ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಶುರುವಾಯ್ತು ಕಸರತ್ತು: ದೆಹಲಿಯತ್ತ ದೌಡಯಿಸಿದ ಸಚಿವಾಕಾಂಕ್ಷಿಗಳು
ಬೆಂಗಳೂರು, ಮೇ 24: ಸರ್ಕಾರ ರಚನೆಯಾಗಿ 8 ಜನ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಸಚಿವಾಕಾಂಕ್ಷಿಗಳ ಒತ್ತಡ ಜೋರಾಗಿದೆ. ಬುಧವಾರ ಸಂಪುಟ ವಿಸ್ತರಣೆ ಕುರಿತ ಹೈಕಮಾಂಡ್ ನಾಯಕ ಭೇಟಿಗೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ತೆರಳಲಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ದೆಹಲಿಯತ್ತ ಮುಖ ಮಾಡಿದ್ದಾರೆ.
ಹೌದು, ಕಾಂಗ್ರೆಸ್ ಹಲವು ಹಿರಿಯ ಶಾಸಕರು ಸಚಿವ ಸ್ಥಾನ ವಿಚಾರವಾಗಿ ಅಸಮಾಧಾನವನ್ನ ಹೊರಹಾಕಿದ್ದು, ಸಿದ್ದರಾಮಯ್ಯ ಅವರ ಬಳಿಯೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಈಗಾಗಲೇ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಿದ್ದರಾಮಯ್ಯ ಅವರ ಜೊತೆಗೆ ಪ್ರಾಥಮಿಕ ಸಭೆ ನಡೆಸಿ ಚರ್ಚೆಸಿದ್ದಾರೆ. ಇನ್ನ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಲು ಸಿದ್ದರಾಮಯ್ಯ ಮುಂದಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ದೌಡಯಿಸಿದ್ದಾರೆ.

ಬುಧವಾರ ಹೈಕಮಾಂಡ್ ನಾಯಕರ ಭೇಟಿಗೆ ಸಿದ್ದರಾಮಯ್ಯ ತೆರಳಲಿದ್ದು, ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಚರ್ಚೆ ನಡೆಸಲಾಗುತ್ತದೆ. ಜೊತೆಗೆ ನಿಗಮ ಮಂಡಳಿಗಳ ನೇಮಕಾತಿ ಕುರಿತು ದೆಹಲಿ ವರಿಷ್ಠರೊಂದಿಗೆ ಸಮಾಲೋಚಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಅವಕಾಶ ಕಳೆದುಕೊಂಡ ಹಿರಿಯರು ಈಗಾಗಲೇ ಪಕ್ಷದ ನಾಯಕರ ವಿರುದ್ದ ಬೇಸರಗೊಂಡಿದ್ದು, ಜಾತಿ ಹಾಗೂ ಪ್ರಾದೇಶಿಕತೆ ಆಧಾರದ ಮೇಲೆ ಯುವ ನಾಯಕರು ಕೂಡ ಸಂಪುಟ ಸೇರಲು ಲಾಭಿ ನಡೆಸುತ್ತಿದ್ದಾರೆ. ಇತ್ತ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಅಳೆದುತೂಗಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ.
ಸಿಎಂ ಸಿದ್ದರಾಮಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ತಮ್ಮ ತಮ್ಮ ಬಣದವರಿಗೆ ಸಚಿವ ಸ್ಥಾನವನ್ನ ಕೊಡಿಸುವ ಸಲುವಾಗಿ ಚರ್ಚೆ ನಡೆಸಲಿದ್ದಾರೆ. ಶಾಸಕ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ನಾಗೇಂದ್ರ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಹಲವು ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಇನ್ನು ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆಗೆ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ನೂತನ ಸರ್ಕಾರದ ಸಂಪುಟದಲ್ಲಿ ಸಾಕಷ್ಟು ಜನ ಸಚಿವಾಕಾಂಕ್ಷಿಗಳು ಇದ್ದಾರೆ. ಎರಡು ಮೂರು ದಿನದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ನಾನು ಸಹ ದೆಹಲಿಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಾನು ಕೂಡ ಪ್ರಬಲ ಸಚಿವ ಆಕಾಂಕ್ಷಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಗೆ ಹಲವು ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ ನಾನು ಲಿಂಗಾಯತ ಸಮಾಜಕ್ಕೆ ಸೇರಿದವನು. ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್ ಮನವೊಲಿಸಲು ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications