Government employee; ಎನ್‌ಪಿಎಸ್ ಬಗ್ಗೆ ನೌಕರರಿಗೆ ಹೊಸ ಭರವಸೆ
ಬೆಂಗಳೂರು, ಅಕ್ಟೋಬರ್ 31: ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಈಗ ಕೈಗೊಂಡಿರುವ ತೀರ್ಮಾನದಿಂದ ನೌಕರರಲ್ಲಿ ಹೊಸ ಭರವಸೆ ಮೂಡಿದೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ಮಾನದಂಡಗಳಿಗೆ ಒಳಪಡುವ ಕರ್ನಾಟಕ ಕೇಡರ್‌ನ 8 ಐಎಎಸ್, 7 ಐಪಿಎಸ್ ಹಾಗೂ ಒಬ್ಬರು ಐಎಫ್‌ಎಸ್ ಅಧಿಕಾರಿಗಳಿಗೆ ಹಳೇ ಪಿಂಚಣಿ ಯೋಜನೆ (ಒಪಿಎಸ್) ಸೌಲಭ್ಯ ನೀಡಿ ಆದೇಶ ಹೊರಡಿಸಿದೆ.

ಈ ಅಧಿಕಾರಿಗಳ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಖಾತೆಯು 2024 ಮಾ.31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಭಾರತೀಯ ಸೇವಾ ನಿಯಮಾವಳಿ ಪ್ರಕಾರ ಖಾಲಿಯಿರುವ ಹುದ್ದೆಗಳಿಗೆ ನೇಮಕ ಅಧಿಸೂಚನೆಯು ಎನ್‌ಪಿಎಸ್ ಜಾರಿ ಮುನ್ನ ಪ್ರಕಟವಾಗಿ 2004 ಜ.1ರ ಮುನ್ನ ಅಥವಾ ನಂತರ ಎನ್‌ಪಿಎಸ್‌ನಡಿ ಸೇವೆಗೆ ಸೇರಿದ ಭಾರತೀಯ ಸೇವೆ ಅಧಿಕಾರಿಗಳಿಗೆ ಈ ಒಪಿಎಸ್ ಸೌಲಭ್ಯ ಕಲ್ಪಿಸಲಾಗಿದೆ.
2003, 2004ರ ನಾಗರಿಕ ಸೇವಾ ಪರೀಕ್ಷೆ ಮುಖೇನ ಭಾರತೀಯ ಸೇವೆ ಮತ್ತು 2003ರ ಭಾರತೀಯ ಅರಣ್ಯ ಸೇವೆ ಪರೀಕ್ಷೆ ಮೂಲಕ ಆಯ್ಕೆಯಾದವರಿಗೆ ಒಂದು ಬಾರಿಗೆ ಒಪಿಎಸ್ ಅನ್ವಯಿಸಲು ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸೂಚಿಸಿದೆ. ಅದರಂತೆಯೇ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರ ಬೇಡಿಕೆ; ಕರ್ನಾಟಕದ ಸರ್ಕಾರಿ ನೌಕರರು ರಾಜ್ಯ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಲು ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಭರವಸೆಯನ್ನು ನೀಡಿದೆ.
ಕೆಲವು ದಿನಗಳ ಹಿಂದೆ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ತೇಜ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿತ್ತು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ನಿಯೋಗಕ್ಕೆ ಭರವಸೆಯೊಂದನ್ನು ಕೊಟ್ಟಿದ್ದರು.
ಸಿದ್ದರಾಮಯ್ಯ, ರಾಜ್ಯ ಸರ್ಕಾರಿ ನೌಕರರ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಅನ್ನು ಜಾರಿಗೊಳಿಸುವ ಕುರಿತು ಶೀಘ್ರದಲ್ಲಿಯೇ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಸುವುದಾಗಿ ನಿಯೋಗಕ್ಕೆ ಹೇಳಿದ್ದರು. 2023ರ ಮಾರ್ಚ್‌ನಲ್ಲಿ ಕರ್ನಾಟಕದ ಸರ್ಕಾರಿ ನೌಕರರು ಮುಷ್ಕರ ನಡೆಸಿದಾಗಲೂ ಎನ್‌ಪಿಎಸ್ ರದ್ದುಗೊಳಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.
ರಾಜಸ್ಥಾನ, ಛತ್ತೀಸ್‌ಗಢ ರಾಜ್ಯದಲ್ಲಿ ಎನ್‌ಪಿಎಸ್ ರದ್ದುಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ಇದೇ ಮಾದರಿಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ. ಕರ್ನಾಟಕದಲ್ಲಿ 2006ರ ಏಪ್ರಿಲ್ 1ರಂದು ಹೊಸ ಪಿಂಚಣಿ ಯೋಜನೆ ಜಾರಿಯಾಗಿದೆ. ಸುಮಾರು 2.98 ಲಕ್ಷ ನೌಕರರು ಇದರ ವ್ಯಾಪ್ತಿಗೆ ಒಳಪಡುತ್ತಾರೆ.
ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ಹೊಸ ಪಿಂಚಣಿ ಯೋಜನೆಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಅಲ್ಲದೇ ಎನ್‌ಪಿಎಸ್ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವುದಾಗಿ ಪಕ್ಷ ಭರವಸೆ ನೀಡಿತ್ತು. ಎನ್‌ಪಿಎಸ್ ರದ್ದು ಮಾಡುವ ಪಕ್ಷದ ಪ್ರಣಾಳಿಕೆಯ ಭರವಸೆ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications