಂಗ್ ನಡೆಸುವುದನ್ನು ತಕ್ಷಣದಿಂದಲೇ ನಿಷೇಧಿಸಿದೆ. ಕ್ವಿಕ್ ರೈಡ್, ಝೂಮ್, ಬ್ಲಾಬ್ಲಾ ಕಾರ್ ಮುಂತಾದ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಕಾರ್ ಪೂಲಿಂಗ್ ನಡೆಸಿದರೆ 5 ರಿಂದ 10 ಸಾವಿರ ರೂ. ತನಕ ದಂಡ ವಿಧಿಸಲಾಗುತ್ತದೆ, ವಾಹನದ ಆರ್‌ಸಿಯನ್ನು 6 ತಿಂಗಳು ಅಮಾನತು ಮಾಡಲಾಗುತ್ತದೆ ಎಂದು ವರದಿಗಳು ಹೇಳಿದ್ದವು.
ಬೈಕ್ ಟ್ಯಾಕ್ಸಿ ಸೇವೆ ಜೊತೆಗೆ ಅಪ್ಲಿಕೇಶನ್ ಆಧಾರಿತ ಕಾರ್ ಪೂಲಿಂಗ್ ಸೇವೆಯನ್ನು ಸಹ ರದ್ದಗೊಳಿಸಬೇಕು ಎಂದು ಟ್ಯಾಕ್ಸಿ ಚಾಲಕರು ಸಾರಿಗೆ ಇಲಾಖೆಗೆ ಪದೇ ಪದೇ ಮನವಿ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಕಾರ್ ಪೂಲಿಂಗ್ ನಿಷೇಧಿಸಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು.
ಬೆಂಗಳೂರು ನಗರ ಮಾತ್ರವಲ್ಲ ಮುಂಬೈ, ದೆಹಲಿ ಸೇರಿದಂತೆ ಮಹಾನಗರದಲ್ಲಿ ಕಾರ್ ಪೂಲಿಂಗ್ ಸೇವೆ ಇದೆ. ಒಂದು ಕಾರಿನಲ್ಲಿ ಒಬ್ಬರೇ ಹೋಗುವುದಕ್ಕಿಂತ ಅದೇ ಮಾರ್ಗದಲ್ಲಿ ಸಂಚಾರ ನಡೆಸುವ ನಾಲ್ವರು ಒಟ್ಟಿಗೆ ಪ್ರಯಾಣಿಸುವ ಈ ಸೇವೆಯಿಂದ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಇಳಿಕೆಯಾಗುತ್ತದೆ.
ಐಟಿ ವಲಯದಲ್ಲಿ ಕಾರ್ ಪೂಲಿಂಗ್ ಈಗಾಗಲೇ ಜನಪ್ರಿಯವಾಗಿದೆ. ಆದರೆ ಇಂತಹ ಕಾರ್ ಪೂಲಿಂಗ್ ನಿಷೇಧ ಮಾಡಲಾಗಿದೆ ಎಂಬ ಸುದ್ದಿ ಚರ್ಚೆಗೆ ಕಾರಣವಾಗಿತ್ತು. ವಿವಿಧ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳು ಸಹ ಕಾರ್ ಪೂಲಿಂಗ್ ಸೇವೆಯನ್ನು ನೀಡುತ್ತಿವೆ.
ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಖಾಸಗಿ ಕಾರುಗಳು ಕಾರ್ ಪೂಲಿಂಗ್ ಮಾಡುವ ಮೂಲಕ ಲಾಭಗಳಿಸುತ್ತಿದ್ದಾರೆ. ಇದರಿಂದಾಗಿ ನಮಗೆ ನಷ್ಟವಾಗುತ್ತಿದೆ. ಸಾರಿಗೆ ಇಲಾಖೆ ಈ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂಬುದು ಟ್ಯಾಕ್ಸಿ ಚಾಲಕರ ಬೇಡಿಕೆಯಾಗಿದೆ.












Click it and Unblock the Notifications