ಸಚಿವ ಸಂಪುಟ ವಿಸ್ತರಣೆ ಸನ್ನಿಹಿತ: ಮುಖ್ಯಮಂತ್ರಿ ದೆಹಲಿಗೆ, ಆಕಾಂಕ್ಷಿಗಳೂ ದೌಡು
ಬೆಂಗಳೂರು, ಏ.5: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಆಕಾಂಕ್ಷಿಗಳೂ ಸಹ ದೆಹಲಿಗೆ ದೌಡಾಯಿಸುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಷಯ ಕಳೆದ ಐದಾರು ತಿಂಗಳಿನಿಂದ ಚರ್ಚೆಗೆ ಬಂದು ಬಂದು ಹಿಂದೆ ಸರಿಯುತ್ತಿದೆ. ಬೆಳಗಾವಿ ಅಧಿವೇಶನ ನಂತರ, ಸಂಕ್ರಾಂತಿ ನಂತರ, ಬಜೆಟ್ ಅಧಿವೇಶನ ಕಳೆದ ಮೇಲೆ, ಯುಗಾದಿ ಬಳಿಕ ಹೀಗೆ ಮುಂದೆ ಮುಂದೆ ಹೋಗುತ್ತಲೇ ಇತ್ತು. ಆದರೆ, ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ಪಟ್ಟಿ ಸಿದ್ದಪಡಿಸಿ ನೀಡುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಆಗಬಹುದು ಎಂಬ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮಧ್ಯಾಹ್ನ ದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದು, ಬುಧವಾರ ರಾತ್ರಿ ವಾಪಸ್ಸಾಗಲಿದ್ದಾರೆ. ಈ ಅವಧಿಯಲ್ಲಿ ರಾಜ್ಯದ ವಿಚಾರವಾಗಿ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. ಮುಖ್ಯವಾಗಿ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ನಾಯಕರನ್ನು ಭೇಟಿ ಮಾಡಿ, ಪಟ್ಟಿಯನ್ನು ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಎರಡು ದಿನಗಳ ದೆಹಲಿಗೆ ಪ್ರಯಾಣ ಮಾಡುತ್ತಿದ್ದೇನೆ. ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಜೊತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಲಾಗುವುದು. ಮೇಕೆದಾಟು, ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಒತ್ತಾಯವನ್ನು ಕೇಂದ್ರಕ್ಕೆ ಮಾಡುತ್ತೇನೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಕೆಲಸಗಳು ನಿಗದಿ ಸಮಯದಲ್ಲಿ ಪೂರ್ಣಗೊಳಿಸುವ ಒತ್ತಾಯ ಮಾಡಲಿದ್ದೇನೆ' ಎಂದು ಹೇಳಿದರು.
ಅಲ್ಲದೆ, ಬುಧವಾರ (ಏ.6) ಹಣಕಾಸು ಸಚಿವೆ ನಿರ್ಮಲಾ ಸೀತರಾಮಾನ್ ಅವರನ್ನು ಭೇಟಿ ಮಾಡಲಾಗುವುದು. ಜಿಎಸ್‌ಟಿ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಲಾಗುವುದು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಸಂಗೊಳ್ಳಿ ರಾಯಣ್ಣ ಶಾಲೆಗಳನ್ನು ಸೈನಿಕ ಶಾಲೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧವೂ ಚರ್ಚಿಸಲಾಗುವುದು. ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಬೊಮ್ಮಾಯಿ ವಿವರಿಸಿದರು.

ಸಂಪುಟ ವಿಸ್ತರಣೆ ಚರ್ಚೆಯಾಗಬಹುದು:
ದೆಹಲಿ ಭೇಟಿ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೆ ಸಮಯವನ್ನೂ ಕೇಳಲಾಗಿದೆ. ಆದರೆ, ಇನ್ನೂ ಸಮಯ ನಿಗದಿಯಾಗಿಲ್ಲ. ಒಂದು ವೇಳೆ ಅವಕಾಶ ದೊರೆತರೆ ಇಬ್ಬರನ್ನೂ ಭೇಟಿ ಮಾಡಲಾಗುವುದು ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರೊಂದಿಗೆ ಚರ್ಚಿಸುತ್ತೀರಾ ಎಂಬ ಪ್ರಶ್ನೆಗೆ, ಅಮಿತ್ ಶಾ ಮತ್ತು ನಡ್ಡಾ ಅವರ ಭೇಟಿ ಸಂದರ್ಭದಲ್ಲಿ ಇದು ಚರ್ಚೆಗೆ ಬರಬಹುದು ಎಂದರು. ಈಗಾಗಲೇ ಸಚಿವ ಆಕಾಂಕ್ಷಿಗಳು ದೆಹಲಿಗೆ ಹೊರಟಿದ್ದಾರಲ್ಲ ಎಂಬುದಕ್ಕೆ, 'ಅದು ಸಹಜ' ಎಂದಷ್ಟೇ ಉತ್ತರಿಸಿದರು.
ದೆಹಲಿಯಲ್ಲಿ ಬೀಡು ಬಿಟ್ಟ ನಾಯಕರು:
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸದ್ಯ ನಾಲ್ಕು ಸಚಿವ ಸ್ಥಾನಗಳು ಮಾತ್ರ ಖಾಲಿ ಇವೆ. ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು ಮತ್ತು ಯುವ ಸಚಿವರಿಗೆ, ಆರ್‌ಎಸ್‌ಎಸ್ ಹಿನ್ನೆಲೆಯಲೆ ಹೊಂದಿದವರಿಗೆ ಸಚಿವರನ್ನಾಗಿ ಮಾಡಲಾಗುವುದು ಎಂಬ ಗುಸುಗುಸು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸಚಿವರಾಗಬೇಕು ಎಂಬ ಹುಮ್ಮಸ್ಸಿನಲ್ಲಿ ಇರುವವರು ಮತ್ತು ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಇರುವವರು ಈಗಾಗಲೇ ದೆಹಲಿಗೆ ತೆರಳಿದಿದ್ದಾರೆ.
ಸಚಿವರಾದ ಮುರುಗೇಶ್ ನಿರಾಣಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ದೆಹಲಿಯಲ್ಲಿದ್ದಾರೆ.
Recommended Video













Click it and Unblock the Notifications