ಕರ್ನಾಟಕ ಮಕ್ಕಳ ಕಲಿಕೆ, ವಿಶೇಷ ಚೇತನರು, ಶಾಲೆಗಳ ನೀರ್ಣಾಯಕ ಅಂಶಗಳಿಗೆ ಆದ್ಯತೆ ಇಲ್ಲ: Karnataka Budget
ಬೆಂಗಳೂರು, ಮಾರ್ಚ್ 07: ಕರ್ನಾಟಕ ರಾಜ್ಯ ಆಯವ್ಯಯ 2025 ಕುರಿತು (Karnataka Budget) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವುದು ಸಾಮಾನ್ಯ. ಬಜೆಟ್ ಮಂಡನೆ ಆರಂಭದಲ್ಲಿ ಮಕ್ಕಳ ಶಿಕ್ಷಣದ ವಿಚಾರದ ಬಗ್ಗೆ ಜಾತಿ ತಾರತಮ್ಯದಿಂದ ಶಿಕ್ಷಣವನ್ನು ತಪ್ಪಿಸಬೇಕೆಂದು, ಶೋಷಿತ, ಬಹಿಷ್ಕೃತರ ಕಣ್ಣೀರನ್ನು ತೊಡೆದು ಹಾಕುವ ಶಿಕ್ಷಣ ಪಡೆದುಕೋ ಎಂದು ಸಾವಿತ್ರಿ ಬಾಯಿ ಫುಲೆಯವರ ಹೇಳಿಕೆ ಬಳಸಲಾಯಿತು. ಆದರೆ ಸಮನ್ವಯ ಶಿಕ್ಷಣದ, ಅಂಗವಿಕಲ ಮಕ್ಕಳ ವಿಶೇಷ ಶಿಕ್ಷಣದ ಸೇರಿದಂತೆ ಪ್ರಮುಖ ನೀರ್ಣಾಯಕ ಅಂಶಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಲೇ ಇಲ್ಲ.
ರಾಜ್ಯ ಬಜೆಟ್ ಕುರಿತು ಚೈಲ್ಡ ರೈಟ್ಸ್ ನಿರ್ದೇಶಕ ನಾಗಸಿಂಹ ರಾವ್ ಅವರು ಪ್ರತಿಕ್ರಿಯಿಸಿದ್ದ, ಪ್ರಮುಖ ಮಕ್ಕಳ ಶಿಕ್ಷಣ ಕುರಿತ ಅನೇಕ ವಿಷಯಗಳು ಪ್ರಸ್ತಾಪವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವುಗಳ ಮಹತ್ವ ಕುರಿತು ತಿಳಿಸಿದ್ದಾರೆ.

2025-26 ರ ಕರ್ನಾಟಕ ಬಜೆಟ್ ಶಿಕ್ಷಣ ಬಗ್ಗೆ ನೀಡಿರುವ ಮೇಲಿನ ಗಮನವು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆಯೇ ? ಈ ಪ್ರಶ್ನೆ ಮಕ್ಕಳ ಶಿಕ್ಷಣಕ್ಕೆ ದುಡಿಯುತ್ತಿರುವವರಲ್ಲಿ ಮೂಡುತ್ತದೆ. ಮಕ್ಕಳಲ್ಲಿನ ಕಲಿಕಾ ನ್ಯೂನ್ಯತೆಗಳನ್ನು ಹೋಗಲಾಡಿಸಲು ಯಾವುದೇ ಕ್ರಮಗಳಿಲ್ಲ. ಅದೂ ಅಲ್ಲದೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2006 ರ ಸೂಕ್ತ ಜಾರಿಯ ಬಗ್ಗೆ ಪ್ರಸ್ತಾಪವೇ ಇಲ್ಲ.
ಶಾಲೆಗಳಿಗೆ ಹಣ ಮೀಸಲಿಟ್ಟರೆ ಸಾಕೇ?
ಸರ್ಕಾರವು ಪ್ರತಿ ವರ್ಷದಂತೆ ಶಾಲೆಗಳ ಉನ್ನತೀಕರಣ, ಶೌಚಾಲಯ ರಿಪೇರಿಗೆ ಹಣ ಮೀಸಲಿಡಲಾಗಿದೆ. ಆದರೆ ಇದು ಶಿಕ್ಷಕರ ತರಬೇತಿ, ವಿಕಲಾಂಗ ಮಕ್ಕಳಿಗೆ ಬೆಂಬಲ ಮತ್ತು ಶಾಲೆಗಳಲ್ಲಿ ಆಪ್ತ ಸಲಹೆಗಾರ ನೇಮಕ ಇಂತಹ ನಿರ್ಣಾಯಕ ಕ್ಷೇತ್ರಗಳನ್ನು ಗಮನ ಹರಿಸದೆ ಇರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಆಪ್ತಸಮಾಲೋಚಕರ ನೇಮಕ ಅಗತ್ಯ ಇದೆ
ಶಿಕ್ಷಕರ ತರಬೇತಿಗೆ ಒತ್ತು ನೀಡಕ್ಕೆ ಕಳವಳ ವ್ಯಕ್ತಪಡಿಸಿದರು. ಅದರಲ್ಲೂ ವಿಶೇಷವಾಗಿ 'ಕಲಿಕಾ ಚಿಲುಮೆ' ಮತ್ತು 'ಓದು ಕರ್ನಾಟಕ' ಹಾಗೂ ಮರು ಸಿಂಚನ ಕಾರ್ಯಕ್ರಮಗಳಿಗೆ ವಿಶೇಷ ತರಬೇತಿ ಹಾಗೂ ಹೆಚ್ಚಿನ ಗಮನ ನೀಡುವುದು ಅಗತ್ಯವಿರುತ್ತದೆ. ಮೂಲಸೌಕರ್ಯ ಅಭಿವೃದ್ಧಿಗೆ 725 ಕೋಟಿ ನಿಗದಿ ಪಡಿಸಿರುವುದು ಶ್ಲಾಘನೀಯ. ಆದರೆ ಇದು ಮಾನವ ಸಂಪನ್ಮೂಲ ಮತ್ತು ಸಮನ್ವಯ ಶಿಕ್ಷಣದ ಹೂಡಿಕೆಯೊಂದಿಗೆ ಪೂರಕವಾಗಿರಬೇಕು. ಶಾಲೆಗಳಲ್ಲಿ ಆಪ್ತಸಮಾಲೋಚಕರ ನೇಮಕದ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ಅವರು ತಿಳಿಸಿದರು.
ಮೊಬೈಲ್ ಬಳಕೆ ನಿಷೇಧ ಅಗತ್ಯ
'ಗಣಿತ ಕಂಪ್ಯೂಟರ್ ಕಾರ್ಯಕ್ರಮದಡಿ 3 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ವೈಯಕ್ತಿಕ ಪಾಠ ಹೇಳಿಕೊಡುವ ಮೂಲಕ ಗಣಿತದ ಮೂಲ ಕೌಶಲಗಳನ್ನು ಅಭಿವೃದ್ಧಿಪಡಿಸುವ ಕುರಿತು ಯೋಚಿಸಬೇಕು. ಮಕ್ಕಳಲ್ಲಿ ಗಣಿತ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವು ಶ್ಲಾಘನೀಯವಾಗಿದ್ದರೂ, ಸದ್ಯದಲ್ಲಿ ಮಕ್ಕಳಲ್ಲಿ ಮೊಬೈಲ್ ಚಟದ ಬಗ್ಗೆ ಸಮುದಾಯದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ ಈ ಕಾರ್ಯಕ್ರಮಕ್ಕೆ ವಿರುದ್ಧವಾಗಿದೆ. ಹಲವಾರು ರಾಷ್ಟ್ರಗಳು ಮಕ್ಕಳಿಗೆ ಮೊಬೈಲ್ ನಿಷೇದ ಮಾಡಿವೆ. ನಮ್ಮ ದೇಶದಲ್ಲೂ ಹಲವಾರು ರಾಜ್ಯಗಳ ಸರ್ಕಾರಗಳು ಈ ಕುರಿತು ಚಿಂತನೆ ನಡೆಸಿವೆ . ಈ ಕಾರ್ಯಕ್ರಮ ಕುರಿತು ಸರ್ಕಾರ ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ವಿವರಿಸಿದರು.
ಬಾಲ್ಯವಿವಾಹ ತಡೆಗೆ ಸರ್ಕಾರದ ಕ್ರಮವೇನು?
ಮಕ್ಕಳ ರಕ್ಷಣೆಯ ವಿಚಾರ ಬಂದಾಗ ಮೊದಲು ತಡೆಗಟ್ಟುವಿಕೆ, ನಂತರ ರಕ್ಷಣೆ , ನಂತರ ಸೌಲಭ್ಯ ನಮ್ಮ ದೇಶದಲ್ಲಿ ಮಾತೆಯರ ಮರಣ ಪ್ರಮಾಣ ಹೆಚ್ಚಲು ಬಾಲ್ಯವಿವಾಹ ಬಹಳ ಪ್ರಮುಖವಾದ ಕಾರಣವಾಗಿದೆ. ಮಾತೆಯರ ಮರಣ ಪ್ರಮಾಣ ತಡೆಯಲು ಆಯವ್ಯಯದಲ್ಲಿ 320 ಕೋಟಿ ಹಣ ನಿಗದಿಮಾಡಲಾಗಿದೆ ಆದರೆ ಬಾಲ್ಯವಿವಾಹ ತಡೆಯಲು ಹಣವೇ ಇಲ್ಲ. ಬಾಲ್ಯವಿವಾಹ ದೇಶದ ಅಭಿವೃದ್ಧಿಗೆ ಮಾರಕ ಎಂದು ಅವರು ತಿಳಿಸಿದರು.
ಅಲೆಮಾರಿ ಮಕ್ಕಳ ಶಿಕ್ಷಣಕ್ಕೆ ವಸತಿ ಶಾಲೆಗಳನ್ನು ನಿರ್ಮಿಸಲು ಆಯವ್ಯಯದಲ್ಲಿ ಸೂಚಿಸಲಾಗಿದೆ ಆದರೆ ವಲಸೆ ನಿಯಮವನ್ನು ಸೂಕ್ತವಾಗಿ ಜಾರಿಮಾಡುವ ಪ್ರಸ್ತಾವನೆ ಇಲ್ಲ . ವಲಸೆ ನಿಯಮ ಸೂಕ್ತವಾಗಿ ಜಾರಿಯಾದರೆ ಮಾತ್ರ ಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಸಚಿವರು, ಸರ್ಕಾರ ಗಮನಿಸುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications