ಕರ್ನಾಟಕ ಉಪಚುನಾವಣೆ: ನಾವು ಈ ಕ್ಷೇತ್ರ ಬಿಟ್ಟು ಹೋಗುತ್ತೇವೆ: ಡಿ ಕೆ ಶಿವಕುಮಾರ್ ಹಾಕಿದ ಸವಾಲು ಏನು?
ಹಾವೇರಿ, ನವೆಂವರ್ 07: ಬಸವರಾಜ ಬೊಮ್ಮಾಯಿ ಅವರೇ ಕಾಂಗ್ರೆಸ್ ನೀಡಿರುವ ಒಂದೇ ಒಂದು ಯೋಜನೆ ನಿಮ್ಮ ಅವಧಿಯಲ್ಲಿ ನೀಡಿದ್ದರೆ, ನಾವು ಶಿಗ್ಗಾಂವಿ ಕ್ಷೇತ್ರ ಬಿಟ್ಟು ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸವಾಲು ಹಾಕಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ತಾತ, ಮಗನ ನಂತರ ಮೊಮ್ಮಗ ಚುನಾವಣಾ ಅಖಾಡಕ್ಕೆ ಬಂದಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದ ಬೊಮ್ಮಾಯಿ ಅವರ 17 ವರ್ಷದ ರಾಜಕಾರಣ ಕೊನೆಯಾಗಬೇಕು. ಕ್ಷೇತ್ರದ ಜನ ಕಾಂಗ್ರೆಸ್ ಗೆ ಮತ ಹಾಕಬೇಕು" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕರೆ ನೀಡಿದರು.

ಯಾರಿಗೂ ಹೆಣ್ಣು ನೋಡಲು ಹೋಗಿ ತಾನೇ ಮದುವೆ ಆದನಂತೆ. ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಇದೇ ರೀತಿಯಾಗಿದೆ. ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೆ. ಟಿಕೆಟ್ ನನಗೆ ಬೇಡ ಕಾರ್ಯಕರ್ತರಿಗೆ ನೀಡಿ ಎಂದು ಬೊಮ್ಮಾಯಿ ಹೇಳುತ್ತಿದ್ದರು. ಕೊನೆಗೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. 17 ವರ್ಷಗಳಿಂದ ಬಸವರಾಜ ಬೊಮ್ಮಾಯಿವರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಕಾಂಗ್ರೆಸ್ ನೀಡಿರುವ ಒಂದೇ ಒಂದು ಯೋಜನೆ ನಿಮ್ಮ ಅವಧಿಯಲ್ಲಿ ನೀಡಿದ್ದರೆ, ನಾವು ಈ ಕ್ಷೇತ್ರ ಬಿಟ್ಟು ಹೋಗುತ್ತೇವೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಈ ವೇಳೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಬೊಮ್ಮಾಯಿ ಅವರಿಗೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಸದಾವಕಾಶ ಸಿಕ್ಕಿತ್ತು. ಆದರೂ ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ ಎಂದು ಕಿಡಿಕಾರಿದರು.
ಚನ್ನಪಟ್ಟಣದ ಟಿಕೆಟ್ ಅನ್ನು ನನ್ನ ತಮ್ಮ ಸುರೇಶ್ ಗೆ ನೀಡಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷ ಹಾಗೂ ನಾನು ಆ ಕೆಲಸ ಮಾಡದೆ, ಬಿಜೆಪಿ ಸಹವಾಸ ಸಾಕು ಎಂದು ಕಾಂಗ್ರೆಸ್ ಸೇರಿದ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಸೇರಿದ ಅವರು ದಡ್ಡರೇ? ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರಿಗೆ ಅರಿವಾಗಿದೆ.
ಶಿಗ್ಗಾವಿ ಕ್ಷೇತ್ರದ ಜನರೇ ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬಂದಿದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತು, ಏಕೆ ಅಧಿಕಾರಕ್ಕೆ ಬರಲಿಲ್ಲ. ಯಡಿಯೂರಪ್ಪ ಅವರು ಆಪರೇಷನ್ ಕಮಲ ನಡೆಸಿ ಸರ್ಕಾರ ಮಾಡಿದರು. ಆದರೆ ಈ ಬಾರಿ ಅವರ ನಾಣ್ಯ ಚಲಾಚಣೆಯಾಗಲಿಲ್ಲ ಎಂದರು.
ರಾಜ್ಯದಲ್ಲಿ ಮುಂದಿನ ಎಂಟುವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಇಲ್ಲಿ ಕೇವಲ ಯಾಸಿರ್ ಪಠಾಣ್ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ.ಶಿವಕುಮಾರ್ ಹಾಗೂ ವೇದಿಕೆಯಲ್ಲಿ ಇರುವ ಸಚಿವರೆಲ್ಲಾ ಅಭ್ಯರ್ಥಿಗಳು. ಶಿಗ್ಗಾವಿ ಪಕ್ಕದ ಸೊರಬ ಕ್ಷೇತ್ರದಿಂದ ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆ ಸಮಯದಲ್ಲಿ ಆರಾಧನಾ, ಆಶ್ರಯ, ವಿಶ್ವ ಹೀಗೆ ಹಲವಾರು ಬಡವರ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬಡವರಿಗೆ ಮನೆ ಕಟ್ಟುವ, ಗ್ರಾಮ ದೇವತೆಗಳ ದೇವಾಲಯ ನಿರ್ಮಿಸುವ, ರೈತರ ಪಂಪ ಸೇಟ್ಟಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗಳನ್ನು ನೀಡಿದರು ಎಂದು ತಿಳಿಸಿದರು.
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಬಗರ್ ಹುಕುಂ ಅರ್ಜಿ ಹಾಕಿಸಿ ರೈತರಿಗೆ ಜಮೀನು ನೀಡುವ ಮಹತ್ತರವಾದ ಕೆಲಸ ಆರಂಭವಾಯಿತು. ಇಂದಿರಾ ಗಾಂಧಿ, ದೇವರಾಜ ಅರಸು ಅವರ ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತರಲಾಯಿತು. ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಅಶಕ್ತರಿಗೆ ನೀಡಲಾಯಿತು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಯೋಜನೆಗಳು ಜಾರಿಗೆ ಬಂದವು. 2023 ರಲ್ಲಿ ಅಧಿಕಾರಕ್ಕೆ ಬರುವ ಮುಂಚಿತವಾಗಿ ಕರ್ನಾಟಕದ ಜನರ ಬಳಿ ಮನವಿ ಮಾಡಿ 'ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಡಿ' ಎಂದೆವು. ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದು ಹಳ್ಳಿ, ಹಳ್ಳಿಯನ್ನು ಸುತ್ತಿ ಜನ ಜಾಗೃತಿ ಮಾಡಿದೆವು ಎಂದರು.
ಬಡ, ಮಾಧ್ಯಮ ವರ್ಗದ ಜನರು ಬದುಕು ನಡೆಸಲು ತತ್ತರಿಸುತ್ತಿದ್ದರು. ಜನರ ಬವಣೆ ನೋಡಲು ಆಗದೆ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಮಾತಿನಂತೆ, ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಶಕ್ತಿ ಯೋಜನೆಯಿಂದ ನಮ್ಮ ಹೆಣ್ಣುಮಕ್ಕಳು ಧರ್ಮಸ್ಥಳ, ಕೊಲ್ಲೂರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಪುಣ್ಯಕ್ಷೇತ್ರಗಳನ್ನು ನೋಡುತ್ತಿದ್ದಾರೆ ಎಂದರು.












Click it and Unblock the Notifications