Karnataka Budget: ರಾಜ್ಯ ಸಹಕಾರಿ ಇಲಾಖೆಗೆ ಮೇಜರ್ ಸರ್ಜರಿ ಘೋಷಣೆ, ಸಿಕ್ಕಿದ್ದೇನು?
ಬೆಂಗಳೂರು, ಮಾರ್ಚ್ 07: ಕರ್ನಾಟಕ ರಾಜ್ಯ ಸರ್ಕಾರ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಸೂಕ್ತ ಅನುದಾನ ಘೋಷಣೆ ಜೊತೆಗೆ ಇಲಾಖೆಯಲ್ಲಿ ಕಾರ್ಯಕ್ಷಮತೆ, ಪಾರದರ್ಶಕತೆ ಹಾಗೂ ಜನಸ್ನೇಹಿ ಸೇವೆಗಳನ್ನು ನೀಡಲು ಸುಧಾರಣಾ ಕ್ರಮಗಳನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಭವಿಷ್ಯದಲ್ಲಿ ರೈತರು ಸೇರಿದಂತೆ ಸಾರ್ವಜನಿಕರಿಗೆ ಉತ್ತಮು ಆರ್ಥಿಕ ಸೌಲಭ್ಯಗಳ ಸೇವೆ ದೊರೆಯುವಂತೆ ಮಾಡಲಾಗುವುದು ಎಂದರು.
ಶುಕ್ರವಾರ (ಮಾರ್ಚ್ 07) ರಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 93 ಕೋಟಿ ರೂ.ಗಳಷ್ಟು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ 110 ಸಂಘಗಳ ಗಣಕೀಕರಣವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, 3,000 ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಹಕಾರ ಇಲಾಖೆ ಸುಧಾರಣಾ ಕ್ರಮಗಳ ಪಟ್ಟಿ
* ರಾಜ್ಯದ ಎಲ್ಲಾ ನೊಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳ ಮಾಹಿತಿ ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳದ ವತಿಯಿಂದ ಆನ್‌ಲೈನ್‌ನಲ್ಲಿ ಅಳವಡಿಸಲಾಗುವುದು.
* ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಅವ್ಯವಹಾರವನ್ನು ತಡೆಯಲು ಸಹಾಯವಾಣಿ ಅರಂಭಿಸಲಾಗುವುದು.
* ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ತಿಳಿಸಿದೆ.
ಯಶಸ್ವಿನಿ ಯೋಜನೆಯಡಿ ಇಲ್ಲಿಯವರೆಗೆ 700 ನೆಟ್‌ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿವೆ. ಈ ಆಸ್ಪತ್ರೆಗಳಲ್ಲಿ ಇದುವರೆಗೂ ರಾಜ್ಯಾದ್ಯಂತ 59,000 ಫಲಾನುಭವಿಗಳು 103 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದಿದ್ದಾರೆ.
2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ. ರಿಯಾಯತಿ ಬಡ್ಡಿ ದರದಲ್ಲಿ ನೀಡುವ ಪುನರ್‌ಧನದ ಮಿತಿಯನ್ನು ನಬಾರ್ಡ್ ಶೇ. 58ರಷ್ಟು ಕಡಿಮೆ ಮಾಡಿದ್ದರೂ ಸಹ, ನಿಗದಿತ ಗುರಿಯನ್ನು ಸಾಧಿಸಲು ಸರ್ಕಾರ ಬದ್ಧವಾಗಿದೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಬ್ಯಾಂಕ್‌ಗಳ ಬಡ್ಡಿ ಮನ್ನಾ: ಸಿಎಂ ಮಾಹಿತಿ
2023-24ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ, ಡಿಸಿಸಿ (DCC) ಹಾಗೂ ಪಿಕಾರ್ಡ್ (PCARD) ಬ್ಯಾಂಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲಾಗಿದೆ.
ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಶ್ರಮಿಕರು ಮೃತರಾದಾಗ ಅವರ ವಾರಸುದಾರರಿಗೆ ಒಂದು ಲಕ್ಷ ರೂ. ವಿಮಾ ಮೊತ್ತ ನೀಡಲಾಗುತ್ತಿದೆ. ಸದರಿ ವಿಮಾ ಮೊತ್ತವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು 376 ಕೋಟಿ ರೂ. ಸಹಾಯ ಅನುದಾನ ನೀಡಲಾಗುವುದು. ಈಗಾಗಲೇ 329 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, ಬಾಕಿ ಇರುವ 47 ಕೋಟಿ ರೂ. ಮೊತ್ತವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications