ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಪರಮೇಶ್ವರ್ ರಾಜೀನಾಮೆಗೆ...
ಬೆಂಗಳೂರು, ಜೂನ್ 07: ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸರ್ಕಾರದ ಎಡವಟ್ಟಿನಿಂದಾಗಿ 11 ಜನ ಅಮಾಯಕರ ಜೀವಗಳು ಬಲಿಯಾಗಿವೆ. ಸರ್ಕಾರದ ಅವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ಸರಣಿ ಸಾವುಗಳಾಗುತ್ತಿವೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎಫ್‍ಐಆರ್‌ನಲ್ಲಿ ಕೆಎಸ್‍ಸಿಎ, ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಸ್ವತಃ ಮುಖ್ಯಮಂತ್ರಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಆರೋಪಿ ನಂಬರ್ 2, ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3 ಎಂದು ವಾಗ್ದಾಳಿ ನಡೆಸಿದರು.

ಕಾಲ್ತುಳಿತ ಹಾಗೂ 11 ಜನ ಅಮಾಯಕರ ಸಾವಿನ ಸಂಬಂಧ ಕೊನೆಗೂ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ತೆಗೆದುಕೊಂಡು ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ ನಂತರ ಸರಕಾರ ಎಚ್ಚತ್ತುಕೊಂಡಿದ. ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡುವ ಬದಲಾಗಿ ತಾವೇ ಜವಾಬ್ದಾರಿ, ನೈತಿಕ ಹೊಣೆ ಹೊತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ ಎಂದು ಮತ್ತೊಮ್ಮೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ), ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಪ್ರಮುಖವಾಗಿ ಆರೋಪಿಗಳೆಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿದ್ದಾರೆ. ಎಫ್‍ಐಆರ್ ತರುವಾಯ, ಮುಖ್ಯಮಂತ್ರಿಗಳು ಏಕಾಏಕಿ ಜಾಗೃತರಾಗಿದ್ದಾರೆ. ಮುಖ್ಯಮಂತ್ರಿಗಳು ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಕಮೀಷನರ್ ಸೇರಿ 5 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅರ್ಥಾತ್, ಮುಖ್ಯಮಂತ್ರಿಗಳು ಮೊನ್ನೆ ನಡೆದ ದುರ್ಘಟನೆ, 11 ಜನರ ಸಾವಿಗೆ ರಾಜ್ಯ ಸರಕಾರದಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಪೊಲೀಸರನ್ನು ಹರಕೆಯ ಕುರಿಯಾಗಿ ರಾಜ್ಯ ಸರಕಾರ ಮಾಡಿದೆ ಎಂದು ಆರೋಪಿಸಿದರು.
ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿ ತಪ್ಪಿಸಿಕೊಳ್ಳುವ ಷಡ್ಯಂತ್ರ ಮುಖ್ಯಮಂತ್ರಿಗಳದು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ವೈಫಲ್ಯಕ್ಕಾಗಿ ಬೇಹುಗಾರಿಕಾ ದಳದ ಅಧಿಕಾರಿಗಳನ್ನು ಯಾಕೆ ಅಮಾನತು ಮಾಡಿಲ್ಲ? ಎಂದು ಕೇಳಿದರು. ಬೇಹುಗಾರಿಕಾ ದಳ ನೇರ ಸಿಎಂ ಕೆಳಗಡೆ ಬರುತ್ತದೆ. ಅವರನ್ನು ಅಮಾನತು ಮಾಡಿದರೆ ಇದು ಮುಖ್ಯಮಂತ್ರಿಗಳ ಬುಡಕ್ಕೇ ಬರಲಿದೆ. ಆದ್ದರಿಂದ ಅವರನ್ನು ಅಮಾನತು ಮಾಡಿಲ್ಲ ಎಂದು ತಿಳಿಸಿದರು. ನಾವು 30-40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. 2ರಿಂದ 3 ಲಕ್ಷ ಜನರು ಬಂದಿದ್ದಾರೆ. ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವ ಮೂಲಕ ಬೇಹುಗಾರಿಕಾ ದಳದ ವೈಫಲ್ಯವನ್ನು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications