ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಬಿಎಲ್ ಶಂಕರ್ ರಾಜೀನಾಮೆ
ಬೆಂಗಳೂರು, ಅ.17: ಸಾಹಿತಿ ಕೆ.ಪಿ ಪೂರ್ಣಚಂದ್ರತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಬಿಎಲ್ ಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ನಾಡಿನ ಹೆಸರಾಂತ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹ ಹಾಗೂ ಅವರ ಪರಿಸರ ಕಾಳಜಿಯನ್ನು ಯುವಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವನ್ನು ರಚಿಸಲಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಕಚೇರಿಯನ್ನು ಹೊಂದಿದೆ.
ರಾಜೀನಾಮೆ ಪತ್ರದಲ್ಲಿ ಏನಿದೆ?:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ
ಕೆ.ಪಿ ಪೂರ್ಣಚಂದ್ರತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಈ ಮೂಲಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇಲ್ಲಿಯವರೆಗೆ ತಾವು ಹಾಗೂ ಪ್ರತಿಷ್ಠಾನದ ಇತರ ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ನೀಡಿರುವ ಸಕಾಲಿಕ ಸಹಕಾರಕ್ಕೆ ಆಭಾರಿಯಾಗಿದ್ದೇನೆ. ಸದರಿ ರಾಜೀನಾಮೆಯನ್ನು ಅಂಗೀಕರಿಸಿ ದೃಢೀಕರಿಸಬೇಕಾಗಿ ಕೋರುತ್ತೇನೆ- ಮಾಜಿ ಸಂಸದ, ಮಾಜಿ ಸಚಿವ, ಮಾಜಿ ಸಭಾಪತಿ ಬಿಎಲ್ ಶಂಕರ್ ಎಂದು ತಿಳಿಸಲಾಗಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವರು 2022ರಲ್ಲಿ ಆಯ್ಕೆಯಾಗಿದ್ದು, ನಾಲ್ಕನೆ ಬಾರಿಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಮುಂದಿನ ಮೂರು ವರ್ಷದವರೆಗೆ ಆಡಳಿತ ನಡೆಸಲಿದ್ದಾರೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದು, ಸರ್ಕಾರವು ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಸ್ಥಾಪಿಸಲಾಗಿದೆ. ಈ ಮುಖಾಂತರ ತೇಜಸ್ವಿಯವರ ಸಾಹಿತ್ಯ, ಪರಿಸರ, ಫೋಟೋಗ್ರಫಿ, ಚಿತ್ರಕಲೆ, ಕೃಷಿ ಮುಂತಾದ ಹಲವಾರು ವಿಚಾರಧಾರೆಗಳನ್ನು ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.
ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ.
ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ , ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ ಹಾಗೂ ಅದರ ಬಳಕೆಯ ಸಾಧ್ಯತೆಗಳು, ಅಡುಗೆ ಹೀಗೆ ಹತ್ತು ಹಲವು ಇವರ ಆಸಕ್ತಿ, ಅಭಿರುಚಿ, ಕುತೂಹಲಗಳಾಗಿದ್ದವು. ಹಾಗಾಗಿ ತೇಜಸ್ವಿ ಎಂದರೇನೆ ಒಂದು ವಿಸ್ಮಯ, ನಿಗೂಢ.












Click it and Unblock the Notifications