ಲಿವಿನ್ ಅಪ್ಪ, ಪತಂಗದಂಥ ಅಮ್ಮ, ಮಗನ ಬದುಕು ಅಯೋಮಯ: ಡಾ ರೂಪಾ ರಾವ್ ಬರಹ
ಬೆಂಗಳೂರು: ಮನುಷ್ಯ ಹುಟ್ಟಿನೊಂದಿಗೆ ಪೋಷಕರ ಜೊತೆ ಬೆಳೆಯುತ್ತಾನೆ. ಹೆತ್ತವರು, ಕುಟುಂಬಸ್ಥರಿಂದ ಸಂಸ್ಕಾರ ಕಲಿಯುತ್ತಾನೆ. ಇದು ಸಮಾಜ, ಸಂಬಂಧಗಳ ಮಹತ್ವ ತಿಳಿದು ಬದುಕು ಕಟ್ಟಿಕೊಳ್ಳಲು ಪೂರಕವಾಗುತ್ತದೆ. ಆದರೆ ಕೆಲವೊಂದು ಸಂಬಂಧಗಳಲ್ಲಿ ಹೆತ್ತವರು ಮಕ್ಕಳನ್ನು ನಡು ನೀರಲ್ಲಿ ಕೈ ಬಿಟ್ಟು ಬಿಡುತ್ತಾರೆ. ಅಪ್ಪ, ಅಮ್ಮ ಸಂಸ್ಕಾರ ರಹಿತರಾದರೆ ಅಂತವರ ಮಕ್ಕಳಾಗಿ ಹುಟ್ಟಿದ ತಪ್ಪಿಗೆ ಅವರು ಪಡಬಾರದ ಪಾಡು ಪಡುತ್ತಾರೆ. ಸಂಬಂಧ, ಬದುಕು, ವೃತ್ತಿ ಹೀಗೆ ಎಲ್ಲದರ ಮೇಲೂ ಆಸಕ್ತಿ ಕಳೆದುಕೊಳ್ಳುತ್ತಾರೆ. ಅಂತವರ ಜೀವನ, ನೋವು, ಸಂಕಷ್ಟಗಳ ಬಗ್ಗೆ ರಾಷ್ಟ್ರೀಯತಾವಾದಿ ಮತ್ತು ಎಂಪನೇಲ್ಡ್ ಮನಶ್ಶಾಸ್ತ್ರಜ್ಞರಾದ 'ರೂಪಾ ರಾವ್' ಅವರ ಫೇಸ್‌ಬುಕ್ ಬರಹ ಇಲ್ಲಿದೆ.
"ಮೇಡಮ್ ಇಂತಹವರೆಲ್ಲಾ ಯಾಕೆ ಮದುವೆ ಆಗುತ್ತಾರೆ, ನಮ್ಮನ್ನು ಯಾಕೆ ಹುಟ್ಟಿಸ್ತಾರೆ, ಅವರವರ ತೆವಲಿಗೆ ಹುಟ್ಟಿಸಿಕೊಂಡು , ನಂತರ ಮತ್ತೆ ಅವರವರ ತೆವಲನ್ನು ಹುಡುಕಿಕೊಂಡು ಮನೆಯನ್ನು ಒಡೆದು ಹಾಕಿ ಹೋಗುತ್ತಾರೆ. ನಮ್ಮ ಗತಿ ಏನು ಮೇಡಮ್. ಹಣ ಒಂದನ್ನು ಸುರಿದುಬಿಟ್ಟರೆ ಸಾಕಾ? ಇವರ ಗಲಾಟೆ, ಜಗಳ, ಅವಾಂತರ ಇವುಗಳಿಗೆಲ್ಲಾ ಸಾಕ್ಷಿ ಇದೆ ನಮ್ಮ ಮನಸೇನು ಆಗಬೇಕು? ಹೇಗೆ ಬೆಳೆಯಬೇಕು? ನಾನು ಯಾರನ್ನೂ ನಂಬದೇ ಇರಲು ಅವರೇ ಕಾರಣ.. ನಾನೂ ಹೀಗೇ ಹತ್ತು ಹದಿನಾರು ಸಂಬಂಧಗಳಿಂದ ಹೊರಗೆ ಬರಲೂ ಅವರೇ ಕಾರಣ. ನನಗೆ ಸಂಬಂಧಗಳು ಸೇಫ್ ಅನಿಸುತ್ತಿಲ್ಲ, ಭಯಾತಂಕ.

ಆ ಸಂಬಂಧಕ್ಕೆ ಅಂಟಿಕೊಂಡರೆ ಅಪ್ಪ ಅಮ್ಮ ಪರಸ್ಪರ ಮೋಸ ಮಾಡಿಕೊಂಡು ನನ್ನನ್ನು ಬಿಟ್ಟು ಹೋದ ಹಾಗೆ ಇವಳು ನನ್ನನ್ನು ಬಿಟ್ಟು ಹೋಗಬಹುದು ಎಂಬ ಭಯ ನನ್ನನ್ನು ಯಾವುದೇ ಸಂಬಂಧದಲ್ಲಿಯೂ ಡೀಪ್ ಆಗಿ ಹೋಗದಂತೆ ಮಾಡಿದೆ. ಆದರೆ ಪ್ರತೀ ಸಲ ಒಂದೊಂದು ಸಂಬಂಧದಿಂದ ಹೊರಗೆಬಂದಾಗಲೂ ಗಿಲ್ಟ್ ರಿಗ್ರೆಟ್ ಕಾಡುತ್ತೆ, ನನ್ನದೇನು ತಪ್ಪಿದೆ? ಮೇಡಂ.
ಆ ಹುಡುಗ ಇನ್ನೂ ಯುವಕ ಬದುಕಲ್ಲಿ ನೆಲೆ ನಿಲ್ಲಿಸಲಾಗುತ್ತಿಲ್ಲ, ಕೆಲಸದಲ್ಲಿ ಕನ್ಸಿಸ್ಟೆನ್ಸಿ ಇಲ್ಲ, ಸಂಬಂಧಗಳು ಮುರಿದು ಬೀಳುತ್ತಿವೆ. ಮನೆಯಲ್ಲಿ ಅಮ್ಮನ ಜೊತೆಯೆ ಇದ್ದಾನೆ, ಅಮ್ಮ ವರ್ಷಕೊಮ್ಮೆ ಪ್ರಿಯಕರನನ್ನು ಬದಲಿಸಿದರೆ, ಅಪ್ಪ ಮತ್ಯಾರೂ ಜೊತೆಯಲ್ಲಿಯೋ ಲೀವಿನ್ ಮಾಡುತ್ತಿದ್ದಾರೆ. ಮುರಿದು ಹೋದ ಸಂಸಾರ, ಸಿಗದ ಪ್ರೀತಿ, ಅಕ್ಕರೆ, ಅವನನ್ನು. ನುಚ್ಚು ನೂರಾಗಿಸಿದೆ. ಭಾವನೆಗಳ ನಿರ್ವಹಣೆ ಹೇಳಿಕೊಡಬೇಕಾದವರು ತಮ್ಮ ತಮ್ಮ ಸುಖಲೋಲುಪ್ತತೆಯಲ್ಲಿ ಮುಳುಗಿದ್ದಾಗ ಈತ ಒಂಟಿ ಆಗಿಹೋದ. ಕೋಪ, ಅಳು ಖುಷಿ ಯಾವುದನ್ನು ಈತ ನಿಯಂತ್ರಿಸಲಾರ. ತಮ್ಮ ಸಂಬಂಧಕ್ಕೆ ಎಲ್ಲಿ ತೊಂದರೆ ಆಗುತ್ತದೆಯೋ ಎಂದು ಇವನನ್ನು ಅವಾಯ್ಡ್ ಮಾಡಿದರು, ಹೆತ್ತಮ್ಮ ಹೆತ್ತಪ್ಪ. ಈಗ ಈತ ಬದುಕಿನಲ್ಲಿ ಎಲ್ಲವನ್ನೂ ಎಲ್ಲರನ್ನೂ ಅವಾಯ್ಡ್ ಮಾಡುತ್ತಾನೆ.
ಅವ ಕೇಳಿದ್ದು ನಿಜವೇ, ತಂದೆ ತಾಯಿ ಆಗದೇ ಕೇವಲ ಪ್ರೇಯಸಿ ಪ್ರಿಯಕರನೇ ಆಗುವುದಿದ್ದರೆ ಮಕ್ಕಳೇಕೆ ಬೇಕು?. ಅವರು ಮಾಡಿದ ಆ ತಪ್ಪಿಗೆ ಈಗ ಈಗಲೂ ಮಾನಸಿಕವಾಗಿ ಆರ್ಥಿಕವಾಗಿ ಬದುಕಲ್ಲಿ ಸ್ಥಿರವಾಗಿರಲು ಸಾಧ್ಯವಾಗುತ್ತಿಲ್ಲ. ಇದೊಂದು ಉದಾಹರಣೆ ಅಷ್ಟೇ..ಇಂತಹ ಹತ್ತಾರು ಘಟನೆಗಳಿಗೆ ಸಾಕ್ಷಿ ಆಗುತ್ತಿರುವ ನನ್ನ ಮನಸ್ಸೂ ಕೇಳುವುದು ಇದನ್ನೇ. ಇಂತಹವರೆಲ್ಲಾ ಮದುವೆ ಏಕಾಗುತ್ತಾರೆ, ಮಕ್ಕಳನ್ನು ಏಕೆ ಮಾಡಿಕೊಳ್ಳುತ್ತಾರೆ' ಎಂದು ಅವರು ಬರೆದುಕೊಂಡಿದ್ದಾರೆ.
ಪೊಸ್ಟ್‌ಗೆ ಬಂದ ನೆಟ್ಟಿಗರ ಸಲಹೆ...
ಪೋಸ್ಟ್ ನೋಡಿದವರಲ್ಲಿ ಹಲವರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ. ಇಂತಹ ಅಪ್ಪ ಅಮ್ಮ ಇರಬಾರದೆಂದು ದೂರಿದ್ದರು. ಅದರಲ್ಲಿ ಒಬ್ಬರು 'ಅವರ ಅಪ್ಪ ಅಮ್ಮ ಪಶುಜೀವನ ನಡೆಸುತ್ತಿದ್ದಾರೆ ಅಷ್ಟೇ... ಆಹಾರ, ನಿದ್ರಾ ಭಯ ಮೈಥುನ.. ಈ ನಾಲ್ಕು ಮನುಷ್ಯ ಮತ್ತು ಪಶುಗಳಲ್ಲಿ ಸಾಮಾನ್ಯ. ಆದರೆ ವಿವೇಕ, ಧರ್ಮಾಧರ್ಮ ವಿಚಕ್ಷಣೆ ಮನುಷ್ಯನನ್ನು ಪ್ರಾಣಿಗಳಿಗಿಂತ ಭಿನ್ನವಾಗಿ ಮಾಡುತ್ತದೆ. ಆ ವಿಚಕ್ಷಣೆ ಇಲ್ಲದೆ ಇದ್ದಲ್ಲಿ ಅವನು ಕೇವಲ ಒಬ್ಬ ಪಶು ಅಷ್ಟೇ. ಇಂತಹ ತಂದೆ ತಾಯಿಯ ಜೊತೆ ಅವನು ಇರುವ ಬದಲು ಬೇರೆ ಯಾರಾದರೂ ಧರ್ಮಾತ್ಮರನ್ನು (ಗುರುವನ್ನು) ಆಶ್ರಯಿಸಿ ಅವರ ಸತ್ಸಂಗದಲ್ಲಿ ಸಾರ್ಥಕ ಜೀವನ ನಡೆಸುವುದು ಆ ಹುಡುಗನಿಗೆ ಬಹಳ ಒಳ್ಳೆಯದು' ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications