BY Vijayendra: ಚದುರಂಗದಾಟದಲ್ಲಿ ಕೊನೆಗೂ ಗೆದ್ದ 'ರಾಜಾಹುಲಿ': ಬಿಎಲ್ ಸಂತೋಷ್ ಭವಿಷ್ಯವೇನು?
ಬೆಂಗಳೂರು, ನವೆಂಬರ್ 10: ಕರ್ನಾಟಕ ವಿಧಾನಸಭಾ ಚುನಾವಣೆ ಆಗಿ ತಿಂಗಳುಗಳ ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರ (BS Yediyurappa) ಪುತ್ರ ಬಿವೈ ವಿಜಯೇಂದ್ರ (BY Vijayendra) ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಈ ಮೂಲಕ ರಾಜಕೀಯ ಚದುರಂಗದ ಆಟದಲ್ಲಿ ಮತ್ತೆ ಗೆಲುವು ಯಡಿಯೂರಪ್ಪನವರ ಪಾಲಾಗಿದೆ. ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪನವರು ಸೈಡ್‌ಲೈನ್ ಆಗಲು ಕಾರಣವಾಗಿದ್ದ ಬಿಎಲ್ ಸಂತೋಷ್ (BL Santhosh) ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಒಂದಷ್ಟು ಕುತೂಹಲ ಮೂಡಿವೆ.

ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳಾದ ಮೇಲೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಆಗಿದೆ. ಇದರಿಂದ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ಬಿಎಸ್ ಯಡಿಯೂರಪ್ಪ ಅವರು ಮತ್ತೆ ರಾಜಕೀಯ ವಿಜಯ ಸಾಧಿಸಿದಂತಾಗಿದೆ.
ಬಿಎಸ್ ಯಡಿಯೂರಪ್ಪನವರ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನಿರ್ಧಾರಗಳು ಅವರಿಗೆ ಮುಳ್ಳಾಗುವ ಮುನ್ಸೂಚನೆಗಳು ಸದ್ಯಕ್ಕೆ ಸಿಕ್ಕಿವೆ. ಅವರ ವಿರುದ್ಧ ಯಡಿಯೂರಪ್ಪ ಬೆಂಬಲಿಗ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಸಹ ಬಹಿರಂಗವಾಗಿಯೇ ಕಿಡಿ ಕಾರಿದ್ದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪರನ್ನು ಹೇಳ ಹೆಸರಲಿಲ್ಲದಂತೆ ಮಾಡಲಾಗಿತ್ತು. ಬಿಜೆಪಿ ಬಿಎಲ್ ಸಂತೋಶ್ ಸೇರಿ ಕೆಲ ನಾಯಕರ ತಪ್ಪು ನಿರ್ಧಾರಗಳು ಮುಖ್ಯವಾಗಿ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪನವರ ವಿರುದ್ಧ ನಿರ್ಧಾರಗಳಿಂದಲೇ ಪಕ್ಷ ಹೀನಾಯವಾಗಿ ಸೋಲುಣ್ಣುವಂತಾಯಿತು.
ಲಿಂಗಾಯತ ನಾಯಕ ಯಡಿಯೂರಪ್ಪ ಟಾರ್ಗೆಟ್
ಮೈತ್ರಿ ಸರ್ಕಾರ ಪತನ ನಂತರ ಬಿಎಸ್ ಯಡಿಯೂರಪ್ಪನವರು ಸಿಎಂ ಸ್ಥಾನ ಅಲಂಕರಿಸಿದರು. ತಿಂಗಳುಗಳ ನಂತರ ಲಿಂಗಾಯತರ ಪ್ರಾಬಲ್ಯವಿರುವ ಕರ್ನಾಟಕದಲ್ಲಿ ಲಿಂಗಾಯತ ನಾಯಕನನ್ನೇ ಸಿಎಂ ಸ್ಥಾನದಿಂದ ಇಳಿಸಲಾಯಿತು. ನಂತರ ಎದುರಾದ ವಿಧಾನಸಭಾ ಚುನಾವಣೆ ವೇಳೆ ಜವಾಬ್ದಾರಿ ಹೊತ್ತಿದ್ದ ಬಿಎಲ್ ಸಂತೋಷ್ ಅವರು ಬಿಎಸ್ ಯಡಿಯೂರಪ್ಪರನ್ನು ಕಡೆಗಣಿಸಿದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಡಿಯೂರಪ್ಪನವರನ್ನು ಒಂದು ಮಾತು ಕೇಳಲಿಲ್ಲ. ಆಯ್ಕೆ ಸಮಿತಿಯಿಂದ ರಾಜಾಹುಲಿಯನ್ನು ಬಿಎಲ್ ಸಂತೋಷ್ ದೂರವಿಟ್ಟಿದ್ದರು. ಸದ್ಯ ಕಾಂಗ್ರೆಸ್ ನಲ್ಲಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಯಡಿಯೂರಪ್ಪ ಒತ್ತಾಯಿಸಿದ್ದರು. ವರಿಷ್ಠರಿಗೆ ಮನವಿ ಮಾಡಿದ್ದರು. ಆದರೆ ಅವರು ಮಾತು ಕಡೆಗಣಿಸಿ ಟಿಕೆಟ್ ನೀಡದ ಬಿಎಲ್ ಸಂತೋಷ್ ಅವರ ನಿರ್ಧಾರಗಳಿಂದ ಇಬ್ಬರು ಆಕಾಂಕ್ಷಿಗಳು ಕಾಂಗ್ರೆಸ್ ಸೇರ್ಪಡೆಯಾದರು.

ಬಿಎಲ್ ಸಂತೋಷ್ ವಿರುದ್ಧ ಕಿಡಿ
ಇದರಿಂದ ಲಿಂಗಾಯತ ನಾಯಕರ ಕಡೆಗಣನೆ ವಿಚಾರ ಮತ್ತಷ್ಟು ಸದ್ದಾಯಿತು. ಅಲ್ಲಿಂದ ಯಡಿಯೂರಪ್ಪ ಮೌನಕ್ಕೆ ಶರಣಾಗಿದರು. ಈ ವೇಳೆ ಎಂಬಿ ರೇಣುಕಾಚಾರ್ಯ ಸೇರಿದಂತೆ ಕೆಲವು ಬಹಿರಂಗವಾಗಿಯೇ ಬಿಎಲ್ ಸಂತೋಷ್ ವಿರುದ್ಧ ಕಿಡಿ ಕಾರಿದರು. ಇದೆಲ್ಲ ಬೆಳವಣಿಗೆಗೆ ಬಿಎಲ್ ಸಂತೋಷ್ ಕಾರಣವೆಂದು ಜರಿದರು. ಕಾಂಗ್ರೆಸ್ ನಾಯಕರು ಸಹ ಬಹಿರಂಗವಾಗಿಯೇ ಬಿಎಲ್ ಸಂತೋಷ್ ವಿರುದ್ಧ, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ನಡೆಸಿಕೊಳ್ಳು ರೀತಿ ಕುರಿತು ಲೇವಡಿ ಮಾಡಿದರು.
ಇದೆಲ್ಲದರ ಮಧ್ಯೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಎಲ್ ಸಂತೋಷ್ ಅವರೇ ಕರ್ನಾಟಕ ಮುಂದಿನ ಸಿಎಂ ಎಂಬ ವಿಚಾರವು ಮುನ್ನೆಲೆಗೆ ಬಂತು. ಅದಕ್ಕಾಗಿಯೇ ನೀರ್ಣಾಯಕ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಸಂಶಯ ಶುರುವಾಯಿತು.
ಪುತ್ರನ ಆಯ್ಕೆಯಿಂದ ಯಡಿಯೂರಪ್ಪಗೆ ಗೆಲುವು
ಕೊನೆಗೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಬರದೇ ಬಿಜೆಪಿಗೆ ಸೋಲಾಯಿತು. ವಿಪಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಬಿಜೆಪಿಗೆ ಮೂರು ಕಾಸಿನ ಮರಿಯಾದೆ ಇಲ್ಲದಾಯಿತು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗಿ ತಿಂಗಳುಗಳೇ ಕಳೆದವು. ಇದೇ ವೇಳೆ ಯಡಿಯೂರಪ್ಪ ಒಂದೆರಡು ಬಾರಿ ದೆಹಲಿ ಕಂಡು ಬಂದರು. ಕೊನೆಗೂ ಅವರ ಪುತ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿತು. ಈ ಮೂಲಕ ಯಡಿಯೂರಪ್ಪ ರಾಜಕೀಯದಾಟದಲ್ಲಿ ಮತ್ತೆ ಗೆದ್ದು ಬೀಗಿದರು.
ಇದೆಲ್ಲ ಬೆಳವಣಿಗೆ ಗಮನಿಸಿರುವ ಕೇಂದ್ರ ಬಿಜೆಪಿ ನಾಯಕರು ಬಿಎಲ್ ಸಂತೋಷ್‌ಗೆ ಜವಾಬ್ದಾರಿ ನೀಡುವ ಕುರಿತು ವಿವಿಧ ಆಯಾಗಳಲ್ಲಿ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಭವಿಷ್ಯದಲ್ಲಿ ಬಿಎಲ್ ಸಂತೋಷ್ ಅವರಿಗೆ ಕರ್ನಾಟಕದಲ್ಲಿ ಹಸ್ತಕ್ಷೇಪ ಮಾಡಲು ಆಗದ ಸ್ಥಿತಿ ಎದುರಾಗುವ ಸಾಧ್ಯತೆಗಳು ಇವೆ.












Click it and Unblock the Notifications