'ಜೆಡಿಎಸ್ ಎಂಎಲ್ಸಿಗಳಿಗೆ ಮಂತ್ರಿ ಭಾಗ್ಯ ಸದ್ಯಕ್ಕಿಲ್ಲ'
Recommended Video

ಬೆಂಗಳೂರು, ಜೂನ್ 05: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಲು ಕಸರತ್ತು ಇನ್ನೂ ನಡೆಯುತ್ತಲೇ ಇದೆ. ಎರಡು ಹಂತದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಮಾಡಲಿದ್ದು, ಮೊದಲ ಹಂತದಲ್ಲಿ ಜೆಡಿಎಸ್ ನ ಎಂಎಲ್ಸಿಗಳಿಗೆ ಯಾವುದೇ ಸಚಿವ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ.
ಜೂನ್ 06ರಂದು ಮಧ್ಯಾಹ್ನದ ವೇಳೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ನಡುವೆ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡದಿರಲು ಜೆಡಿಎಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ರೀತಿ ನಿರ್ಣಯ ಕೈಗೊಳ್ಳಲಾಗಿದೆ. ಸದ್ಯ ಜೆಡಿಎಸ್ ಎಂಎಲ್ಸಿಗಳ ಪೈಕಿ ಬಸವರಾಜ ಹೊರಟ್ಟಿ ಹಾಗೂ ಬಿಎಂ ಫಾರೂಕ್ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಬಳಿ ಇರಿಸಿಕೊಂಡ ಎರಡು, ಮೂರು ಖಾತೆಗಳನ್ನು ಹಂಚದಿರಲು ನಿರ್ಧರಿಸಲಾಗಿದ್ದು, 2 ರಿಂದ 3 ಸಚಿವ ಸ್ಥಾನವನ್ನು ನಂತರ ತುಂಬಲಾಗುತ್ತದೆ. ಒಟ್ಟಾರೆ, ಎರಡನೇ ಹಂತದಲ್ಲಿ 10-12 ಸಚಿವರು ಸಂಪುಟ ಸೇರಲಿದ್ದಾರೆ.
ಈ ನಡುವೆ ಎಚ್ ಡಿ ರೇವಣ್ಣ ಅವರು ಲೋಕೋಪಯೋಗಿ ಹಾಗೂ ಇಂಧನ ಖಾತೆಗಾಗಿ ಪಟ್ಟು ಹಿಡಿದಿದ್ದು, ಈ ಬಗ್ಗೆ ಇಂದು ಸಂಜೆಯೊಳಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.











Click it and Unblock the Notifications