ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ದುಡ್ಡು ಹೊಡೆದಿದ್ದಾರೆ : ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್
ವಿಜಯಪುರ, ನವೆಂಬರ್ 01: ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂಪಾಯಿ ದುಡ್ಡು ತಿಂದಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಸ್ಪೋಟ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಸಿಎಂ ಇದ್ದಾಗ ಮಂತ್ರಿಯಾಗು ಎಂದಿದ್ದರು ಆದರೆ ನಾನು ಆಗಿರಲಿಲ್ಲ. ಅವರು ಸಿಎಂ ಇದ್ದಾಗ ಸಾವಿರಾರು ಕೋಟಿ ರೂ. ಹಣ ತಿಂದಿದ್ದಾರೆ. ಭ್ರಷ್ಟ ಸಿಎಂ ಮಂತ್ರಿಮಂಡಲದಲ್ಲಿ ನಾನು ಇರಲ್ಲ ಎಂದು ತಿರಸ್ಕರಿಸಿದ್ದೇನೆ. ಪ್ರತಿ ನಿತ್ಯ ಅಪ್ಪ, ಮಗ ನಡ್ಡಾ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ತೆಗೆಯಿರಿ. ವಿಜಯೇಂದ್ರನನ್ನು ಸಿಎಂ ಮಾಡಿ ಎಂದು ಗೋಳಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಹೈಕಮಾಂಡ್ ನನ್ನ ಬಗ್ಗೆ ಹಾಗೂ ವಿಜಯೇಂದ್ರ ಬಗ್ಗೆ ಮೌನ ವಹಿಸಿದೆ ಅವರಿಗೆ ಏನು ಗೊತ್ತಾಗುತ್ತಿಲ್ಲ. ಯತ್ನಾಳ ಅನ್ನ ಹಿಡಿಯಬೇಕು ವಿಜಯೇಂದ್ರನ ಹಿಡಿಯಬೇಕು ಎಂಬ ಗೊಂದಲದಲ್ಲಿದ್ದಾರೆ, ಜನ ಮಾಧ್ಯಮಗಳು ಯತ್ನಾಳನ ಉಚ್ಚಾಟನೆ ಮಾಡಲಾಗುತ್ತದೆ ಎಂದು ಸುದ್ದಿ ಮಾಡುತ್ತವೆ. ಆರು ವರ್ಷದಿಂದ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆ ಎಂದು ಸುದ್ದಿ ಮಾಡುತ್ತೀರಿ ಒಮ್ಮೆಯಾದರೂ ಹೊರಗೆ ಹಾಕಿ ಎಂದು ಯತ್ನಾಳ್ ಕಿಡಿಕಾರಿದರು.
ವಿಜಯೇಂದ್ರ ಕೆಲವೊಂದು ಸುದ್ದಿ ಮಾಡಿ ಎಂದು ಹೇಳುತ್ತಾನೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೆಳೆಯುತ್ತದೆ ಎಂದು ಸುಳ್ಳು ಸುದ್ದಿ ಮಾಡುತ್ತಾರೆ, ನನ್ನ ವಿರುದ್ಧ ಕ್ರಮಕ್ಕಾಗಿ ವಿಜಯೇಂದ್ರ ಹಾಗೂ ಅವರ ಅಪ್ಪ ದಿನಾಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಳಿ ಕೂಡುತ್ತಾರೆ. ವಿಜಯೇಂದ್ರನನ್ನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿ ಎಂದು ಕೂಡುತ್ತಾರೆ
ಯತ್ನಾಳಗೆ ಸೂಕ್ತ ಸ್ಥಾನಮಾನ ಮಾಡಿಕೊಡಲಾಗುತ್ತದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ವಿಜಯೇಂದ್ರ ಬಳಿ ಸ್ಥಾನಮಾನ ತಗೋ ಮಗ ಅಲ್ಲ. ಯಡಿಯೂರಪ್ಪ ಸಿಎಂ ಇದ್ದಾಗಲೇ ಆತನ ಬಳಿ ಮಂತ್ರಿ ಆಗಲ್ಲ ಎಂದೆ. ನಾನು ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿ ಆಗಿದ್ದು, ನಿನ್ನಂತ ಭ್ರಷ್ಟ ಸಿಎಂ ಬಳಿ ನಾನು ಸಚಿವನಾಗಲ್ಲ ಎಂದು ಯಡಿಯೂರಪ್ಪಗೆ ಹೇಳಿದ್ದೆ. ವಿಜಯಪುರ ಜಿಲ್ಲೆಗೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ಬಹಳ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ 125 ಕೋಟಿ ಅನುದಾನ ಬಂದಿದ್ದನ್ನ ಕಡಿತ ಮಾಡಿದರು. ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಡಲಿಲ್ಲ, ಅಪ್ಪ ಮಕ್ಕಳು ಇನ್ನೂ ಏನೇನೋ ಮಾಡಬೇಕೆನ್ನುತ್ತಾರೆ. ನಮ್ಮ ಜಿಲ್ಲೆಗೆ ಅವಮಾನ ಮಾಡಿದರು, ವಕ್ಪ್ ಬೋರ್ಡ್ ವಿಚಾರದ ಇಷ್ಟೆಲ್ಲಾ ಹೋರಾಟದ ಜಿಲ್ಲೆಗೆ ಬರಲಿಲ್ಲ. ಜಿಲ್ಲೆಗೆ ಸಂಬಂಧ ಇಲ್ಲದವ ಚುನಾವಣೆಯಲ್ಲಿ ಡಿಫಾಸಿಟ್ ಕಳೆದುಕೊಂಡವ ಬಿಜೆಪಿ ಸತ್ಯಶೋಧನಾ ತಂಡದಲ್ಲಿ ಬಂದು ಹೋದ. ತಾವೇ ಚುನಾವಣೆಯಲ್ಲಿ ಆಯ್ಕೆಯಾಗಲ್ಲ ಇಲ್ಲಿ ಬಂದು ಏನು ಶೋಧನೆ ಮಾಡುತ್ತಾರೆ. ನಿತ್ಯ ಸಾಬರ ಜೊತೆ ಇರುತ್ತಾರೆ ಅಂಥವರು ಸತ್ಯಶೋಧನೆ ಮಾಡುತ್ತಾರಾ? ಎಂದು ಯತ್ನಾಳ್ ಪ್ರಶ್ನಿಸಿದರು.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಮೇಶ್ ಜಾರಕಿಹೊಳಿ ಹೆಸರು ಕಾಣೆಯಾಗಿದೆ. ವಿಜಯೇಂದ್ರ ನಮನ್ನು ಸ್ಟಾರ್ ಮಾಡುತ್ತಾನಾ? ನಮ್ಮನ್ನು ಜನರು ಸ್ಟಾರ್ ಮಾಡುತ್ತಾರೆ. ವಿಜಯೇಂದ್ರನ ಭಾಷಣಕ್ಕೆ ಯಾವ ಯಾರು ಕೂಡುತ್ತಿಲ್ಲ ಅವರ ಅಪ್ಪ ಹಾಗೂ ಅವರಿಬ್ಬರೇ ಕುಳಿತು ಭಾಷಣ ಹೊಡೆಯಬೇಕಾಗಿದೆ. ಅವರದ್ದು ಮುಗಿದಿದೆ.
ವಿಜಯೇಂದ್ರನ ಕೇಳಿ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ಸ್ಟಾರ್ ಪ್ರಚಾರ ಆಗಬೇಕೆಂಬ ಅವಶ್ಯಕತೆ ಇಲ್ಲ. ರಾಜ್ಯದ ಜನ ನಮ್ಮನ್ನ ಒಪ್ಪಿಕೊಂಡಿದ್ದಾರೆ, ಜನರೇ ನಮ್ಮನ್ನು ಸ್ಟಾರ್ ಮಾಡಿದ್ದಾರೆ. ಈಗಾಗಲೇ ವಿಜಯೇಂದ್ರ ಜೀರೋ ಆಗಿದ್ದಾನೆ. ಸುಮ್ಮನೆ ಬಡೆದಾಡುತ್ತಿದ್ದಾರೆ, ಅವರ ಅಪ್ಪ ಇದ್ದಾಗ ಸಾವಿರಾರು ಕೋಟಿ ಹಣ ತಿಂದಿದ್ದಾರೆ. ಹಣ ಖರ್ಚು ಮಾಡಿ ಮಾಡಿ ಹೀರೋ ಆಗಬೇಕೆನ್ನುತ್ತಿದ್ದಾರೆ. ಬಿಜೆಪಿ ಕರ್ನಾಟಕ ಎಕ್ಸ್ ಇದೆಯಲ್ಲ ಅದನ್ನ ಬಿ ವೈ ವಿಜಯೇಂದ್ರ ಕರ್ನಾಟಕ ಮಾಡುವುದು ಒಳ್ಳೆಯದು. ಅದರಲ್ಲಿ ವಿಜಯೇಂದ್ರನ ಗುಣಗಾನ ಮಾಡುವುದನ್ನು ಬಿಟ್ಟರೆ ಏನು ಇರಲ್ಲ ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications