ಉಪ ಚುನಾವಣೆ: ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್, ಸಂಡೂರಲ್ಲಿ ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್ ಟಿಕೆಟ್
ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷವು ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂಗೆ ಟಿಕೆಟ್ ನೀಡಲಾಗಿದೆ. ಆದರೆ, ಶಿಗ್ಗಾಂವಿಯಲ್ಲಿ ಇಲ್ಲಿಯವರೆಗೆ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 13ಕ್ಕೆ ಉಪ ಚುನಾವಣೆ ನಡೆಯಲಿದೆ. ಇದೀಗ ಕಾಂಗ್ರೆಸ್ ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಶಿಗ್ಗಾಂವಿಯಿಂದ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಇದೆ. ಅಲ್ಲದೇ ಬಿಜೆಪಿಯಿಂದ ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ.
ಬುಧವಾರವಷ್ಟೇ ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆಯೇ ಅವರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಬಹುತೇಕ ಖಚಿತವಾಗಿತ್ತು. ಘೋಷಣೆಯಷ್ಟೇ ಬಾಕಿ ಉಳಿದಿತ್ತು. ಇದೀಗ ತಡರಾತ್ರಿ ಟಿಕೆಟ್ ಘೋಷಣೆಯಾಗಿದೆ.

ಚನ್ನಪಟ್ಟಣದಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೆಗಳಿಗೆ ತೆರೆ: ಚನ್ನಪಟ್ಟಣದ ಉಪ ಚುನಾವಣೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹಲವು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದರು. ಆ ಎಲ್ಲಾ ಹೇಳಿಕೆಗಳಿಗೂ ಈಗ ಅಧಿಕೃತವಾಗಿ ಬ್ರೇಕ್ ಬಿದ್ದಂತಾಗಿದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕುಟುಂಬ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕುಟುಂಬದ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆ ಪಕ್ಷಗಳಿಗಿಂತ ವ್ಯಕ್ತಿ ಪ್ರತಿಷ್ಠೆಯ ಕೇಂದ್ರವಾಗಲಿದೆ ಎಂದೇ ಹೇಳಲಾಗುತ್ತಿತ್ತು. ಒಂದು ಹಂತದಲ್ಲಿ ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂದು ಸಹ ಡಿ.ಕೆ ಶಿವಕುಮಾರ್ ಅವರು ಹೇಳಿಕೊಂಡಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರು ಡಾ.ಸಿ ಎನ್ ಮಂಜುನಾಥ್ ಅವರ ವಿರುದ್ಧ ಹೀನಾಯ ಸೋಲು ಕಂಡಿದ್ದರು. ಈ ಸೋಲಿಗೆ ಡಿ.ಕೆ ಸಹೋದರರು ಸೇಡು ತೀರಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕಾರ್ಯಕರ್ತರಿಂದ ಒತ್ತಡವಿದೆ ಎಂದು ಸಹ ಡಿ.ಕೆ ಸುರೇಶ್ ಅವರು ಹೇಳಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಇನ್ನು ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಯಾವುದೇ ಪಕ್ಷದಿಂದ ಅಥವಾ ಪಕ್ಷೇತರರಾಗಿ ನಿಂತರೂ ಗೆಲ್ಲಲಿದ್ದಾರೆ ಎನ್ನುವ ವಿಶ್ವಾಸವಿದೆ. ವಿರೋಧ ಪಕ್ಷಗಳು (ಬಿಜೆಪಿ ಹಾಗೂ ಜೆಡಿಎಸ್) ಸಹ ಈ ಮಾತನ್ನು ಪರೋಕ್ಷವಾಗಿ ಸಮ್ಮತಿಸಿವೆ. ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದ್ದು ನಮಗೆ ನಷ್ಟ ಎಂದು ಕೆಲವು ಬಿಜೆಪಿ ನಾಯಕರು ಹೇಳಿದ್ದಾರೆ. ಇದೀಗ ಈ ಕ್ಷೇತ್ರದಿಂದ ಜೆಡಿಎಸ್ ಯಾವ ಅಭ್ಯರ್ಥಿಯನ್ನು ನಿಲ್ಲಿಸಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಅನ್ನಪೂರ್ಣ ತುಕಾರಾಂ ಯಾರು ?
ಸಂಡೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಅನ್ನಪೂರ್ಣ ತುಕಾರಾಂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅನ್ನಪೂರ್ಣ ಅವರು ಕಾಂಗ್ರೆಸ್ ಸಂಸದ ಈ ತುಕಾರಾಂ ಅವರ ಪತ್ನಿ. ಈ. ತುಕಾರಾಂ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇಲೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸಂದರಾಗಿ ಆಯ್ಕೆಯಾಗಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಇವರ ಪ್ರಭಾವ ಹೆಚ್ಚಾಗಿ ಇರುವ ಹಿನ್ನೆಲೆಯಲ್ಲಿ ಅವರ ಕುಟುಂಬದವರಿಗೆ ಇಲ್ಲಿ ಟಿಕೆಟ್ ನೀಡಲಾಗಿದೆ.
ಸಂಡೂರು ಕ್ಷೇತ್ರದಲ್ಲಿ ತುಕಾರಾಂ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.












Click it and Unblock the Notifications