ಪ್ರಹ್ಲಾದ್ ಜೋಶಿ ರಾಜೀನಾಮೆಗೆ ಒತ್ತಾಯ: ವಿಜಯೇಂದ್ರ ಹೇಳಿದ್ದೇನು?
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಹೆಸರನ್ನು ಸಂಬಂಧಪಡದ ಪ್ರಕರಣವೊದರಲ್ಲಿ ಎಳೆದು ತರುವ ಮೂಲಕ ಕಾಂಗ್ರೆಸ್ಸಿಗರು ವಿಘ್ನ ಸಂತೋಷ ಪಡಲು ಹೊರಟಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಅವರು ಅಸಂಬದ್ಧವಾಗಿ ಜೋಶಿಯವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆರೋಪಿತ ಗೋಪಾಲ ಜೋಷಿ ಅವರೊಂದಿಗೆ ಕಳೆದ 32 ವರ್ಷಗಳಿಂದಲೂ ಸಂಪರ್ಕ ಕಡಿದುಕೊಂಡು ಯಾರೊಂದಿಗೂ ತಮ್ಮ ಸಂಬಂಧ ಬೆರೆಸದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನ್ಯಾಯಾಲಯದಲ್ಲಿ 2013ರಲ್ಲೇ ತಡೆಯಾಜ್ಞೆ ತಂದಿದ್ದಾರೆ, ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅದರ ವಿವರವಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಇಷ್ಟಾಗಿಯೂ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಂತೆ ಹತ್ತು- ಹಲವು ಹಗರಣಗಳಲ್ಲಿ ಸಿಲುಕಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳು ನೈತಿಕತೆ ಗಾಳಿಗೆ ತೂರಿ ತಮ್ಮ ಸ್ಥಾನಗಳಿಗೆ ಭಂಡತನದಿಂದ ಅಂಟಿ ಕುಳಿತಿದ್ದಾರೆ.

ಹತಾಶೆಯ ಅಂಚಿಗೆ ತಲುಪಿರುವ ಕಾಂಗ್ರೆಸ್ಸಿಗರು ಜೋಷಿಯವರ ವಿಚಾರದಲ್ಲಿ 'ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ'. ಪ್ರಹ್ಲಾದ್ ಜೋಶಿ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಮಸಿ ಅಂಟಿಸಿಕೊಂಡವರಲ್ಲ ಅವರ ಸಾಮರ್ಥ್ಯ ಹಾಗೂ ಅನುಭವವನ್ನು ಪರಿಗಣಿಸಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಸಹಿಸದ ಕೆಲವು ರಾಜಕೀಯ ಪಟ್ಟಭದ್ರಾ ಹಿತಾಸಕ್ತಿಗಳು ಜೋಶಿ ಅವರಿಗೆ ಕಳಂಕ ಅಂಟಿಸುವ ವಿಫಲ ಯತ್ನ ನಡೆಸಿದ್ದಾರೆ. ಆಧಾರ ರಹಿತ ಆರೋಪಗಳಿಂದ ಭಾರತೀಯ ಜನತಾ ಪಾರ್ಟಿಯ ವರ್ಚಸ್ಸಿಗೆ ಧಕ್ಕೆ ತರಬಹುದು ಎಂದು ಕಾಂಗ್ರೆಸ್ಸಿಗರು ಅಂದುಕೊಂಡಿದ್ದರೆ ಅದು ಕೇವಲ ಅವರ ಭ್ರಮೆ ಅಷ್ಟೇ ಎಂದು ಹೇಳಿದರು.
ಕೇಂದ್ರ ಸಚಿವರಾದ ಮಾನ್ಯ @JoshiPralhad ಅವರ ಹೆಸರನ್ನು ಸಂಬಂಧಪಡದ ಪ್ರಕರಣವೊದರಲ್ಲಿ ಎಳೆದು ತರುವ ಮೂಲಕ ಕಾಂಗ್ರೆಸ್ಸಿಗರು ವಿಘ್ನ ಸಂತೋಷ ಪಡಲು ಹೊರಟಿದ್ದಾರೆ. ಸಚಿವ @dineshgrao ಅವರು ಅಸಂಬದ್ಧವಾಗಿ ಜೋಶಿಯವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
— Vijayendra Yediyurappa (@BYVijayendra) October 19, 2024
ಆರೋಪಿತ ಗೋಪಾಲ ಜೋಷಿ ಅವರೊಂದಿಗೆ ಕಳೆದ 32 ವರ್ಷಗಳಿಂದಲೂ ಸಂಪರ್ಕ ಕಡಿದುಕೊಂಡು… pic.twitter.com/Ms2on4IpO8
ದಿನೇಶ್ ಗುಂಡೂರಾವ್ ಹೇಳಿದ್ದೇನು?
ಬಿಜೆಪಿ ನಾಯಕರು ಎಲ್ಲಿದ್ದರೂ ಕೂಡ ತಮ್ಮ ಕಮಿಷನ್ ದಂಧೆ ಬಂದ್ ಮಾಡುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಕುಟುಂಬದ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವುದು ಇದಕ್ಕೆ ತಾಜಾ ಉದಾಹರಣೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅಧಿಕಾರದಲ್ಲಿದ್ದರೇ 40% ಪರ್ಸೆಂಟ್ ಕಮಿಷನ್ ದಂಧೆ, ಅಧಿಕಾರ ಕಳೆದುಕೊಂಡರೇ ಟಿಕೆಟ್ ಕೊಡಿಸುವ ಹೆಸರಲ್ಲಿ ಕಮಿಷನ್ ದಂಧೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಮಿಷನ್ ದಂಧೆಗೆ ಇಳಿದಿರುವ ಪ್ರಲ್ಹಾದ್ ಜೋಶಿ ಅವರ ಬಗ್ಗೆ ಸ್ವಪಕ್ಷದವರು ತುಟಿಕ್ ಪಿಟಿಕ್ ಎನ್ನುವುದಿಲ್ಲ.
ನೈತಿಕತೆ ಬಗ್ಗೆ ಬೊಗಳೆ ಭಾಷಣ ಬಿಡುವ ಬಿಜೆಪಿ ನಾಯಕರೇ ಮೊದಲು ನಿಮಗೆ ನೈತಿಕತೆಯಿದ್ದರೇ ಪ್ರಲ್ಹಾದ್ ಜೋಶಿ ಅವರ ರಾಜೀನಾಮೆ ಕೇಳಿ. ಭ್ರಷ್ಟಾಚಾರದ ಪಿತಾಮಹರಾದ ವಿಜಯೇಂದ್ರ ಅವರೇ ಪಕ್ಷ ವಿರೋಧಿ ಚಟುವಟಿಕೆ ಎಂದು ಜೋಶಿ ಅವರ ವಿರುದ್ಧ ಕ್ರಮ ಕೈಗೊಳ್ಳುವತ್ತ ಗಮನಹರಿಸಿ.












Click it and Unblock the Notifications