ವಿಜಯೇಂದ್ರಗೆ ಹೈಕಮಾಂಡ್‌ನಿಂದ ಭಾರಿ ಮುಖಭಂಗ, ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸೂಚನೆ?
ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿ.ವೈ.ವಿಜಯೇಂದ್ರ ಅವರಿಗೆ ಭಾರಿ ಮುಖಭಂಗವಾಗಿದೆ. ಸ್ಪಪಕ್ಷ ನಾಯಕರಿಂದಲೇ ವಿರೋಧಕ್ಕೆ ಗುರಿಯಾಗಿದ್ದ ವಿಜಯೇಂದ್ರ ಅವರಿಗೆ ಹೈಕಮಾಂಡ್‌ನಿಂದ ಮಹತ್ವದ ಸೂಚನೆ ಬಂದಿದೆ. ರಾಜ್ಯ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವಿಜಯೇಂದ್ರ ಅವರ ನಿರ್ಧಾರವನ್ನು ಉಳಿದ ನಾಯಕರು ಖಂಡಿಸಿದ್ದರು. ಇದೀಗ ಹೈಕಮಾಂಡ್ ಕೂಡ ಈ ವಿಚಾರಕ್ಕೆ ಎಂಟ್ರಿ ನೀಡಿದೆ.
ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ವಿಜಯೇಂದ್ರ ಅವರು ತಮಗೆ ಬೇಕಾದಂತೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸ್ಪಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದರು. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರವಾಗಿಯೂ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಆಕ್ರೋಶದಿಂದ ಮಾತನಾಡಿದ್ದರು. ಈ ಬಗ್ಗೆ ಹೈಕಮಾಂಡ್ ನಾಯಕರಿಗೆ ದೂರು ಕೊಡುವುದಾಗಿ ಹೇಳಿದ್ದರು.

ಅದರಂತೆ ಸುಧಾಕರ್ ಅವರು ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ವಿರುದ್ಧ ದೂರಿನ ಸರಮಾಲೆ ಬಿಚ್ಚಿಟ್ಟಿದ್ದು, ಸದ್ಯ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯ್ಕೆಯನ್ನು ತಡೆಹಿಡಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದೀಪ್ ರೆಡ್ಡಿ ಅವರ ನೇಮಕವನ್ನು ತಕ್ಷಣವೇ ತಡೆ ಹಿಡಿಯುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿ.ವೈ.ವಿಜಯೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕೇವಲ ಜಿಲ್ಲಾಧ್ಯಕ್ಷ ಸ್ಥಾನ ಮಾತ್ರವಲ್ಲದೆ ಸದ್ಯ ನಡೆಯಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ವೋಟ್ ಮಾಡುವುದಕ್ಕೂ ಸಂದೀಪ್ ರೆಡ್ಡಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಮೇರೆಗೆ ಮುಂದಿನ ಮಾಹಿತಿ ನೀಡುವತನಕ ಜಿಲ್ಲಾಧ್ಯಕ್ಷರ ಆಯ್ಕೆ ತಡೆ ಹಿಡಿಯುವಂತೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಪತ್ರದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ. ಇದು ವಿಜಯೇಂದ್ರ ಅವರಿಗೆ ಭಾರಿ ಮುಖಭಂಗ ಉಂಟುಮಾಡಿದೆ.

ಕಳೆದ ವಾರದಲ್ಲಿ ರಾಜ್ಯ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕವಾಗಿತ್ತು. ಈ ವಿಚಾರದಲ್ಲಿ ವಿಜಯೇಂದ್ರ ಅವರು ಜಿಲ್ಲೆಯ ನಾಯಕರ ಅಭಿಪ್ರಾಯ ಪಡೆಯದೆ ತಮಗೆ ಬೇಕಾದವರಿಗೆ ಮಾತ್ರ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಹಲವು ನಾಯಕರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಸಂಸದ ಡಾ.ಕೆ.ಸುಧಾಕರ್ ಅವರು ವಿಜಯೇಂದ್ರ ಅವರ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಅವರನ್ನು ಕೂಡಲೇ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದರು. ನಿಮ್ಮ ನೇತೃತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದೇ ಒಂದು ಸೀಟ್ ಗೆಲ್ಲಿ ನೋಡೋಣ ಎಂದೂ ಸವಾಲು ಹಾಕಿದ್ದರು.
ವಿಜಯೇಂದ್ರ ಯಾರನ್ನೂ ವಿಶ್ವಾಸಕ್ಕೆ ತೆಗದುಕೊಳ್ಳಲ್ಲ. ಅವರ ಬಳಿ ಸಾವಿರಾರು ಕೋಟಿ ಹಣ ಇರಬಹುದು. ಅವರ ಹಿಂಬಾಲಕರು ನನ್ನ ಸೋಲಿಸಲು ಭಾರಿ ಪ್ರಯತ್ನ ಪಟ್ಟರು. ಜಿಲ್ಲಾಧ್ಯಕ್ಷರ ವಿಚಾರವಾಗಿ ಅವರು ಸೌಜನ್ಯಕ್ಕೂ ನನ್ನ ಜೊತೆ ಒಮ್ಮೆ ಚರ್ಚಿಸಿಲ್ಲ. ಫೋನ್ ಮಾಡಿದರೂ ಸ್ಪಂದಿಸಲ್ಲ. ನಮ್ಮನ್ನು ತುಳಿಯಲು, ಸಮಾಧಿ ಮಾಡಲು ಹೊರಟಿದ್ದೀರಾ? ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ ವಿಜಯೇಂದ್ರ ಅವರನ್ನು ಕೆಳಗಿಳಿಸುವಂತೆ ಹೈಕಮಾಂಡ್ ನಾಯಕರಿಗೆ ತಿಳಿಸುತ್ತೇನೆ ಎಂದಿದ್ದ ಸುಧಾಕರ್ ಅವರು ದೂರು ಕೊಟ್ಟಿದ್ದರು. ಅದರಂತೆ ಹೈಕಮಾಂಡ್ ಸುಧಾಕರ್ ಅವರ ಪರ ನಿಲುವು ತಾಳಿದ್ದು, ವಿಜಯೇಂದ್ರ ಅವರಿಗೆ ಖಡಕ್ ಸೂಚನೆ ಕೊಟ್ಟಿದೆ.
ಸದ್ಯ ವಿಜಯೇಂದ್ರ ಅವರ ವಿರುದ್ಧ ಸ್ವಪಕ್ಷ ನಾಯಕರೇ ಗಂಭೀರ ಆರೋಪಗಳನ್ನು ಮಾಡಿ, ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ಸುಧಾಕರ್ ಅವರ ಮಾತಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿರುವುದು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸೂಚನೆ ಇರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಗರಿಗೆದರಿವೆ.












Click it and Unblock the Notifications