'ಬಿಎಸ್‌ವೈ ವಿರುದ್ಧದ ತನಿಖೆಗೆ ಅನುಮತಿಯ ಅಗತ್ಯವಿಲ್ಲ'

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 10 : ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಡಿ-ನೋಟಿಫಿಕೇಷನ್‌ ಪ್ರಕರಣಗಳ ತನಿಖೆಗೆ ತಮ್ಮ ಅನುಮತಿ ಅಗತ್ಯವಿಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

2015ರ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ಅವರ ವಿರುದ್ಧದ 5 ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ನೀಡಿದ್ದ ಪೂರ್ವಾನುಮತಿಯನ್ನು ರದ್ದುಪಡಿಸಿತ್ತು. [ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು ಯಾವುವು?]

vajubhai vala

ಇದರಿಂದಾಗಿ 2010ರ ಜನವರಿ 22 ಮತ್ತು 24ರಂದು ಸಿರಾಜಿನ್ ಬಾಷಾ ಅವರು ಲೋಕಾಯುಕ್ತಕ್ಕೆ ಯಡಿಯೂರಪ್ಪ ಅವರ ವಿರುದ್ಧ ನೀಡಿದ್ದ 5 ಪ್ರತ್ಯೇಕ ಖಾಸಗಿ ದೂರುಗಳು ರದ್ದಾಗಿದ್ದವು. ಹೈಕೋರ್ಟ್ ವಿಚಾರಣೆಗೆ ಪೂರ್ವಾನುಮತಿ ನೀಡುವ ಕುರಿತು ರಾಜ್ಯಪಾಲರು ಪುನರ್ ಪರಿಶೀಲನೆ ನಡೆಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು. [ಯಡಿಯೂರಪ್ಪಗೆ ಬಿಗ್ ರಿಲೀಫ್]

ಅನುಮತಿ ಬೇಕಾಗಿಲ್ಲ : ದೂರುದಾರ ಸಿರಾಜಿನ್ ಬಾಷಾ ಅವರು ಕರ್ನಾಟಕ ಹೈಕೋರ್ಟ್ ಆದೇಶದ ನಂತರ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ನೀಡಿರುವ ವಜುಭಾಯಿ ವಾಲಾ ಅವರು, 'ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿ ಹುದ್ದೆಯಲ್ಲಿಲ್ಲ. ಆದ್ದರಿಂದ, ನನ್ನ ಅನುಮತಿ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸಿರಾಜಿನ್ ಬಾಷಾ ಅವರು 'ರಾಜ್ಯಪಾಲರು ಉತ್ತರ ನೀಡಿರುವ ಪತ್ರ ಸಿಕ್ಕಿದೆ. ಅನುಮತಿ ಬೇಕಾಗಿಲ್ಲ ಎಂದರೆ ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅರ್ಥವಲ್ಲ. ನನ್ನ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶವಿದೆ' ಎಂದು ಹೇಳಿದ್ದಾರೆ.

ಅಂದಹಾಗೆ ಸಿರಾಜಿನ್ ಬಾಷಾ ಸಲ್ಲಿಸಿದ್ದ ದೂರುಗಳ ಅನ್ವಯ ಯಡಿಯೂರಪ್ಪ ಅವರ ವಿರುದ್ಧ ತನಿಖೆ ನಡೆಸಲು 2011ರಲ್ಲಿ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರು ಅನುಮತಿ ನೀಡಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಯಡಿಯೂರಪ್ಪ ಪ್ರಶ್ನಿಸಿದ್ದರು. ಕೋರ್ಟ್ ರಾಜ್ಯಪಾಲರು ನೀಡಿದ ಪೂರ್ವಾನುಮತಿ ಕಾನೂನು ಬಾಹಿರವಾಗಿದೆ ಎಂದು ತೀರ್ಪು ನೀಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Governor Vajubhai Vala decided that the question of him granting sanction for the prosecution of B.S.Yeddyurappa does not arise as he is no longer the chief minister.
Please Wait while comments are loading...