ಮೈತ್ರಿ ಜೋಡೆತ್ತುಗಳಾದ ವಿಜಯೇಂದ್ರ, ಕುಮಾರಸ್ವಾಮಿ: ಲೋಕಸಮರದಲ್ಲಿ ಗೆಲ್ಲುವ ಸ್ಥಾನಗಳ ಕುರಿತು ಲೆಕ್ಕಾಚಾರ!
ಬೆಂಗಳೂರು, ನವೆಂಬರ್ 27: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್, ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದು, ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಹಲವು ತಂತ್ರಗಾರಿಕೆಯನ್ನ ನಡೆಸಿದ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ನ 20 ರ ಟಾರ್ಗೆಟ್ ಗೆ ಬ್ರೇಕ್ ಹಾಕಲು ಸಿದ್ದತೆ ಕುರಿತು ಮೈತ್ರಿ ಜೋಡೆತ್ತುಗಳಾದ ವಿಜಯೇಂದ್ರ ಹಾಗೂ ಹೆಚ್ ಡಿ ಕುಮಾರಸ್ವಾಮಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಇನ್ನೂ ಭೇಟಿ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಕ್ಷೇತ್ರ ಹಂಚಿಕೆ ಕುರಿತು ಹೈಕಮಾಂಡ್ ನಲ್ಲಿ ಚರ್ಚಿಸುತ್ತಾರೆ. ರಾಜ್ಯದಲ್ಲಿ ನಮ್ಮ ಮೈತ್ರಿಕೂಟ 28ಕ್ಕೆ 28 ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
2006ರಲ್ಲಿ ಮೈತ್ರಿ ಸರಕಾರದ ಕಾಲದಲ್ಲಿ ಯಡಿಯೂರಪ್ಪ ಹಾಗೂ ನಾನು ಜೊತೆಯಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದೇವೆ. ಅದು ಪುನಾ ಮರುಕಳಿಸಬೇಕು ಎಂಬುದು ರಾಜ್ಯದ ಜನರ ಆಸೆಯಾಗಿದೆ. ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ಅವರುಗಳು, ನಾನು ಎರಡೂ ಪಕ್ಷಗಳ ಎಲ್ಲಾ ನಾಯಕರು ಜೊತೆಗೂಡಿ 2006-07ರ ಉತ್ತಮ ಸ್ಥಿತಿಯನ್ನು ಮರಳಿ ತರಲು ಶ್ರಮಿಸುತ್ತೇವೆ. ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಹೋದರರ ರೀತಿ ರಾಜ್ಯದಲ್ಲಿ ಓಡಾಡಲಿದ್ದಾರೆ. ಎರಡೂ ಪಕ್ಣಗಳು ಒಟ್ಟಾಗಿ ಹೋರಾಟ ನಡೆಸಲಿವೆ. ಆಡಳಿತ ಪಕ್ಷದ ತಪ್ಪುಗಳನ್ನು ದಾಖಲೆ ಸಮೇತ ಎತ್ತಿ ಹಿಡಿಯುತ್ತೇವೆ ಎಂದರು.
ಇನ್ನೂ ಈ ವೇಳೆ ವಿಜಯೇಂದ್ರ ಮಾತನಾಡಿ, ರಾಜ್ಯದ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಒಟ್ಟಾಗಿ ಹೋಗುವ ಕುರಿತು ಇಬ್ಬರು ಮಾತುಕತೆ ನಡೆಸಿದ್ದೇವೆ. ದೆಹಲಿಯಲ್ಲಿ ವರಿಷ್ಠರು ಸೀಟು ಹಂಚಿಕೆ ಬಗ್ಗೆ ಚರ್ಚಿಸುತ್ತಾರೆ ಎಂದು ತಿಳಿಸಿದರು.
ಮೋದಿ, ನಡ್ಡಾ, ಅಮಿತ್ ಶಾ,ಹೆಚ್ ಡಿಕೆ ಅವರು ಈಗಾಗಲೇ ದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಲು ನಿರ್ಧರಿಸಲಾಗಿದೆ. ನಾನು ಕೂಡ ಈಗಾಗಲೇ ಮಾಜಿ ಪ್ರಧಾನಿಗಳಾದ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಹಿರಿಯರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆಯೂ ಚರ್ಚಿಸಿದ್ದೇನೆ. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಏಕೈಕ ಸಂಸದ ಡಿ.ಕೆ.ಸುರೇಶ್ ಅವರನ್ನು ಎದುರಿಸುವ ಕುರಿತು ನಾಲ್ಕು ಗೋಡೆಗಳ ಮಧ್ಯೆ ಕೂತು ಕಾರ್ಯತಂತ್ರ ಮಾಡಲಾಗುವುದು. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಸಂಸದನೂ ಇರಬಾರದು. ದೇಶದ - ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ - ಬಿಜೆಪಿ ಮೈತ್ರಿಯಾಗಿದೆ ಎಂದರು.












Click it and Unblock the Notifications