ದೀಕ್ಷಾ ಭೂಮಿಗೆ ತೆರಳಲು ಸಮಾಜ ಕಲ್ಯಾಣ ಇಲಾಖೆಯಿಂದ ಬಸ್, ನೋಂದಣಿ ಮಾಡಿ
ಬೆಂಗಳೂರು, ಸೆಪ್ಟೆಂಬರ್ 20; ಮಹಾರಾಷ್ಟ್ರದ ನಾಗ್ಪುರದಲ್ಲಿನ ದೀಕ್ಷಾ ಭೂಮಿಗೆ ಕರ್ನಾಟಕದಿಂದ ನೂರಾರು ಜನರು ತೆರಳುತ್ತಾರೆ. ಇಂತಹ ಯಾತ್ರಾರ್ಥಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ, ಬಸ್ ಸೌಲಭ್ಯದ ವ್ಯವಸ್ಥೆ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. 2023-24ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ, ಭೂಮಿಗ ಭೇಟಿ ನೀಡಲು ಯಾತ್ರಾರ್ಥಿಗಳನ್ನು ಕಳುಹಿಸುವ ಬಗ್ಗೆ ಎಂಬ ವಿಷಯವನ್ನು ಇದು ಒಳಗೊಂಡಿದೆ. ಸರ್ಕಾರದ ಸುತ್ತೋಲೆ ದಿನಾಂಕ 20/07/2019 ಉಲ್ಲೇಖ ಮಾಡಲಾಗಿದೆ.

ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಪರಿಶಿಷ ಜಾತಿ, ಪರಿಶಿಷ್ಟ ಪಂಗಡದ ಜನರು ನಾಗ್ಪುರಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದೆ.
ಆನ್‌ಲೈನ್ ಮೂಲಕ ನೋಂದಣಿ ಮಾಡಿ; ಈ ಕಾರ್ಯಕ್ರಮದಡಿ 2023-24ನೇ ಸಾಲಿನಲ್ಲಿ ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್ www.sw.kar.nic.inರಲ್ಲಿ ದಿನಾಂಕ 20/9/2023 ರಿಂದ 10/10/2023 ರವರೆಗೆ ಆಹ್ವಾನಿಸಲಾಗುವುದು ಎಂದು ಹೇಳಿದೆ.
ಈ ವಿಷಯದ ಬಗ್ಗೆ ತಮ್ಮ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನೀಡಲು ತಿಳಿಸಿದೆ ಎಂದು ಎಲ್ಲಾ ಜಿಲ್ಲೆಯ ಜಂಟಿ/ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸೂಚನೆ ನೀಡಲಾಗಿದೆ. ಪತ್ರಿಕಗಳಲ್ಲಿ ನೀಡದಕಾದ News Item ಹೇಗಿರಬೇಕು ಎಂದು ಸಹ ಮಾದರಿ ನೀಡಲಾಗಿದೆ.
2023-24 ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿನ ದೀಕ್ಷಾ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಬಸ್ಸುಗಳ ವ್ಯವಸ್ಥೆಯನ್ನ ಸಮಾಜ ಕಲ್ಯಾಣ ಇಲಾಖೆಯಿಂದ ಕಲ್ಪಿಸಲಾಗುತ್ತಿದೆ ಎಂದು ಹೇಳಿದೆ.
ದೀಕ್ಷಾ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 10ರ ತನಕ ಸಲ್ಲಿಸಬಹದಾಗಿದೆ ಎಂದು ತಿಳಿಸಿದೆ.
ಅಕ್ಟೋಬರ್‌ನಲ್ಲಿ ತೆರಳುವ ಜನರು; ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬೌದ್ಧ ಧರ್ಮದ ದೀಕ್ಷೆ ಪಡೆದ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ದೀಕ್ಷಾ ಭೂಮಿಗೆ ಕರ್ನಾಟಕದಿಂದ ನೂರಾರು ಜನರು ತೆರಳುತ್ತಾರೆ.
ಡಾ. ಅಂಬೇಡ್ಕರ್ ಅನುಯಾಯಿಗಳು ಪ್ರತಿ ಅಕ್ಟೋಬರ್‌ನಲ್ಲಿ ಪ್ರವರ್ತನಾ ದಿನವನ್ನು ಆಯೋಜಿಸುವ ದೀಕ್ಷಾ ಭೂಮಿಗೆ ದೀಕ್ಷಾ ಯಾತ್ರೆಯನ್ನು ಕೈಗೊಳ್ಳುವುದು ಸಂಪ್ರದಾಯವಾಗಿದೆ. 2022ನೇ ಸಾಲಿನಲ್ಲಿ ಸುಮಾರು 5,000 ಜನರ ಪ್ರವಾಸಕ್ಕೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ.
ಕಳೆದ ವರ್ಷವೂ ಸಮಾಜ ಕಲ್ಯಾಣ ಇಲಾಖೆ ಆನ್‌ಲೈನ್ ಮೂಲಕ ಜನರಿಂದ ನೋಂದಣಿ ಮಾಡಿಸಿಕೊಂಡು ಬಳಿಕ ಬಸ್ ವ್ಯವಸ್ಥೆ ಮಾಡಿತ್ತು. ಈ ಯೋಜನೆಗೆ ಸುಮಾರು 2.5 ಕೋಟಿ ರೂ. ವೆಚ್ಚ ಮಾಡಲಾಗಿತ್ತು. 2023-24ನೇ ಸಾಲಿಗಾಗಿ ಈಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಅದರ ಏಕತೆ ಸಾರ್ವಭೌಮತೆ, ಭದ್ರತೆಗಾಗಿ ಹೋರಾಡಿದ ನಾಯಕರನ್ನು ಗೌರವಿಸುತ್ತಾರೆ. ಇದಕ್ಕಾಗಿ ಅವರು ಡಾ. ಅಂಬೇಡ್ಕರ್‌ಗೆ ಸೇರಿದ 5 ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವುದಾಗಿ ಘೋಷಣೆ ಮಾಡಿದ್ದರು.
'ಪಂಚತೀರ್ಥ' ಎಂಬ ಪರಿಕಲ್ಪನೆಯಡಿ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ಗೆ ಸೇರಿದ 5 ಸ್ಮಾರಕಗಳನ್ನು ಅಭಿವೃದ್ಧಿಗೊಳಿಸಿ ದೇಶಕ್ಕೆ ಸಮರ್ಪಿಸಲಾಗುತ್ತದೆ ಎಂದು ಹೇಳಿದ್ದರು. ಇವುಗಳಲ್ಲಿ ಅಂಬೇಡ್ಕರ್ ಜನ್ಮಸ್ಥಳ ಮಾಹೊ, ಬ್ರಿಟನ್‌ನಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾಗ ತಂಗಿದ್ದ ಲಂಡನ್‌ನ ಸ್ಥಳ, ನಾಗ್ಪುರದ ದೀಕ್ಷಾ ಭೂಮಿ, ದೆಹಲಿಯ ಮಹಪರಿನಿರ್ವಾಣ ಸ್ಥಳ ಮತ್ತು ಮುಂಬೈನ ಚೈತ್ಯ ಭೂಮಿ ಸೇರಿತ್ತು.












Click it and Unblock the Notifications