ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ನಾಳೆ ಫೈನಲ್?
ಬೆಂಗಳೂರು, ಅ.2 : ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ಉಪಚುನಾವಣೆಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ (ಅ.3) ನಡೆಯಲಿದ್ದು, ಸಂಜೆಯವೇಳೆಗೆ ಅಭ್ಯರ್ಥಿಗಳು ಯಾರೆಂದು ಅಂತಿಮಗೊಳ್ಳುತ್ತದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಒಂದೆರಡು ದಿನಗಳಲ್ಲಿ ಘೋಷಿಸುವ ಸಾಧ್ಯತೆ ಇದೆ.
ಪಕ್ಷದ ವೀಕ್ಷಕರು ಈಗಾಗಲೇ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸ್ಥಳೀಯ ನಾಯಕರು ಮತ್ತು ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. 11 ಮಂದಿ ಅಭ್ಯರ್ಥಿಗಳ ಹೆಸರು ಆಯ್ಕೆ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮೂರರಿಂದ ನಾಲ್ವರ ಹೆಸರುಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸುವ ಸಾಧ್ಯತೆ ಇದೆ. ಅಂತಿಮವಾಗಿ ಯಾರು ಅಭ್ಯರ್ಥಿಗಳು ಎಂದು ಬಿಜೆಪಿ ಕೇಂದ್ರ ನಾಯಕರೇ ಘೋಷಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಿ.ಎಂ. ಉದಾಸಿ ಅವರಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಹಾವೇರಿಯ ಹಾಲಿ ಸಂಸದ, ಉದಾಸಿ ಅವರ ಪುತ್ರ ಶಿವಕುಮಾರ್ ಉದಾಸಿ ಅಥವಾ ಅವರ ಪತ್ನಿ ರೇವತಿ ಶಿವಕುಮಾರ ಉದಾಸಿ ಅವರಿಗೆ ಟಿಕೆಟ್ ನೀಡಬೇಕು. ಆಗ ಮಾತ್ರ ಉದಾಸಿ ಅವರ ನಿಧನದ ಅನುಕಂಪ ಪಡೆಯಬಹುದು ಮತ್ತು ಅವರು ಈವರೆಗೆ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ಅವರ ಕುಟುಂಬಕ್ಕೇ ಟಿಕೆಟ್ ನೀಡಬೇಕು ಎಂಬ ಒತ್ತಡ ಕೇಳಿಬರುತ್ತಿದೆ.

ಇದರ ಜೊತೆಗೆ ಮೂಲ ಬಿಜೆಪಿಗ ಕಲ್ಯಾಣ ಕುಮಾರ ಶೆಟ್ಟರ್, ಸಿದ್ದರಾಜ ಕಲಕೋಟೆ, ಮಾಜಿ ಶಾಸಕ ಶಿವರಾಜ ಸಜ್ಜನ್, ಮಹಾಂತೇಶ ಸೊಪ್ಪಿನ ಅವರ ಹೆಸರುಗಳೂ ಇವೆ. ಆದರೆ, ಉದಾಸಿಯವರ ಕುಟುಂಬಕ್ಕೇ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಲಿದೆ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಸಿಂದಗಿಗೆ ಭೂಸನೂರ?
ಇನ್ನು ಸಿಂದಗಿ ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಇದಲ್ಲದೆ ವಿಧಾನ ಪರಿಷತ್ ಸದಸ್ಯ ಅರುಣ ಶಹಪುರ ಸೇರಿದಂತೆ ಇತರೆ ಮೂರ್ನಾಲ್ಕು ಹೆಸರುಗಳೂ ಇವೆ. ಈ ಪೈಕಿ ರಮೇಶ ಭೂಸನೂರ ಅವರ ಬಗ್ಗೆ ಬಹುತೇಕ ನಾಯಕರು ಒಮ್ಮತ ವ್ಯಕ್ತಪಡಿಸಿದ್ದು, ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಚುನಾವಣೆ. ಹೀಗಾಗಿ ಬಿಜೆಪಿ ಇಮೇಜ್ ಹೆಚ್ಚಿಸಿಕೊಳ್ಳಬೇಕಾದರೆ ಈ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಪಕ್ಚದಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ನೀಡದೆ ಗೆಲ್ಲುವಂತಹ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲು ಬಿಜೆಪಿ ಕಸರತ್ತು ನಡೆಸಿದೆ.
ಕಾಂಗ್ರೆಸ್‌ನಲ್ಲಿಯೂ ಬಿರುಸು:
ಇನ್ನು ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ನಲ್ಲಿಯೂ ಬಿರುಸಿನ ಚಟುವಟಿಕೆಗಳು ನಡೆದಿದ್ದರೂ ಸಹ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಇಂದೂ ಸಹ ಕೆಲ ಆಕಾಂಕ್ಷಿಗಳು ಭೇಟಿಗೆ ನಿರ್ಧರಿಸಿದ್ದು, ಟಿಕೆಟ್‌ಗಾಗಿ ಲಾಭಿ ಮುಂದುವರಿದಿದೆ.

ಹಾನಗಲ್ ಮತ್ತು ಸಿಂದಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಹೆಸರುಗಳು ಕೇಳಿಬಂದಿವೆ. ಹಾನಗಲ್‌ನಲ್ಲಿ ಶ್ರೀನಿವಾಸ ಮಾನೆ ಮತ್ತು ಮನೋಹರ ತಹಶೀಲ್ದಾರ ಹೆಸರುಗಳು ಮುಂಚೂಣಿಯಲ್ಲಿದ್ದು, ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಕಗ್ಗಂಟು ಎದುರಾಗಿದೆ. ಯಾರೇ ಅಭ್ಯರ್ಥಿಯಾದರೂ ಸಹ ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಬಂಡಾಯ ಶಮನಕ್ಕೆ ಮೊದಲೇ ಪ್ರಯತ್ನ ಆರಂಭಿಸಲಾಗಿದೆ.












Click it and Unblock the Notifications