Brahmin: ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 100 ಕೋಟಿ ಅನುದಾನದ ಕೊಡಿ ಎಂದ ಮಾಜಿ ಸಚಿವ ದಿನೇಶ್ ಗುಂಡೂರಾವ್!
ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 100 ಕೋಟಿ ಅನುದಾನದ ಅಗತ್ಯವಿದೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈಚೆಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದಕ್ಕೆ ದಿನೇಶ್ ಗುಂಡೂರಾವ್ ಅವರು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಕರ್ನಾಟಕ ಮತ್ತು ಪಕ್ಷಕ್ಕಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದರೂ, ಈ ಬಾರಿ ಸಂಪುಟದಲ್ಲಿ ನನಗೆ ಅವಕಾಶ ಕೊಡದೆ ಇರುವುದು ನಿರಾಶೆಯನ್ನುಂಟು ಮಾಡಿದೆ ಎಂದಿದ್ದರು. ಅಲ್ಲದೆ ಇಲ್ಲಿ ಕೆಲಸಕ್ಕಿಂತಲೂ ಜಾತಿಯೇ ಮುಖ್ಯ ಎನ್ನುವುದು ವಿಷಾದನೀಯ ಸಂಗತಿ ಎಂದೂ ದಿನೇಶ್ ಗುಂಡೂರಾವ್ ಅವರು ಹೇಳಿದ್ದರು. ಇದೀಗ ದಿನೇಶ್ ಗುಂಡೂರಾವ್ ಅವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂ. ಅನುದಾನ ಕೊಡಬೇಕು ಎಂದಿದ್ದಾರೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಂಡಳಿಯ ಕಚೇರಿಯಲ್ಲಿ 2026 -2027ನೇ ಸಾಲಿನ ಸಾಂದೀಪಿನಿ ಶಿಷ್ಯವೇತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಮುಂದುವರಿದ ಜನಾಂಗ ಎನ್ನಿಸಿಕೊಂಡ ಬ್ರಾಹ್ಮಣರಲ್ಲೂ ಸಾಕಷ್ಟು ಬಡವರಿದ್ದಾರೆ. ಬಡ ಬ್ರಾಹ್ಮಣರ ಅಭಿವೃದ್ಧಿಗೆ ಮಂಡಳಿ ಹಲವಾರು ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ. ಕಿರುಸಾಲ ಯೋಜನೆ, ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣಕ್ಕೆ ಸಹಾಯಧನ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಹೆಚ್ಚಿನ ಜನರು ಇದರ ಲಾಭ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಂಡಳಿಯ ಸಾಲ ವಸೂಲಾತಿ ಪ್ರಮಾಣ ಶೇಕಡಾ 98 ಕ್ಕಿಂತ ಹೆಚ್ಚಿದೆ. ಬಡ ಬ್ರಾಹ್ಮಣರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ನೆರವಾಗುತ್ತಿದೆ ಎಂದೂ ಹೇಳಿದ್ದಾರೆ.

ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯ ಬಗ್ಗೆ ಮೆಚ್ಚುಗೆ
ಈ ಯೋಜನೆಗಳಿಂದ ಹೆಚ್ಚೆಚ್ಚು ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಅತ್ಯಂತ ಸಂತಸದ ವಿಷಯ. ಸಾಲ ವಸೂಲಾತಿ ಪ್ರಮಾಣ 98% ಆಗಿದೆ ಎನ್ನುವುದು ಸಂತಸದ ವಿಷಯ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಉತ್ತಮ ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ ಸಾಂದೀಪಿನಿ ಶಿಷ್ಯವೇತನ ಯೋಜನೆ ತರಲಾಗಿದ್ದು, ವಿದ್ಯಾವಂತರಾಗಿ ಬದುಕು ಕಟ್ಟಿಕೊಳ್ಳಲು ಇದು ಸಹಕಾರಿಯಾಗಲಿದೆ. ಇನ್ನೂ ಹೆಚ್ಚಿನ ಜನರಿಗೆ ಸಹಾಯ ನೀಡಲು 100 ಕೋಟಿ ರೂ ಅನುದಾನ ಅಗತ್ಯವಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಅವರು ಮಾತನಾಡುತ್ತಾ, ಆರ್ಥಿಕವಾಗಿ ಹಿಂದುಳಿದ ಸಮುದಾಯದ ಬ್ರಾಹ್ಮಣ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಉದ್ದೇಶದಿಂದ ಸಾಂದೀಪನಿ ಶಿಷ್ಯವೇತನ ಜಾರಿಗೊಳಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಾಗೂ ಸಾಮಾನ್ಯ ಪದವಿ ಕೋರ್ಸ್ ವಿದ್ಯಾರ್ಥಿಗಳಿಗೆ ವಾರ್ಷಿಕ 15,000 ನಿರ್ವಹಣಾ ವೆಚ್ಚ, ಸಿಇಟಿ, ನೀಟ್ ಮತ್ತಿತರೆ ವೃತ್ತಿಪರ ಕೋರ್ಸ್ ಗಳ ಪ್ರವೇಶ ಶುಲ್ಕದ ಎರಡನೇ ಮೂರು ಭಾಗದಷ್ಟು ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಹೇಳಿದರು.
ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ.ಕೆ ಅವರು ಸಾಂದೀಪನಿ ಯೋಜನೆಯ ವಿವರಗಳನ್ನು ಹಂಚಿಕೊಳ್ಳುತ್ತಾ, ಶಿಷ್ಯವೇತನ ಸೌಲಭ್ಯ ಪಡೆಯ ಬಯಸುವ ಆಸಕ್ತ ವಿದ್ಯಾರ್ಥಿಗಳು ರಾಜ್ಯದ ಖಾಯಂ ನಿವಾಸಿ ಆಗಿರಬೇಕು ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ ಹೆಚ್ಚಿನ ಮಾಹಿತಿಗೆ ಮಂಡಳಿಯ ಜಾಲತಾಣ ksbdb.karnataka.gov.in ಅಥವಾ ದೂರವಾಣಿ ಸಂಖ್ಯೆ 080-29605888 ಅಥವಾ 8762249230 ನ್ನು ಸಂಪರ್ಕಿಸಬಹುದು ಎಂದರು.


Click it and Unblock the Notifications
