ಸೋಮವಾರವೇ ವಿಶ್ವಾಸಮತಯಾಚನೆಗೆ ಬಿಜೆಪಿ ಒತ್ತಡ
ಬೆಂಗಳೂರು, ಜುಲೈ 14 : 'ಸೋಮವಾರ ಎಚ್. ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲಿ ಅಥವ ಅವರು ಹೇಳಿದಂತೆ ವಿಶ್ವಾಸಮತಯಾಚನೆ ಮಾಡಲಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಪ್ರತಿಪಕ್ಷ ಬಿಜೆಪಿ ಸೋಮವಾರ ವಿಧಾನಸಭೆಯಲ್ಲಿ ಹೋರಾಟ ಮಾಡಲಿದೆ ಎಂಬ ಸುಳಿವು ನೀಡಿದರು. ವಿಶ್ವಾಸಮತಯಾಚನೆ ಬಳಿಕ ಮುಂದಿನ ಕಲಾಪ ನಡೆಸುವಂತೆ ಒತ್ತಾಯಿಸುವ ನಿರೀಕ್ಷೆ ಇದೆ.
'ಕಾಂಗ್ರೆಸ್‌ನವರು ಎಂ.ಟಿ.ಬಿ.ನಾಗರಾಜ್ ಮತ್ತು ಡಾ.ಕೆ.ಸುಧಾಕರ್ ಮನವೊಲಿಸಲು ಪ್ರಯತ್ನ ನಡೆಸಿದರು. ಆದರೆ, ಅವರಿಬ್ಬರು ನಿಮ್ಮ ಜೊತೆ ಇರಲ್ಲ ಎಂದು ಹೋದರು. ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿದೆ' ಎಂದು ಯಡಿಯೂರಪ್ಪ ತಿಳಿಸಿದರು.

'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಹೋದ ಶಾಸಕರನ್ನು ತಡೆದು ನಿಲ್ಲಿಸಲು ಸಾಧ್ಯವಾಗದ ಮುಖ್ಯಮಂತ್ರಿಗಳು ಈಗ ಬಹುಮತ ಸಾಬೀತು ಮಾಡಲು ಸಮಯ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾತಿನಲ್ಲಿ ರಾಜಕೀಯ ಪಿತೂರಿ ವಾಸನೆ ಬೀಸುತ್ತಿದೆ' ಎಂದು ದೂರಿದರು.
'ಸೋಮವಾರ ನಡೆಯುವ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಸೋಮವಾರವೇ ವಿಶ್ವಾಸಮತಯಾಚನೆಗೆ ಸಮಯಕೊಡಿ ಎಂದು ಸ್ಪೀಕರ್ ರಮೇಶ್ ಕುಮಾರ್‌ಗೆ ಮನವಿ ಮಾಡುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.
'ಮೈತ್ರಿ ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವಿಲ್ಲ' ಎಂದು ಯಡಿಯೂರಪ್ಪ ತಿಳಿಸಿದರು.












Click it and Unblock the Notifications