ಗ್ಯಾರಂಟಿ ಯೋಜನೆಗಾಗಿ ಹೊಸ ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಅರ್ಜಿ ಸ್ವೀಕಾರ ನಿಲ್ಲಿಸಿದ ಆಹಾರ ಇಲಾಖೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳೊಂದಿಗೆ ಹಲವು ಭರವಸೆಗಳನ್ನು ನೀಡಿತ್ತು. ಇದಕ್ಕೆ ಮರುಳಾದ ಕರುನಾಡ ಜನ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ 135 ಸ್ಥಾನಗಳ ಬಹುಮತ ನೀಡಿದರು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಮತ್ತು 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಉಚಿತ ಯೋಜನೆಗಳನ್ನು ಜಾರಿಗೆ ತರಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆಯೂ ಕಂಡುಬರುತ್ತಿದೆ.
ಗ್ಯಾರಂಟಿ ಯೋಜನೆಗಳನ್ನು ಕೇವಲ ಬಡ ವರ್ಗದ ಜನರಿಗೆ ಸೀಮಿತಗೊಳಿಸಲು ಯೋಚಿಸುತ್ತಿದ್ದು, ಈ ಹಿನ್ನೆಲೆ ರಾಜ್ಯದೆಲ್ಲೆಡೆ ಉಚಿತ ಕೊಡುಗೆಗಳ ಲಾಭ ಪಡೆಯಲು ಜನರು ಹೊಸ ಬಿಪಿಎಲ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿ ಮಾಡಿಸಲು ಮುಗಿಬೀಳುತ್ತಿದ್ದಾರೆ.

ಆದರೆ, ಬಿಪಿಎಲ್ ಕಾರ್ಡ್‌ಗಾಗಿ ಅಲೆದಾಡುತ್ತಿರುವ ಜನರಿಗೆ ನಿರಾಸೆ ಕಾದಿದ್ದು, ಇದೀಗ ಹೊಸ ಕಾರ್ಡ್‌ಗಳಿಗಾಗಿ ಅರ್ಜಿ ಸ್ವೀಕಾರವನ್ನೇ ಆಹಾರ ಇಲಾಖೆ ಸ್ಥಗಿತಗೊಳಿಸಿದೆ. ಇದರಿಂದ ಜನರು ಕಾಂಗ್ರೆಸ್ ಪಕ್ಷದ ಮೇಲೆ ಬೇಸರಗೊಳ್ಳುತ್ತಿದ್ದಾರೆ. ಮತ ಹಾಕಿ ತಪ್ಪು ಮಾಡಿದೆವು ಎಂದು ಮಾತನಾಡಿಕೊಳ್ಳುವಂತಾಗಿದೆ.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ, ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಯುವಕ-ಯುವತಿಯರಿಗೆ 3000-1500 ರೂ. ನೀಡುವುದಾಗಿ ಘೋಷಿಸಿದ್ದರು.
ಮೊದಲ ಸಚಿವ ಸಂಪುಟ ಸಭೆಯ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಈ ಯೋಜನೆಗಳ ಲಾಭ ಸಿಗುವುದಿಲ್ಲ. ನಿಜಕ್ಕೂ ಬಡವರಿಗೆ, ಅರ್ಹರಿಗೆ ಮಾತ್ರ ಸಿಗುತ್ತದೆ ಎಂದು ಹೇಳಿದ್ದರು.
ಕಳೆದ ಒಂದು ವಾರದಿಂದ ರಾಜ್ಯದ ಜನರು ಹೊಸ ಬಿಪಿಎಲ್ ಕಾರ್ಡ್ ಮಾಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್‌ಸೈಟ್‌ಗೆ ಮೊರೆ ಹೋಗಿದ್ದರು. ತಮ್ಮ ಮೊಬೈಲ್ ಲ್ಯಾಪ್‌ಟಾಪ್ ಮೂಲಕ ಆಹಾರ ಇಲಾಖೆ ವೆಬ್‌ಸೈಟ್‌ಗೆ ಲಾಗಿನ್ ಆಗಲು ಪ್ರಯತ್ನಿಸಿದ್ದಾರೆ.
ಹೆಚ್ಚಿನ ಜನರು ಏಕಕಾಲಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದು, ಆಹಾರ ಇಲಾಖೆ ಅರ್ಜಿ ಸ್ವೀಕಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ.
ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸ್ವೀಕಾರ ಮತ್ತು ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಆಹಾರ ಇಲಾಖೆಯಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ವೆಬ್‌ಸೈಟ್ ಓಪನ್ ಇತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾಗುವವರೆಗೂ GSC ಅಪ್ಲಿಕೇಶನ್ ಹಾಕುವುದಕ್ಕೆ ಅವಕಾಶ ನೀಡಲಾಗಿತ್ತು.
ಆದರೆ, ಮೇ ತಿಂಗಳ 17 ಹಾಗೂ 18 ರವರೆಗೂ ಸರ್ವರ್ ಓಪನ್ ಇತ್ತು. ಇದೀಗ ಮತ್ತೆ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಸೂಚನೆ ನೀಡುವವರೆಗೂ ಅರ್ಜಿಗಳ ಸ್ವೀಕಾರ ಸ್ಥಗಿತಗೊಳಿಸಗಿದೆ. ಸರ್ಕಾರದ ಆದೇಶದವರೆಗೆ ಜನರು ಕಾಯಬೇಕು ಎಂದು ಆಹಾರ ಇಲಾಖೆ ಆಧಿಕಾರಿಗಳು ಹೇಳುತ್ತಿದ್ದಾರೆ.












Click it and Unblock the Notifications