ಹಿಜಾಬ್ ವಿವಾದಕ್ಕೆ ಉಲ್ಬಣಕ್ಕೆ ಸಿಎಫ್ಐ ಪ್ರಚೋದನೆ ಕಾರಣ: ಕಾಲೇಜು ಪರ ವಕೀಲ
ಬೆಂಗಳೂರು ಫೆ.23: ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೇಳಲು ಕ್ರಾಂತಿಕಾರಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ನೇರ ಕಾರಣ, ಅದು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಪೋಷಕರನ್ನು ಪ್ರಚೋದಿಸಿ, ಸಮವಸ್ತ್ರ ವಿಚಾರವನ್ನು ದೊಡ್ಡ ವಿವಾದವನ್ನಾಗಿ ಮಾಡಿದೆ ಎಂದು ಕಾಲೇಜು ಪರ ವಕೀಲರು ಹೈಕೋರ್ಟ್ ನಲ್ಲಿ ಬುಧವಾರ ವಾದ ಮಂಡಿಸಿದರು.
ಕಾಲೇಜು ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಸ್. ಎಸ್. ನಾಗಾನಂದ್, ಸಿಎಫ್ ಐ ನೋಂದಾಯಿತ ಸಂಘಟನೆಯಲ್ಲಿ, ವಿದ್ಯಾರ್ಥಿ ಸಂಘಟನೆ ಎಂದು ಹೇಳಲಾಗುತ್ತಿದೆ. ಅದು ಕಾಲೇಜಿಗೆ ಬಂದು ಹಿಜಾಬ್ ಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದೆ. ಜೊತೆಗೆ ಪ್ರಚೋದನೆ ನೀಡಿದೆ. ಆದರ ಬಗ್ಗೆ ಸರ್ಕಾರದ ಗುಪ್ತಚರ ದಳದಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು ಎಂದರು.
ಆಗ ನ್ಯಾಯಪೀಠ, ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಎಜಿ, ಆ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇದೆ, ಅದನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದರು.
ಅದಕ್ಕೆ ಆಕ್ಷೇಪ ಎತ್ತಿದ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್, ಒಂದು ಸಂಘಟನೆಯನ್ನು ಗುರಿ ಮಾಡುವುದು ಸರಿಯಲ್ಲ. ಬೇರೆ ಸಂಘಟನೆಗಳು ಕೇಸರಿ ಶಾಲು ಹಂಚಿವೆ ಎಂಬ ಕುರಿತು ಮಾಧ್ಯಮಗಳಲ್ಲಿ ವರದಿ ಬಂದಿವೆ. ಹಾಗಾಗಿ ಎಲ್ಲ ಸಂಘಟನೆಗಳ ಬಗ್ಗೆಯೂ ಸರ್ಕಾರ ವರದಿ ನೀಡಲಿ ಎಂದು ಹೇಳಿದರು.

ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ವರಿದ್ದ ಪೂರ್ಣ ಪೀಠ ಸುಮಾರು ಎರಡು ಗಂಟೆಗಳ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಬುಧವಾರ ವಿಚಾರಣೆ ಮುಂದುರಿವಸಿದ ನ್ಯಾಯಪೀಠದ ಮುಂದೆ, ಸಿಎಫ್ ಐ ಸಂಘಟನೆ ಪ್ರತಿಭಟನೆಗಳನ್ನು ನಡೆಸಿತು. ಜೊತೆಗೆ ಕಾಲೇಜಿನಲ್ಲಿ ಗಲಭೆಯ ವಾತಾವರಣ ಸೃಷ್ಟಿಸಿತು. ಅದರ ಪ್ರಚೋದನೆ ಮೇರೆಗೆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಅದರ ಪರಿಣಾಮ ಇಡೀ ಶಿಕ್ಷಣ ವ್ಯವಸ್ಥೆ ಮೇಲಾಗುತ್ತಿದೆ ಎಂದು ದೂರಿದರು.
2004ರಿಂದಲೇ ಸಮವಸ್ತ್ರ ಜಾರಿ: ಕಾಲೇಜಿನಲ್ಲಿ ಸಮವಸ್ತ್ರ ಧರಿಸುವುದು 2004ರಿಂದಲೂ ಕಡ್ಡಾಯವಾಗಿದೆ ಮತ್ತು ಅದನ್ನು ಎಲ್ಲ ವಿದ್ಯಾರ್ಥಿಗಳೂ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯೂ ಅದನ್ನು ಪ್ರಶ್ನಿಸಿಲ್ಲ. ಅರ್ಜಿದಾರರೂ ಸಹ ಎರಡು ವರ್ಷಗಳಿಂದ ಆ ನಿಯಮ ಪಾಲನೆ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಆ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ನಾಗಾನಂದ್ ಹೇಳಿದರು.
ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ಹಾಗೂ ಪೋಷಕರು, ಅಧ್ಯಾಪಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ತಳ್ಳಿಹಾಕಿದ ನಾಗಾನಂದ್, ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ರೀತಿಯಲ್ಲಿ ನೋಡುತ್ತಿದ್ದಾರೆ, ಆದರೂ ತಾರತಮ್ಯದಿಂದ ನೋಡುತ್ತಿದ್ದರು, ಹೊಡೆಯುತ್ತಿದ್ದರು ಎಂದೆಲ್ಲಾ ಆರೋಪಿಸಿರುವುದನ್ನು ಒಪ್ಪಲಾಗದು ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿ ಪರ ಹಿರಿಯ ನ್ಯಾಯವಾದಿ ಸಜ್ಜನ್ ಪೂವಯ್ಯ ವಾದ ಮಂಡಿಸಿದ ಜಾತ್ಯತೀತವಾಗಿ ಕೂಡಿರಬೇಕಾದ ಶಿಕ್ಷಣ ಸಂಸ್ಥೆಯಲ್ಲಿ ಬೇರೆ ಬೇರೆ ಧರ್ಮವನ್ನು ಪ್ರತಿನಿಧಿಸುವ ಉಡುಗೆ ತೊಡಲು ಅವಕಾಶ ನೀಡಲಾಗದು ಎಂದರು.
ನ್ಯಾಯಪೀಠ ಸ್ಪಷ್ಟನೆ:
ವಿಚಾರಣೆ ಕೊನೆಯಲ್ಲಿ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್, ಮಧ್ಯಂತರ ಆದೇಶ ಮುಂದಿಟ್ಟುಕೊಂಡು ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಶಾಲೆಗೆ ಸೇರಿಸುತ್ತಿಲ್ಲ. ಆ ಬಗ್ಗೆ ಸ್ಪಷ್ಟನೆ ನೀಡಬೇಕೆಂದರು.
ಆಗ ನ್ಯಾಯಪೀಠ, ನಾವು ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಯಾವ ಕಾಲೇಜುಗಳಲ್ಲಿ ಅದು ಪದವಿಯಾಗಲಿ ಅಥವಾ ಪಿಯು ಕಾಲೇಜಾಗಲಿ ಮೊದಲೇ ಸಮವಸ್ತ್ರ ನಿಗದಿಪಡಿಸಿದ್ದಾರೆ ಅಂತಹ ಕಡೆ ಸಮವಸ್ತ್ರವನ್ನೇ ಧರಿಸಬೇಕೇ ಹೊರತು ಬೇರೆ ಉಡುಗೆಯಲ್ಲ ಎಂದು ಸ್ಪಷ್ಟಪಡಿಸಿತು.












Click it and Unblock the Notifications