ಮಂತ್ರಿಗಿರಿಗೆ ₹80,00,00,000 ವಸೂಲಿ: ಪ್ರಿಯಾಂಕ್ ಖರ್ಗೆ ಹೀಗಂದಿದ್ದೇಕೆ?
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ಶಾಸಕರನ್ನು ಸಿಎಂ ಕುರ್ಚಿಗಾಗಿ ಕೋಟಿಗಟ್ಟಲೆ ಆಫರ್ ಕೊಟ್ಟು ಖರೀದಿ ಮಾಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಒಬ್ಬ ಶಾಸಕರಿಗೆ 50 ಕೋಟಿ ಫಿಕ್ಸ್ ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕೂಡ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ? ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದ್ದಿದೆಯೇ? ಎಂದು ಕೇಳಿದೆ.
'ಮೊದಲ ಅವಧಿಯ ಅಧಿಕಾರದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಿಸಿ, ಎರಡನೇ ಅಧಿಕಾರಾವಧಿಯಲ್ಲಿ ಎರಡು ಮುಖ್ಯಮಂತ್ರಿಗಳನ್ನು ಬದಲಿಸಿದ ಹಾಗೂ ಆಪರೇಷನ್ ಕಮಲವೆಂಬ ಕರ್ನಾಟಕ ರಾಜಕಾರಣದ ಕರಾಳ ಅದ್ಯಾಯವನ್ನು ಆರಂಭಿಸಿದ ಬಿಜೆಪಿ ಪಕ್ಷದವರಿಗೆ ಕಾಂಗ್ರೆಸ್ ಹೆಸರೆತ್ತುವುದಕ್ಕೆ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಹೈಕಮಾಂಡ್ ಕಪ್ಪದ ಬಗ್ಗೆ ಬಹಳ ಆಸಕ್ತಿಯಿಂದ ಮಾತನಾಡುವ ಬಿಜೆಪಿ, ಯಡಿಯೂರಪ್ಪನವರು ಹೈಕಮಾಂಡಿಗೆ ಎಷ್ಟು ಕಪ್ಪ ಕೊಟ್ಟು ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು? ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸವರಾಜ್ ಬೊಮ್ಮಯಿಯವರು ಎಷ್ಟೆಷ್ಟು ಬಿಡ್ ಕೂಗಿ ಮುಖ್ಯಮಂತ್ರಿಗಳಾದರು ಎಂಬ ಪ್ರಶ್ನೆಗಳಿಗೆ ಉತ್ತರಿಸುವುದೇ?' ಎಂದು ಸವಾಲು ಹಾಕಿದ್ದಾರೆ.
'ಈ ಪ್ರಶ್ನೆಗಳು ನಮ್ಮದಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು "ಪೇಮೆಂಟ್ ಸೀಟ್" ಎಂದು ಯತ್ನಾಳ್ ಅವರೇ ಹೇಳಿದ್ದರು. ಮಂತ್ರಿಗಿರಿಗೆ 70ರಿಂದ 80 ಕೋಟಿ ರೂಪಾಯಿ ವಸೂಲಿಯಾಗಿತ್ತು ಎಂಬ ಸತ್ಯವನ್ನೂ ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಬಿಜೆಪಿಯವರ ಈ ಎಲ್ಲ ವಿಚಾರಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದಿವೆ, ಜನತೆಗೆ ಉತ್ತರಿಸುವ ನೈತಿಕತೆ ತೋರಲಿ' ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಶಾಸಕರ ಖರೀದಿ ಕೇಂದ್ರ ಬಿಜೆಪಿ
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಎಂದರೆ, ಶಾಸಕರ ಖರೀದಿ ಕೇಂದ್ರ ಆರಂಭಿಸಿರುವ ಭಂಡ ಹಾಗೂ ಭ್ರಷ್ಟರು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕೂಡ ಆರೋಪಿಸಿದೆ.ನವೆಂಬರ್ ಕ್ರಾಂತಿಯ ಗುಮ್ಮ ಕಾಂಗ್ರೆಸ್ ಪಾಳಯದೊಳಗೆ ಬಂದಿದ್ದೇ ತಡ, ಬಹುಮತದ ಸರ್ಕಾರ ಅಲ್ಲಾಡುತ್ತಲೇ ಇದೆ. ಮುಖ್ಯಮಂತ್ರಿ ಗದ್ದುಗೆ ಅಲುಗಾಡುತ್ತಿರುವ ಕಾರಣ ಸಿದ್ದರಾಮಯ್ಯ ರಾಜ್ಯವನ್ನು ಮರೆತೇ ಬಿಟ್ಟಿದ್ದಾರೆ ಎಂದಿದೆ.
ನಾನೇ ಸಿಎಂ, ನಾನೇ ಸಿಎಂ ಎಂದು ಘೋಷಿಸುತ್ತಿದ್ದ ಸಿದ್ದರಾಮಯ್ಯನವರ ಮಾತುಗಳು ಈಗ ಬದಲಾಗಿದೆ. ಇದು ನವೆಂಬರ್ ಕ್ರಾಂತಿಯ ಮುನ್ಸೂಚನೆಯೇ? ಎಂದು ಕೇಳಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಎಲ್ಲರೂ ದೆಹಲಿ ದಂಡಯಾತ್ರೆಯಲ್ಲಿ ಮುಳುಗಿದ್ದಾರೆ. ರಾಜ್ಯವು ಅಭಿವೃದ್ಧಿಯಲ್ಲಿ 10 ವರ್ಷಗಳಷ್ಟು ಹಿಂದಕ್ಕೆ ಸರಿದಿದೆ. ಸರ್ಕಾರಕ್ಕೆ ಸರ್ಕಾರವೇ ಕುರ್ಚಿ ಜಗಳದಲ್ಲಿ ಮುಳುಗಿಸುವಂತೆ ಮಾಡಿದ ಕಾಂಗ್ರೆಸ್ ಹೈಕಮಾಂಡ್ ನಡೆ ಖಂಡನೀಯ. ಬಹುಮತಗಳಿದ್ದರೂ ರಾಜ್ಯಕ್ಕೊಬ್ಬ ಪರ್ಮನೆಂಟ್ ಮುಖ್ಯಮಂತ್ರಿಯನ್ನು ನೇಮಿಸಲಾಗದಷ್ಟು ಕಾಂಗ್ರೆಸ್ ಅಸಹಾಯಕರಾಗಿರುವುದು ದುರಂತವೇ ಸರಿ ಎಂದು ವ್ಯಂಗ್ಯ ಮಾಡಿದೆ.












Click it and Unblock the Notifications